ಕನ್ನಡಪ್ರಭ ವಾರ್ತೆ ತಿಪಟೂರು
ನಗರಕ್ಕೆ ಅಗತ್ಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಬದ್ಧವಾಗಿದ್ದು ಸರ್ಕಾರ ಹಾಗೂ ಸಂಬಂದಪಟ್ಟ ಇಲಾಖೆಗಳ ಅನುದಾನದೊಂದಿಗೆ ಅಭಿವೃದ್ದಿಯತ್ತ ಹೆಜ್ಜೆ ಹಾಕಲಾಗುತ್ತಿದೆ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದ ಸಮೀಪ ಗುರುವಾರ ಯುವ ಸಬಲೀಖರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವೀಕೃತ ಜಿಮ್ ಹಾಗೂ ಈಜುಕೊಳ ಉದ್ಘಾಟನೆ ಮತ್ತು ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ನಗರಕ್ಕೆ ಅವಶ್ಯಕವಾಗಿರುವ ಮೂರು ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಲಾಗಿದೆ. ನಗರದಲ್ಲಿ ಜಿಮ್ ಮುಂಚೆಯೇ ಇತ್ತು ಆದರೆ ಅದನ್ನು ಉನ್ನತೀಕರಣ ಮಾಡಿ ಸಾರ್ವಜನಿಕ ಬಳಕೆಗೆ ನೀಡಲಾಗಿದೆ. ಮೂರು ಕೋಟಿರೂ ವೆಚ್ಚದಲ್ಲಿ ಈಜುಕೊಳ ಲೋಕಾರ್ಪಣೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗಲೆಂದು ಮೂರು ಕೋಟಿಗೂ ಅಧಿಕ ರು.ಗಳ ಅನುದಾನದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅತ್ಯಂತ ಜವಾಬ್ದಾರಿಯುತವಾಗಿ ಈ ಯೋಜನೆಗಳನ್ನು ತಂದು ಸಾರ್ವಜನಿಕರ ಉಪಯೋಗಕ್ಕೆ ನೀಡಿದ್ದು, ಇನ್ನೂ ಹೆಚ್ಚಿನ ಸಹಕಾರದೊಂದಿಗೆ ನಗರದಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ. ಭಾರತ ಮತ್ತು ಪಾಕ್ ಯುದ್ಧದ ಪರಿಸ್ಥಿತಿ ಇರುವ ಕಾರಣ ಈ ಕಾರ್ಯಕ್ರಮವನ್ನು ಸರಳವಾಗಿ ಆಚರಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದ್ದರು. ಅದರಂತೆ ಸರಳ ಸುಂದರವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರ ವಾಸಿಗಳು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಅನುಭವಿ ಈಜುಕೊಳ ತರಬೇತಿದಾರರು ಜಾಗೃತೆಯಿಂದ ಮಕ್ಕಳಿಗೆ ತರಬೇತಿ ನೀಡುವಂತೆ ತಿಳಿಸಿದರು. ನಮ್ಮ ಸರ್ಕಾರ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ನಡೆದಿದೆ. ವಿರೋಧ ಪಕ್ಷಗಳು ವಿನಾಕಾರಣ ಅಭಿವೃದ್ಧಿಗೆ ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿವೆ. ಯುವ ಜನರಿಗೆ ಅನುಕೂಲವಾಗಲಿ ಎಂಬ ಮುಂದಾಲೋಚನೆಯಿಂದಲೇ ಚುನಾವಣೆ ಸಮಯದಲ್ಲ ಯುವನಿಧಿ ಪ್ರಸ್ತಾಪ ಮಾಡಲಾಗಿತ್ತು. ಅದರಂತೆ 5ನೇ ಗ್ಯಾರಂಟಿ ಮೂಲಕ ಯೋಜನೆ ಜಾರಿಗೊಳಿಸಲಾಗಿದೆ. ಆ ಮೂಲಕ ಯುವ ಸಮುದಾಯವನ್ನು ಸರ್ಕಾರ ಮರೆತಿಲ್ಲ ಎಂದು ಸ್ಪಷ್ಟಪಡಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯಕ್ತರಾದ ಆರ್. ಚೇತನ್ ಮಾತನಾಡಿ, ನಗರದಲ್ಲಿ ಜಿಮ್, ಈಜುಕೊಳ ಉದ್ಘಾಟನೆಯಾಗಿರುವುದು ಸಂತಸ ತಂದಿದೆ. ತಾಲೂಕು ಮತ್ತು ನಗರದ ಜನತೆ ಇದರ ಅನುಕೂಲ ಪಡೆದುಕೊಳ್ಳಬೇಕು. ಈಗ ನಗರದಲ್ಲಿ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿದ್ದು ಮುಂದಿನ ದಿನಗಳಲ್ಲಿ ಕ್ರೀಡಾಂಗಣ ನಿರ್ಮಾಣಗೊಂಡು ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ, ನಗರಸಭೆ ಅಧ್ಯಕ್ಷ ಯಮುನಾ ಧರಣೇಶ್, ಉಪಾಧ್ಯಕ್ಷೆ ಮೇಘಶ್ರೀ ಭೂಷಣ್, ಸದಸ್ಯರಾದ ಎಂ.ಎಸ್. ಯೋಗೀಶ್, ಹೂರ್‌ಬಾನು, ಆಶೀಫಾಬಾನು, ಮುಖಂಡರಾದ ಸುಜೀತ್ ಭೂಷಣ್, ಧರಣೇಶ್, ಇಲಾಖೆಯ ಸಹಾಯಕ ನಿರ್ದೇಶಕ ಟಿ.ಆರ್. ರೋಹಿತ್ ಗಂಗಾಧರ್, ಗುತ್ತಿಗೆದಾರ ತೀರ್ಥರಾಜ್, ತರಬೇತಿದಾರ ಇಸ್ಮಾಯಿಲ್, ಕ್ರೀಡಾಧಿಕಾರಿ ಶಿವಪ್ರಸಾದ್, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮತ್ತಿತರರಿದ್ದರು.