ಎನ್.ಆರ್.ಎಲ್.ಎಂ ಯೋಜನೆಗೆ ಹೆಚ್ಚು ಒತ್ತು ನೀಡಬೇಕು

KannadaprabhaNewsNetwork |  
Published : Nov 07, 2024, 12:40 AM ISTUpdated : Nov 07, 2024, 12:41 AM IST
29 | Kannada Prabha

ಸಾರಾಂಶ

ವಿವಿಧ ಯೋಜನೆಗಳ ಒಗ್ಗೂಡಿಸುವಿಕೆಯೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಒತ್ತು ನೀಡಿ

ಕನ್ನಡಪ್ರಭ ವಾರ್ತೆ ಮೈಸೂರುಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಎನ್.ಆರ್.ಎಲ್.ಎಂ ಯೋಜನೆ ಸಹಕಾರಿಯಾಗಿದ್ದು, ಗ್ರಾಪಂಗಳು ಈ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ತಿಳಿಸಿದರು.ಬುಧವಾರ ಪಿರಿಯಾಪಟ್ಟಣ ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಗ್ರಾಪಂ ಮಟ್ಟದಲ್ಲಿ ನಡೆಸುವ ಮಾಸಿಕ ಸಂತೆಯಲ್ಲಿ ಎನ್.ಆರ್.ಎಲ್.ಎಂ ಯೋಜನೆ ಮೂಲಕ ಸ್ಥಳೀಯ ಪದಾರ್ಥಗಳ ಮಾರುಕಟ್ಟೆಗೆ ಅವಕಾಶ ನೀಡಬೇಕು. ಗ್ರಾಪಂಗಳು ಈ ನಿಟ್ಟಿನಲ್ಲಿ ಮುಂದುವರೆದರೆ ಜಿಲ್ಲಾ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಬೆಟ್ಟದಪುರ ಗ್ರಾಪಂನಲ್ಲಿ ಸ್ವ- ಸಹಾಯ ಸಂಘದ ಮಹಿಳೆಯರು ಈ ಯೋಜನೆಯಡಿ ಆರ್ಥಿಕ ನೆರವು ಪಡೆದು ಬಟ್ಟೆ ಬ್ಯಾಗ್ ಸಿದ್ಧಪಡಿಸುತ್ತಿದ್ದು, ಆರ್ಥಿಕವಾಗಿ ಲಾಭಗಳಿಸುತ್ತಿದ್ದಾರೆ. ಉಳಿದ ಗ್ರಾಪಂನವರು ಈ ಕಡೆ ಗಮನಹರಿಸಬೇಕು. ಈ ಯೋಜನೆ ಅಳವಡಿಕೆಗೆ ಕೃಷಿ ಸಖಿ, ಪಶು ಸಖಿಗಳನ್ನು ಬಳಸಿಕೊಳ್ಳಬೇಕು. ವಿವಿಧ ಯೋಜನೆಗಳ ಒಗ್ಗೂಡಿಸುವಿಕೆಯೊಂದಿಗೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಒತ್ತು ನೀಡಿ ಎಂದು ಪಿಡಿಒಗಳಿಗೆ ಸಲಹೆ ನೀಡಿದರು.

ನರೇಗಾ ಯೋಜನೆಯಡಿ ನಿಗಧಿತ ಗುರಿ ಸಾಧಿಸದ ಗ್ರಾಪಂಗಳಲ್ಲಿ ಐಇಸಿ ಚಟುವಟಿಕೆ ಹೆಚ್ಚಾಗಿ ನಡೆಸಿ ಜಾಗೃತಿ ಮೂಡಿಸುವ ಮೂಲಕ ಜನರು ಹೆಚ್ಚಿನದಾಗಿ ನರೇಗಾ ಕೆಲಸದಲ್ಲಿ ಭಾಗವಹಿಸುವಂತೆ ತಿಳಿಸಿದರು.

ಈಗಾಗಲೇ ಸಂಜೀವಿನಿ ಶೆಡ್ ನಿರ್ಮಾಣಕ್ಕೆ ಜಾಗ ಗುರುತಿಸಿರುವ ಪಂಚಾಯಿತಿಗಳಲ್ಲಿ ಕೂಡಲೇ ಕಾಮಗಾರಿ ಆರಂಭಿಸಿ ಹಾಗೂ ಪ್ರಗತಿಯಲ್ಲಿರುವ ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ ಕಾಮಗಾರಿ ಪೂರ್ಣಗೊಳಿಸುವಂತೆ ಹೇಳಿದರು.

ಉಳಿದಂತೆ ಘನತ್ಯಾಜ್ಯ ವಿಲೇವಾರಿ ಘಟಕ, ಜೆಜೆಎಂ, ತೆರಿಗೆ ವಸೂಲಿ ಸಮಸ್ಯೆ ಆಲಿಸಿದರು. ಗ್ರಾಪಂಗಳು ಸ್ಥಳೀಯ ಸರ್ಕಾರಗಳಾಗಿದ್ದು, ಸ್ಥಳೀಯವಾಗಿ ಅಭಿವೃದ್ಧಿಪಡಿಸುವುದು ಪಿಡಿಓಗಳ ಕರ್ತವ್ಯ. ಕಾನೂನು ವ್ಯಾಪ್ತಿಯಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆದ್ಯತೆಯ ಮೇರೆಗೆ ಕೆಲಸ ಮಾಡಿ. ಎಲ್ಲಾ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಿ ಎಂದು ಅವರು ಸಲಹೆ ನೀಡಿದರು.

ಜಿಪಂ ಯೋಜನಾಧಿಕಾರಿ ಪ್ರಭುಸ್ವಾಮಿ ಮಾತನಾಡಿ, ಎನ್.ಆರ್.ಎಲ್.ಎಂ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಸಹಕಾರಿಯಾಗಿದ್ದು, ಪಿಡಿಒಗಳು ಎಂಬಿಕೆಗಳು, ಪಶುಸಖಿ, ಕೃಷಿಸಖಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಯೋಜನೆ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಗ್ರಾಮೀಣ ಪ್ರದೇಶದ ಹಣ್ಣುಗಳು, ಸೊಪ್ಪು, ಧಾನ್ಯ ಪದಾರ್ಥಗಳಿಗೆ ವಿಶೇಷ ಬೇಡಿಕೆ ಹಾಗೂ ಉತ್ತಮ ಬೆಲೆಯಿದ್ದು, ಅದನ್ನು ಒದಗಿಸುವ ಕಾರ್ಯವಾಗಬೇಕು. ಎನ್.ಆರ್.ಎಲ್.ಎಂ ಯೋಜನೆಯಡಿ ಸ್ವ-ಸಹಾಯ ಸಂಘದ ಮಹಿಳೆಯರು 20 ಲಕ್ಷದವರೆಗೆ ಸಾಲ ಪಡೆದುಕೊಳ್ಳಲು ಅವಕಾಶವಿದ್ದು, ಮಹಿಳೆಯರು ಈ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಈ ವೇಳೆ ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ. ಸುನಿಲ್ ಕುಮಾರ್, ಪಿಆರ್ಇಡಿ ಎಇಇ ಮಲ್ಲಿಕಾರ್ಜುನಸ್ವಾಮಿ, ಆರ್.ಡಬ್ಲ್ಯೂಎಸ್ ಎಇಇ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ (ಗ್ರಾ.ಉ) ಕರುಣಾಕರ್, ಲೆಕ್ಕಾಧಿಕಾರಿ ರಂಗನಾಥ್ ಹಾಗೂ 34 ಗ್ರಾಪಂ ಪಿಡಿಒಗಳು, ನರೇಗಾ ಹಾಗೂ ಎನ್.ಆರ್.ಎಲ್.ಎಂ ಸಿಬ್ಬಂದಿ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ