- ಬಂದ್‌ಗೆ ಕನ್ನಡಪರ ಸಂಘಟನೆಗಳ ಮಿಶ್ರ ಪ್ರತಿಕ್ರಿಯೆ ।
ಎಂಇಎಸ್ ಸಂಘಟನೆ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಬಂದ್‌ಗೆ ದಾವಣಗೆರೆ ನಗರ, ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಂದ್ ಬದಲು ಅಂದು ಸಾಂಕೇತಿಕ ಪ್ರತಿಭಟನೆ ನಡೆಸುವುದಕ್ಕೆ ಬಹುತೇಕ ಸಂಘಟನೆಗಳು ಮುಂದಾಗಿವೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ, ಸಾ.ರಾ.ಗೋವಿಂದು ಮತ್ತಿತರೆ ಕನ್ನಡಪರ ಸಂಘಟನೆಗಳು ಕರ್ನಾಟಕದ ಬಸ್ ನಿರ್ವಾಹಕರ ಮೇಲೆ ಮಹಾರಾಷ್ಟ್ರದ ಎಂಇಎಸ್ ಮತ್ತು ಮರಾಠ ಪುಂಡರ ದಾಳಿ, ಹಲ್ಲೆ, ದೌರ್ಜನ್ಯ ಖಂಡಿಸಿ, ಎಂಇಎಸ್ ನಿಷೇಧಿಸುವಂತೆ ಒತ್ತಾಯಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ಜಿಲ್ಲಾ ಕೇಂದ್ರದಲ್ಲಿ ಕೆಲ ಸಂಘಟನೆಗಳು ಬೆಂಬಲ ಸೂಚಿಸಿದ್ದರೂ, ಬಹುತೇಕ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿಲ್ಲ. ಬದಲಿಗೆ ಸಾಂಕೇತಿಕ ಹೋರಾಟ ನಡೆಸಿ, ಎಸಿ ಕಚೇರಿ, ತಹಸೀಲ್ದಾರ್ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿವೆ.ರಾಜ್ಯಾದ್ಯಂತ ಮಾ.21ರ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಶುರುವಾಗಿದೆ. ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಪರೀಕ್ಷೆಗಳು ನಡೆಯುತ್ತಿವೆ. ಪರೀಕ್ಷಾ ಸಂದರ್ಭದಲ್ಲಿ ಬಂದ್ ಮಾಡುವುದು ರಾಜ್ಯ, ರಾಷ್ಟ್ರದ ಭವಿಷ್ಯವಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ. ಯಾರಿಗೂ ತೊಂದರೆ ಆಗದಂತೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ವ್ಯಾಪಾರ ವಹಿವಾಟು, ಜನರ ದೈನಂದಿನ ಜೀವನಕ್ಕೆ ತೊಂದರೆಯಾಗದಂತೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಆಡಳಿತ, ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸುವುದಾಗಿ ಬಹುತೇಕ ಸಂಘಟನೆಗಳು ತಿಳಿಸಿವೆ.
- - - (ಸಾಂದರ್ಭಿಕ ಚಿತ್ರ)