ಧಾರವಾಡ:
ಮಹಾನಗರ ಪಾಲಿಕೆ ಸಿಬ್ಬಂದಿ ಜೆಸಿಬಿ ಮೂಲಕ ಕಸಾಯಿ ಖಾನೆ ತೆರವು ಮಾಡಲು ಬಂದ ವೇಳೆ, ಅಂಗಡಿಕಾರರು ನಮಗೆ ಬೇರೆ ಸ್ಥಳ ನೀಡುವ ವರೆಗೆ ಯಾವುದೇ ಕಾರಣಕ್ಕೂ ಇಲ್ಲಿಯ ಅಂಗಡಿಗಳನ್ನು ತೆರವು ಮಾಡಲು ಬಿಡುವುದಿಲ್ಲ ಎಂದರು. ಈ ವೇಳೆ ಒಂದು ಹಂತಕ್ಕೆ ಪಾಲಿಕೆ ಅಧಿಕಾರಿಗಳು ಮತ್ತು ಮಾರಾಟಗಾರರ ಮಧ್ಯೆ ವಾಗ್ವಾದ ನಡೆಯಿತು.
ಆಗ ಸ್ಥಳಕ್ಕೆ ಬಂದ ಅಂಜುಮನ್ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಮತ್ತು ಪಾಲಿಕೆ ಸದಸ್ಯ ಶಂಭು ಸಾಲಿಮನಿ ಪಾಲಿಕೆ ಅಧಿಕಾರಿಗಳ ನಡೆಗೆ ವಿರೋಧ ವ್ಯಕ್ತಪಡಿಸಿದ್ದು, ಏಕಾಏಕಿ ಈ ರೀತಿಯ ಕ್ರಮಕೈಗೊಂಡರೆ ಹೇಗೆ? ಬ್ರಿಟಿಷರ ಕಾಲದಲ್ಲಿ ಈ ಜಾಗೆಯನ್ನು ನೀಡಲಾಗಿದೆ. ನಮಗೆ ಬೇರೆ ಜಾಗೆ ನೀಡಬೇಕು. ಅಲ್ಲಿಯ ವರೆಗೆ ನಾವು ಈ ಜಾಗೆ ಬಿಟ್ಟು ಕದಲುವುದಿಲ್ಲ ಎಂದು ತಿಳಿಸಿದರು.ನಂತರ ಇಸ್ಮಾಯಿಲ್ ತಮಟಗಾರ ಮಾತನಾಡಿ, ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಇದೇ ರೀತಿಯ ಸಮಸ್ಯೆ ಉದ್ಭವ ಆಗುತ್ತಲೇ ಇದೆ. ಬೇರೆ ಜಿಲ್ಲೆಗಳಲ್ಲಿ ಕಸಾಯಿ ಖಾನೆಗಳು ಎಂದಿನಂತೆ ನಡೆದಿವೆ. ಆದರೆ, ಶಾಂತ ನಗರಿ ಧಾರವಾಡದಲ್ಲಿಯೇ ಹಬ್ಬದ ಸಂದರ್ಭದಲ್ಲಿ ಗಲಾಟೆ ನಡೆಸಲಾಗುತ್ತಿದೆ. ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.