ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ 30 ಮೊಬೈಲ್‌ಗಳು ಸೇರಿದಂತೆ ಕೆಲವು ನಿಷೇಧಿತ ವಸ್ತುಗಳನ್ನು ಕಾರಾಗೃಹದ ಅಧಿಕಾರಿಗಳು ಗುರುವಾರ ರಾತ್ರಿ ಜಪ್ತಿ ಮಾಡಿದ್ದಾರೆ. ಕಾರಾಗೃಹದಲ್ಲಿ ರಾತ್ರಿ 12 ಗಂಟೆಗೆ ಸುಮಾರಿಗೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದಾರೆ.
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೆ 30 ಮೊಬೈಲ್‌ಗಳು ಸೇರಿದಂತೆ ಕೆಲವು ನಿಷೇಧಿತ ವಸ್ತುಗಳನ್ನು ಕಾರಾಗೃಹದ ಅಧಿಕಾರಿಗಳು ಗುರುವಾರ ರಾತ್ರಿ ಜಪ್ತಿ ಮಾಡಿದ್ದಾರೆ.
ಕಾರಾಗೃಹದಲ್ಲಿ ರಾತ್ರಿ 12 ಗಂಟೆಗೆ ಸುಮಾರಿಗೆ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದಾರೆ. ಈ ವೇಳೆ 30 ಮೊಬೈಲ್‌ಗಳು, 25 ಸಿಮ್‌ಗಳು, 7 ಚಾರ್ಜರ್‌ಗಳು ಹಾಗೂ 2 ಹಿಯರ್ ಪೋನ್‌ಗಳು ಜಪ್ತಿಯಾಗಿವೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಕಾರಾಗೃಹದ ಅಧೀಕ್ಷಕರು ತಿಳಿಸಿದ್ದಾರೆ.
ಕಾರಾಗೃಹ ಸುಧಾರಣಾ ಸಂಕಲ್ಪ ಅಭಿಯಾನ
ಕಳೆದ ಮೂರು ವಾರಗಳಿಂದ ಕಾರಾಗೃಹ ಸುಧಾರಣಾ ಸಂಕಲ್ಪ ಅಭಿಯಾನದಡಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ವೇಳೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸುತ್ತಿದ್ದರು. ಈ ವೇಳೆ ಮೊಬೈಲ್‌ಗಳು, ಸಿಮ್ ಹಾಗೂ ಚಾಕುಗಳು ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಇದುವರೆಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರತ್ಯೇಕವಾಗಿ 10 ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
35 ಸಾವಿರ ನಗದು ಬಹುಮಾನ
ಕಾರಾಗೃಹದಲ್ಲಿ ಗುರುವಾರ ರಾತ್ರಿ ಯಶಸ್ವಿ ಕಾರ್ಯಾಚರಣೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ 35 ಸಾವಿರ ರು. ನಗದು ಬಹುಮಾನವನ್ನು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಪ್ರಕಟಿಸಿದ್ದಾರೆ.
