ಗದಗ: ತಾಯಿ ಪ್ರೀತಿಗೆ ಬೆಲೆ ಕಟ್ಟಲಾಗದು. ಪ್ರತಿಯೊಬ್ಬರೂ ತಂದೆ- ತಾಯಿಯನ್ನು ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ನಗರದ ಹೊರವಲಯದಲ್ಲಿ ಗ್ರಾಮ ಗಂಗೋತ್ರಿ ಆವರಣದಲ್ಲಿರುವ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಕೌಶಲ್ಯ ವಿಕಾಸ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಲ್ಲಿ ಅವ್ವ ಸೇವಾ ಟ್ರಸ್ಟ್ ಮಾತೋಶ್ರೀ ಗಂಗವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ರಾಜ್ಯ ಮಟ್ಟದಲ್ಲಿ ಮಹಿಳಾ ಪತ್ರಕರ್ತರಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿಸಿರುವ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ಪತ್ರಿಕೋದ್ಯಮದ ಪಾತ್ರ ಕುರಿತು ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.ಪತ್ರಕರ್ತರು ಪತ್ರಿಕೆಗಳ ಮೂಲಕ ಸಮಾಜದಲ್ಲಿ ಪರಿಣಾಮ ಬೀರುತ್ತಾರೆ. ಹೀಗಾಗಿ ಪತ್ರಿಕೆಗಳ ವರದಿ, ಮಾಹಿತಿ ಹಾಗೂ ಸಮಾಜದಲ್ಲಿ ಅತ್ಯುತ್ತಮ ಸೇವೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ. ಇದಕ್ಕೊಂದು ಪ್ರತ್ಯೇಕ ಸಮಿತಿ ರಚಿಸಿದ್ದೇವೆ. ನಮ್ಮ ತಾಯಿಯ ಸ್ಮರಣೆಯ ಹಿನ್ನೆಲೆಯಲ್ಲಿ ಪ್ರತಿವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಮಾತನಾಡಿ, ಅವ್ವನ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಎಷ್ಟೇ ದೊಡ್ಡ ಸ್ಥಾನಕ್ಕೇರಲಿ, ತಾಯಿಗಿಂತ ದೊಡ್ಡದು ಯಾವುದೂ ಇಲ್ಲ. ಅವ್ವ ನಮ್ಮೆಲ್ಲರ ಸಾಧನೆ, ಯಶಸ್ಸಿಗೆ ಸ್ಫೂರ್ತಿ ಎಂದರು.
ಆ ಕುರಿತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಳ್ಳುವುದನ್ನು ನೀವೂ ಗಮನಿಸುತ್ತೀರಿ. ಕಲುಷಿತ ನೀರು ಕುಡಿದು ಸಾವಿಗೀಡಾದ ವರದಿಗಳು ಸರ್ಕಾರವನ್ನು ಎಚ್ಚರಿಸಿವೆ. ಬೆಳೆರೋಗದ ಬಗ್ಗೆ ಬಂದ ವರದಿಗಳು ಸಾವಿರಾರು ರೈತ ಕುಟುಂಬಗಳಿಗೆ ಪರಿಹಾರ ಒದಗಿಸಲು ನೆರವಾಗಿವೆ. ಪತ್ರಕರ್ತರು, ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹಳ್ಳಿಗಳಿಗೆ ಹೋಗಿ ಜನರ ಸಂಕಷ್ಟಗಳನ್ನು ಆಲಿಸುವುದು, ಸ್ಟುಡಿಯೋಗಳಲ್ಲಿ ಕುಳಿತು ಚರ್ಚೆ ಮಾಡುವುದಕ್ಕಿಂತ ಹಚ್ಚು ಉಪಯುಕ್ತ ಎನ್ನುವುದನ್ನು ಅರಿಯಬೇಕಿದೆ ಎಂದರು.ಕಕಾಪಸಂ ಜಿಲ್ಲಾಧ್ಯಕ್ಷ ರಾಜು ಎಂ. ಹೆಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ದತ್ತಿ ನಿಧಿಯ 2025- 26ನೇ ಸಾಲಿನ ಪ್ರಶಸ್ತಿಯನ್ನು ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕಿ ತನುಜಾ ನಾಯಕ ಅವರಿಗೆ ನೀಡಿ ಗೌರವಿಸಲಾಯಿತು.ವಿವಿ ಕುಲಪತಿ(ಪ್ರ.) ಪ್ರೊ. ಸುರೇಶ ನಾಡಗೌಡರ, ಕಕಾಪಸಂ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ಅವ್ವ ಸೇವಾ ಟ್ರಸ್ಟ್ ಜಿಲ್ಲಾ ಸಂಚಾಲಕ ಬಸವರಾಜ ಧಾರವಾಡ, ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರು, ಅರುಣಕುಮಾರ ಹಿರೇಮಠ, ಶರಣು ದೊಡ್ಡೂರ ಸೇರಿದಂತೆ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಪತ್ರಕರ್ತರು, ವಿದ್ಯಾರ್ಥಿಗಳು ಇದ್ದರು.