ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ -2025ರ ಸಮಾರೋಪದಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಮಾತನಾಡಿದರು.
ಜಿಲ್ಲೆಯ 94 ಶಾಲೆಗಳಲ್ಲಿ 41 ಗುರುಗಳಿಂದ 3000 ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ
ಉಡುಪಿ: ಯಕ್ಷಗಾನ ಕಲೆ, ಕಲಾವಿದರ ಹಿತದೃಷ್ಟಿಯಿಂದ ಉಡುಪಿಯ ಯಕ್ಷಗಾನ ಕಲಾರಂಗ ನಡೆಸುತ್ತಿರುವ ನಿಸ್ವಾರ್ಥ ಸೇವೆ ಇತರ ಕ್ಷೇತ್ರಗಳಿಗೆ ಮಾದರಿಯಾಗಿದೆ ಎಂದು ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಿಶೋರ ಯಕ್ಷಗಾನ ಸಂಭ್ರಮ -2025ರ ಸಮಾರೋಪದಲ್ಲಿ ಮಾತನಾಡಿದರು.ಉಡುಪಿಯ ಅಷ್ಟ ಮಠಗಳು ಕಲಾಪೋಷಣೆಯನ್ನು ನಿರಂತರ ನಡೆಸಿಕೊಂಡು ಬಂದಿವೆ. ಶಿಕ್ಷಣ, ಧರ್ಮ, ಕಲೆ, ಸೇವೆಗೆ ಉಡುಪಿ ಪ್ರಖ್ಯಾತಿ ಪಡೆದಿದೆ. ಈಗ ಯಕ್ಷಶಿಕ್ಷಣ ಮೂಲಕ ಯಕ್ಷಗಾನ ಕಲಾರಂಗ ಈ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ. ಶ್ರೀಕೃಷ್ಣನ ಫಲಾಪೇಕ್ಷರಹಿತ ಸೇವೆಯ ಗೀತಾ ಸಂದೇಶದoತೆ ಸಮಾಜ ಮತ್ತು ಕಲೆಯ ಸೇವೆಗೈದ ಯಕ್ಷಗಾನ ಕಲಾರಂಗ ಇನ್ನಷ್ಟು ಬೆಳೆಯಲಿ ಎಂದು ಅವರು ಹಾರೈಸಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ, ತಾನು ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಅಂದಿನ ಶಾಸಕರಾಗಿದ್ದ ರಘುಪತಿ ಭಟ್ ಅವರಿಂದ ಆರಂಭಗೊoಡ ಈ ಯಕ್ಷಶಿಕ್ಷಣ ಇಂದು ಹೆಮ್ಮರವಾಗಿ ಬೆಳೆದಿದ್ದು, 3000ಕ್ಕೂ ಅಧಿಕ ಮಕ್ಕಳು ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಯಕ್ಷ ಶಿಕ್ಷಣದ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ ನಡೆದಿದೆ. ಸಭಾಕಂಪನ ಇಲ್ಲದೆ ನಿರರ್ಗಳ ಶುದ್ಧ ಕನ್ನಡ ಭಾಷೆ, ಅಭಿನಯ, ನಾಟ್ಯ ಹೀಗೆ ಎಲ್ಲದರಲ್ಲೂ ಈ ಮಕ್ಕಳು ಸೈ ಎನಿಸಿಕೊಂಡಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಗೆ ಭವ್ಯ ಭವಿಷ್ಯವನ್ನು ಬರೆದಿರುವ ಯಕ್ಷ ಶಿಕ್ಷಣ ನಮ್ಮ ರಾಜ್ಯಕ್ಕೆ ಹೆಮ್ಮೆ ಎಂದು ಅವರು ಅಭಿಪ್ರಾಯಪಟ್ಟರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು ಉಪಸ್ಥಿತರಿದ್ದರು. ಹಿರಿಯ ವಿದ್ವಾಂಸ, ವಿಮರ್ಶಕ ಡಾ. ಪ್ರಭಾಕರ ಜೋಶಿ ಮಾತನಾಡಿದರು. ದಾನಿ ಯು. ವಿಶ್ವನಾಥ ಶೆಣೈ, ಕಲಾರಂಗದ ಕಾರ್‍ಯಕಾರಿ ಸಮಿತಿ ಸದಸ್ಯ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.ಈ ಸಂದರ್ಭ ಯಕ್ಷಗಾನ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳಾದ ಕೃತಿ, ಸಮರ್ಥ, ಅಮೋಘ, ಪ್ರಾರ್ಥನಾ, ಸಾನ್ವಿ ಬಲ್ಲಾಳ, ದಿಷಿತಾ, ಬಿಂದು, ಮಣಿಕಂಠ, ಅವನಿ ಪಡುಕೋಣೆ, ಹರ್ಷಿತಾ, ಮನೋಜ್, ಅಮೃತಾ ಮತ್ತಿತರರು ತಮ್ಮ ಅನುಭವಗಳನ್ನು ಹಂಚಿಕೊoಡರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್‍ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.