ಗಂಡನ ಮೇಲಿನ ಸಿಟ್ಟಿಗೆ 6ರ ಮಗುವನ್ನು ನಾಲೆಗೆಸೆದ ತಾಯಿ

KannadaprabhaNewsNetwork |  
Published : May 06, 2024, 12:33 AM IST
ಮೃತ ವಿನೋದ ಸಿಳೀನಿ | Kannada Prabha

ಸಾರಾಂಶ

ಗಂಡನ ಮೇಲಿನ ಕೋಪಕ್ಕೆ ಮಹಿಳೆಯೊಬ್ಬಳು ಮಾತು ಬಾರದ ತನ್ನ 6 ವರ್ಷದ ಹೆತ್ತ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದು ಕೊಂದ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ದಾಂಡೇಲಿ

ಗಂಡನ ಮೇಲಿನ ಕೋಪಕ್ಕೆ ಮಹಿಳೆಯೊಬ್ಬಳು ಮಾತು ಬಾರದ ತನ್ನ 6 ವರ್ಷದ ಹೆತ್ತ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದು ಕೊಂದ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ನತದೃಷ್ಟ ಬಾಲಕನನ್ನು ವಿನೋದ ಸಿಳೀನಿ (6) ಎಂದು ಗುರುತಿಸಲಾಗಿದೆ.

ಹಾಲಮಡ್ಡಿಯ ಸಾವಿತ್ರಿ ಮತ್ತು ರವಿಕುಮಾರ ಸಿಳೀನಿ ದಂಪತಿಗೆ ಇಬ್ಬರು ಪುತ್ರರು. ಹಿರಿಯ ಪುತ್ರನಾದ ವಿನೋದ ಮಾತು ಬಾರದ ಮೂಗ. ಮೂರ್ಛೆ ರೋಗ ಕೂಡ ಇತ್ತು. ಅಲ್ಲದೆ, ಆಗಾಗ ಹಸಿವು, ಹಸಿವು ಎನ್ನುತ್ತಿದ್ದ. ಅತಿಯಾದ ಆಹಾರ ಸೇವಿಸುತ್ತಿದ್ದ. ಒಂದು ರೀತಿಯ ಹಸಿವಿನ ರೋಗ ಕೂಡ ಆತನಿಗಿತ್ತು.

ಈ ಮಧ್ಯೆ, ರವಿಕುಮಾರ ಕುಡಿತದ ಚಟಕ್ಕೆ ಅಂಟಿಕೊಂಡಿದ್ದು, ದುಡಿಮೆಯ ಹಣವೆಲ್ಲಾ ಕುಡಿತಕ್ಕೆ ಖಾಲಿಯಾಗುತ್ತಿತ್ತು. ಹೀಗಾಗಿ, ಮನೆಯ ಖರ್ಚು ಮತ್ತು ಮಕ್ಕಳನ್ನು ಸಾಕುವ ವಿಷಯದಲ್ಲಿ ಪತಿ-ಪತ್ನಿಯ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಶನಿವಾರ ರಾತ್ರಿ ಪುತ್ರ ವಿನೋದ, ಅನ್ನಕ್ಕಾಗಿ ರಚ್ಚೆ ಹಿಡಿದ. ಅದೇ ಕಾಲಕ್ಕೆ ಕುಡಿದು ಬಂದ ಪತಿ ಜಗಳಕ್ಕೆ ನಿಂತ. ಸುಮಾರು ಹೊತ್ತು ಪತಿ-ಪತ್ನಿ ನಡುವೆ ಜಗಳವಾಯಿತು. ಈ ವೇಳೆ, ರೋಸಿಹೋದ ಸಾವಿತ್ರಿ, ಅನ್ನಕ್ಕಾಗಿ ಅಂಗಲಾಚುತ್ತಿದ್ದ ಮೂಗ ಮಗುವನ್ನು ಎತ್ತಿಕೊಂಡು ಹೋಗಿ ಮನೆಯ ಮುಂದೆ ಹರಿಯುತ್ತಿದ್ದ ನಾಲೆಗೆ ಎಸೆದು ಬಿಟ್ಟಳು.

ಅದು ಕಾಳಿ ನದಿಗೆ ಹೋಗಿ ಸೇರುವ ನಾಲೆಯಾಗಿದ್ದು, ಅಲ್ಲಿ ಮೊಸಳೆ ಕೂಡ ಇದೆ. ಸುಮಾರು ಹೊತ್ತಿನ ಬಳಿಕ, ಸಿಟ್ಟು ಕಡಿಮೆಯಾಗುತ್ತಿದ್ದಂತೆ, ತನ್ನ ಕೃತ್ಯಕ್ಕೆ ಪಶ್ಚಾತ್ತಾಪವಾಗಿ ರೋಧಿಸಲು ಆರಂಭಿಸಿದಳು. ಆಕೆಯ ರೋಧನ ಕೇಳಿ ನೆರೆಹೊರೆಯವರು ಬಂದರು. ವಿಷಯ ತಿಳಿದು, ಹಲವರು ಟಾರ್ಚ್‌ ಹಿಡಿದು ನಾಲೆಯ ಉದ್ದಕ್ಕೂ ಹುಡುಕಾಡಿದರು. ಎಲ್ಲೂ ಮಗು ಪತ್ತೆಯಾಗಿಲ್ಲ. ಭಾನುವಾರ ಬೆಳಗ್ಗೆ ವಿಷಯ ತಿಳಿದು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಉರಗತಜ್ಞ ರಜಾಕ್ ಷಾ ಬಂದು, ಮಗುವಿನ ಶೋಧ ಕಾರ್ಯ ನಡೆಸಿದಾಗ ಮನೆಯಿಂದ ಸುಮಾರು ದೂರದಲ್ಲಿ ಮಗುವಿನ ಶವ ಪತ್ತೆಯಾಯಿತು. ಆದರೆ, ಶವದ ಕೈ ಹಾಗೂ ಹೊಟ್ಟೆ ಭಾಗದಲ್ಲಿ ತೀವ್ರ ಗಾಯಗಳಾಗಿವೆ. ಇದು ಬಹುಶಃ ಮೊಸಳೆ ದಾಳಿಯಿಂದ ಆಗಿರಬಹುದು ಎಂದು ಶಂಕಿಸಲಾಗಿದೆ. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಮಗುವಿನ ತಾಯಿ, ತಂದೆಯ ವಿರುದ್ಧ ಹತ್ಯೆ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ