ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸರ್ಕಾರದ ಆದೇಶದ ಬೆನ್ನಲ್ಲೇ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅಂಶುಕುಮಾರ್ ಮಂಗಳವಾರ ಅಧಿಕಾರ ಸ್ವೀಕರಿಸಿದರು.ಸಂಜೆ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ತೆರಳಿ ಅಂಶುಕುಮಾರ್ ಅವರು ಹೊಸ ಹುದ್ದೆ ಅಲಂಕರಿಸಿದ್ದಾರೆ. ಇದಕ್ಕೂ ಮುನ್ನ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಇಲಾಖೆ ಮುಖ್ಯಸ್ಥ ಬಿ.ದಯಾನಂದ್ ಅವರನ್ನು ಭೇಟಿಯಾಗಿ ಚರ್ಚಿಸಿದರು. ಇದೇ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಿರ್ಗಮಿತ ಮುಖ್ಯಸ್ಥ ಕೆ.ಸುರೇಶ್ ಅವರ ಜತೆ ಸಮಾಲೋಚಿಸಿ ಅಂಶಕುಮಾರ್ ಮಾಹಿತಿ ಪಡೆದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ ಪ್ರಕರಣ ಹಿನ್ನೆಲೆಯಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರನ್ನು ಸರ್ಕಾರ ನೇಮಿಸಿತ್ತು. ಆ ಹುದ್ದೆಯಲ್ಲಿದ್ದ ಸುರೇಶ್ ಅವರನ್ನು ವರ್ಗಾವಣೆಗೊಳಿಸಿತ್ತು. ಕಾರಾಗೃಹ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆಡಳಿತ ವಿಭಾಗದ ಎಸ್ಪಿ ಆಗಿದ್ದ ಅಂಶಕುಮಾರ್ ಅವರಿಗೆ ಹೊಸ ಜವಾಬ್ದಾರಿಯನ್ನು ಸರ್ಕಾರ ವಹಿಸಿದೆ. ಇನ್ನು ಕೇಂದ್ರ ಕಚೇರಿಯ ಆಡಳಿತ ವಿಭಾಗದ ಎಸ್ಪಿಯಾಗಿ ಪ್ರಭಾರಿಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.-ಬಾಕ್ಸ್-
ನಾನ್ ಐಪಿಎಸ್‌ಗೆ ಐಪಿಎಸ್ ವರದಿ..!ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ನೇಮಕ ಬೆನ್ನಲ್ಲೇ ಕಾರಾಗೃಹದ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಣೆ ಸಂಬಂಧ ತಾಂತ್ರಿಕ ಸಮಸ್ಯೆ ಎದುರಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಬಂದೀಖಾನೆಯ ಮುಖ್ಯಸ್ಥ ಹುದ್ದೆಗೆ ಕಾರಾಗೃಹ ಇಲಾಖೆ ವೃಂಧದ ಎಸ್ಪಿ ದರ್ಜೆ ಅಧಿಕಾರಿಗಳು ನೇಮಕವಾಗುತ್ತಿದ್ದರು. ಕಾರಾಗೃಹ ಇಲಾಖೆಯ ದಕ್ಷಿಣ ವಲಯ ಡಿಐಜಿ ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ವರದಿ ಮಾಡಿಕೊಳ್ಳುತ್ತಿದ್ದರು. ಈ ಎರಡು ಹುದ್ದೆಗಳು ನಾನ್ ಐಪಿಎಸ್ ಆಗಿದ್ದವು. ಆದರೀಗ ನಾನ್ ಐಪಿಎಸ್ ಅಧಿಕಾರಿಯಾದ ಕಾರಾಗೃಹದ ಡಿಐಜಿ ಅವರಿಗೆ ಐಪಿಎಸ್ ಅಧಿಕಾರಿ ಅಂಶಕುಮಾರ್ ವರದಿ ಮಾಡಿಕೊಳ್ಳಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಅಲ್ಲದೆ, ಇದೇ ರೀತಿಯ ಕೆಲ ಆಡಳಿತಾತ್ಮಕ ವಿಚಾರಗಳಲ್ಲಿ ಅಸ್ಪಷ್ಟತೆ ಮೂಡಿದೆ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ಬಳಿಕ ನಿವಾರಣೆಯಾಗಲಿದೆ ಎಂದು ಮೂಲಗಳು ಹೇಳಿವೆ.ಐಪಿಎಸ್‌ಗೆ ತಾತ್ಕಾಲಿಕ ಅಧಿಕಾರ?:
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲ್ ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿಯನ್ನು ತಾತ್ಕಾಲಿಕ ಅವಧಿಗೆ ಸರ್ಕಾರ ನೇಮಿಸಿದೆ ಎಂಬ ಮಾತುಗಳು ಕೇಳಿ ಬಂದಿವೆ.ಪ್ರಸುತ್ತ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಿಕೆ ವಿಚಾರ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಈ ವಿವಾದ ತಣ್ಣಾಗಿಸುವ ಸಲುವಾಗಿ ಐಪಿಎಸ್ ಅಧಿಕಾರಿ ನೇಮಕವಾಗಿದ್ದು, ಮುಂದಿನ ದಿನಗಳಲ್ಲಿ ಕಾರಾಗೃಹ ಕೇಡರ್ ಅಧಿಕಾರಿಗೆ ಅಧಿಕಾರ ಸಿಗಲಿದೆ ಎಂದು ತಿಳಿದು ಬಂದಿದೆ.
;Resize=(128,128))
;Resize=(128,128))
;Resize=(128,128))