ಮಕ್ಕಳಿಗಾಗಿ ಸರ್ವಸ್ವ ತ್ಯಾಗ ಮಾಡುವಳು ತಾಯಿ

KannadaprabhaNewsNetwork | Published : May 16, 2025 2:02 AM

ಮಕ್ಕಳ ಏಳ್ಗೆ, ಅಭಿವೃದ್ಧಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿಯ ಸ್ಥಾನಕ್ಕೆ ಮಿಗಿಲಾದ ಸ್ಥಾನ ಮತ್ತೊಂದಿಲ್ಲ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದೇ ಹೊರತು ಕೆಟ್ಟ ತಾಯಿ ಎಂದಿಗೂ ಇರಲಾರಳು ಎಂಬ ಮಾತಿನಂತೆ ಮಕ್ಕಳ ಏಳ್ಗೆ, ಅಭಿವೃದ್ಧಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡುವ ತಾಯಿಯ ಸ್ಥಾನಕ್ಕೆ ಮಿಗಿಲಾದ ಸ್ಥಾನ ಮತ್ತೊಂದಿಲ್ಲ. ಅಂಥ ತಾಯಿಯನ್ನು ಪೂಜಿಸಿ ಗೌರವಿಸುವ ಶ್ರೇಷ್ಠ ಕಾರ್ಯ ಮಾಡಿದ ಕುಬಸದಗಲ್ಲಿಯ ನಿವಾಸಿಗಳ ಕಾರ್ಯ ದೇಶಕ್ಕೆ ಮಾದರಿ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು.

ತಾಯಂದಿರ ದಿನದ ಪ್ರಯುಕ್ತ ಸ್ಥಳೀಯ ಕುಬಸದ ಗಲ್ಲಿಯಲ್ಲಿ ವಿದ್ಯಾಶ್ರೀ ಸ್ವ ಸಹಾಯ ಸಂಘದಿಂದ ಗಿರಿಮಲ್ಲಪ್ಪ ಯರಗಟ್ಟಿ, ಚಂದ್ರು ಯರಗಟ್ಟಿ ನೇತೃತ್ವದಲ್ಲಿ ಹಮ್ಮಿಕೊಂಡ ಮಾತೃ ವಂದನಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಸರ್ವ ದೇವರನ್ನು ಮೀರಿಸುವ ತಾಯಿ ದೇವರನ್ನು ಪೂಜಿಸಿ ಸ್ವರ್ಗ ಲೋಕವನ್ನೇ ಸೃಷ್ಟಿಸಿದ ಈ ಕಾರ್ಯ ಶ್ಲಾಘನೀಯ ಹಾಗೂ ಪ್ರಸ್ತುತ ಸನ್ನಿವೇಶಕ್ಕೆ ಅತ್ಯವಶ್ಯಕ. ನಿತ್ಯವೂ ಅಮ್ಮನ ಆಶೀರ್ವಾದ ಪಡೆದು ಹೆಜ್ಜೆ ಇಟ್ಟರೆ ಸೋಲೆಂಬುದು ಇರುವುದಿಲ್ಲ ಎಂಬ ಸಂಸ್ಕಾರವನ್ನು ಬೆಳೆಸುವ ಈ ಕಾರ್ಯಕ್ರಮ ವಿಶಿಷ್ಟ ಮತ್ತು ಅಪರೂಪ ಎಂದರು.

ಬಸವಾನಂದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಸ್.ಎಂ.ಮುಗಳಖೋಡ ಮಾತನಾಡಿ, ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತಿನಂತೆ ಇಂದು ಕುಬಸದ ಗಲ್ಲಿಯಲ್ಲಿ ತಾಯಂದಿರನ್ನು ಗೌರವಿಸಿ ಇಲ್ಲಿ ದೇವತೆಗಳು ನಡೆಸುವಂತೆ ಮಾಡಿದ ಕಾರ್ಯ ಮಾದರಿ ಎಂದರು.

ದಯಾನಂದಾಚಾರ್ಯ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಬಡಾವಣೆಯ ನೂರಾರು ಮಕ್ಕಳು ತಮ್ಮ ತಮ್ಮ-ತಾಯಂದಿರ ಪಾದಪೂಜೆ ಮಾಡಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ತಮ್ಮ ಮಕ್ಕಳ ಭಕ್ತಿ ಭಾವ ಕಂಡ ತಾಯಂದಿರು ಮಕ್ಕಳ ಹಣೆಗೆ ಸಿಂದೂರವಿಟ್ಟು ಹೃದಯ ತುಂಬಿ ಹರಸಿ, ಭಾರತೀಯ ಸೇನೆಯ ಆಪರೇಷನ್ ಸಿಂದೂರಕ್ಕೆ ಗೌರವ ಸಲ್ಲಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗಿರಿಮಲ್ಲಪ್ಪ ಯರಗಟ್ಟಿ ತಮ್ಮ ಬಲ ಮುಂಗೈ ಮೇಲೆ ತಮ್ಮ ತಾಯಿಯ ಅಚ್ಚೆ ಹಾಕಿಸಿಕೊಂಡು ತಾಯಿಯೊಂದಿಗೆ ಫೋಟೋ ತೆಗೆಸಿಕೊಂಡು ಮಾತೃಭಕ್ತಿ ಮೆರೆದರು.

ಈ ಸಂದರ್ಭದಲ್ಲಿ ಮುಖಂಡ ಮಲಕಾಜಪ್ಪ ಅಂಬಿ ಅಧ್ಯಕ್ಷತೆ ವಹಿಸಿ, ಹಿರಿಯರಾದ ಅನ್ನಪೂರ್ಣ ಯರಗಟ್ಟಿ, ಸುಬ್ಬವ್ವ ಗಲಗಲಿ ಉಪಸ್ಥಿತಿ ವಹಿಸಿ, ಬಡಾವಣೆಯ ದೀಪಾ ಹುಣಶ್ಯಾಳ, ಲಕ್ಷ್ಮೀ ಜಮಖಂಡಿ, ಸಿದ್ದಪ್ಪ ಹುಣಶ್ಯಾಳ, ಮಹಾಲಿಂಗ ಹನಗಂಡಿ, ಶೃತಿ ಯರಗಟ್ಟಿ, ರಾಜೇಶ್ವರಿ ಹನಗಂಡಿ ಸೇರಿದಂತೆ ನೂರಾರು ಮಹಿಳೆಯರು ಮತ್ತು ಮಕ್ಕಳು ಇದ್ದರು.ಶಿಕ್ಷಕ ಸಿ.ವಿ.ಹುಣಶ್ಯಾಳ ನಿರೂಪಿಸಿದರು.