ಪ್ರತಿ ವರ್ಷ ಗಾಳಿಯೊಂದಿಗೆ ಬಿಸಿಲು ಶುರುವಾದರೆ ಸಾಕು ಹೊಸಯಲ್ಲಾಪೂರದ ಕಸದ ಗುಡ್ಡದ ಬುಡದಲ್ಲಿ ಬೆಂಕಿ ಹೊತ್ತಿ ವಿಷಯದ ಹೊಗೆ ಉಗುಳುತ್ತಿರುವುದರಿಂದ ಧಾರವಾಡ ಜನರ ಉಸಿರುಗಟ್ಟಿಸುತ್ತಿದೆ.
ಧಾರವಾಡ:
ಪ್ರತಿ ವರ್ಷ ಗಾಳಿಯೊಂದಿಗೆ ಬಿಸಿಲು ಶುರುವಾದರೆ ಸಾಕು ಹೊಸಯಲ್ಲಾಪೂರದ ಕಸದ ಗುಡ್ಡದ ಬುಡದಲ್ಲಿ ಬೆಂಕಿ ಹೊತ್ತಿ ವಿಷಯದ ಹೊಗೆ ಉಗುಳುತ್ತಿರುವುದರಿಂದ ಧಾರವಾಡ ಜನರ ಉಸಿರುಗಟ್ಟಿಸುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಈ ಕಸದ ಗುಡ್ಡೆಯಿಂದ ಹೊರಸೂಸುವ ವಿಷದ ಗಾಳಿಯು ಇಡೀ ಧಾರವಾಡದ ಒಂದು ಭಾಗವನ್ನು ಆವರಿಸಿ, ಅಲ್ಲಿಯ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದೆ.
ಈ ಬಾರಿ ದೀಪಾವಳಿ ಸಂಭ್ರಮದಲ್ಲಿದ್ದ ಧಾರವಾಡ ಜನರು ಈ ಕಸದ ರಾಶಿಯಿಂದ ಹೊರಹೊಮ್ಮಿದ ದಟ್ಟವಾದ, ವಿಷಕಾರಿ ಹೊಗೆಯಿಂದಾಗಿ ತಮ್ಮ ಮನೆಗಳ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಕೊಳ್ಳುವ ಸ್ಥಿತಿ ಉಂಟಾಗಿತ್ತು. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಇಡೀ ರಾತ್ರಿ ಹರಸಾಹಸ ಪಡಬೇಕಾಯಿತು. ಸುಮಾರು 10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸುದೀರ್ಘ ಹೋರಾಟದ ನಂತರ, ಬೆಂಕಿಯನ್ನು ಅಂತಿಮವಾಗಿ ನಿಯಂತ್ರಣಕ್ಕೆ ತರಲಾಯಿತು. ಇದರಿಂದ ಸುತ್ತಲಿನ ನಿವಾಸಿಗಳು ಮತ್ತು ಪೌರಕಾರ್ಮಿಕರು ನಿಟ್ಟುಸಿರು ಬಿಡುವಂತಾಯಿತು. ಬಾಗಿಲು ಮತ್ತು ಕಿಟಕಿ ಮುಚ್ಚಿಕೊಂಡಿದ್ದ ಜನರು, ಪರಿಸ್ಥಿತಿ ತಿಳಿಯಾದ ನಂತರ ತಾಜಾ ಗಾಳಿಗಾಗಿ ಅವುಗಳನ್ನು ಮತ್ತೆ ತೆರೆದರು.
ಕಾರಣವೇನು?:
ಡಿಪೋದಲ್ಲಿ ಸಂಗ್ರಹವಾಗಿರುವ ಕಸದ ರಾಶಿಯನ್ನು ಕಡಿಮೆ ಮಾಡಲು ಉದ್ದೇಶಪೂರ್ವಕವಾಗಿ ಕಸಕ್ಕೆ ಬೆಂಕಿ ಹಚ್ಚಲಾಗುತ್ತಿದೆ ಎಂಬ ಗಂಭೀರ ಆರೋಪವಿದೆ. ಆದರೆ, ಅಸಲಿ ಸಂಗತಿಯೇ ಬೇರೆ. ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ ಮಾಡದಿರುವುದೇ ಈ ಘಟನೆಗೆ ಕಾರಣ. ಹಸಿ ಕಸ ಮತ್ತು ಒಣ ಕಸ ಒಂದಕ್ಕೊಂದು ಬೆರೆತಾಗ ರಾಸಾಯನಿಕ ಕ್ರಿಯೆಗಳು ನಡೆದು ಮೀಥೇನ್ ಅನಿಲ ಬಿಡುಗಡೆಯಾಗುತ್ತದೆ, ಇದು ಬೆಂಕಿ ಹತ್ತಿಕೊಳ್ಳಲು ಕಾರಣ ಎಂದು ಮಹಾನಗರ ಪಾಲಿಕೆ ಹೇಳುತ್ತದೆ.
ನಿತ್ಯ ಧಾರವಾಡದಲ್ಲಿ 400-450 ಮೆಟ್ರಿಕ್ ಟನ್ಗಿಂತಲೂ ಹೆಚ್ಚು ಕಸ ಉತ್ಪಾದನೆಯಾಗುತ್ತಿದ್ದು, ಈ ಪೈಕಿ 200 ಮೆಟ್ರಿಕ್ ಟನ್ ತ್ಯಾಜ್ಯವನ್ನು ಘನತ್ಯಾಜ್ಯ ನಿರ್ವಹಣಾ ಘಟಕವು ನಿರ್ವಹಿಸುತ್ತಿದ್ದು ಇನ್ನುಳಿದ 200 ಟನ್ ತ್ಯಾಜ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಾ ಗುಡ್ಡದ ರೂಪದಲ್ಲಿ ಕಾಣುತ್ತಿದೆ. ಇದು ಗಾಳಿ ಹಾಗೂ ಬಿಸಿಲಿನ ಸಮಯದಲ್ಲಿ ಬೆಂಕಿ ಹತ್ತಿ ವಿದ್ಯಾಗಿರಿ, ಲಕ್ಷ್ಮಿನಗರ, ಗಾಂಧಿನಗರ, ಮಾಳಮಡ್ಡಿ ಸೇರಿ ಇಡೀ ಊರು ವಿಷದ ಗಾಳಿಗೆ ತುತ್ತಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಪದೇ ಪದೇ ಪ್ರತಿಭಟನೆ ನಡೆಸಿದಾಗ ಬರೀ ಭರವಸೆ ಮಾತ್ರ ಸಿಗುತ್ತಿದೆಯೇ ಹೊರತು ಪರಿಹಾರ ಮಾತ್ರ ದೊರೆತಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.
ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸುವುದು ಕಸದ ಗುಡ್ಡಕ್ಕೆ ಬೆಂಕಿ ಹತ್ತುವುದನ್ನು ತಡೆಯುವ ಮೊದಲ ಮುನ್ನೆಚ್ಚರಿಕೆ ಕ್ರಮ. ಜತೆಗೆ ಹೆಚ್ಚುವರಿ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸಲು 15ನೇ ಹಣಕಾಸು ಆಯೋಗದಿಂದ ಅನುದಾನ ನೀಡುವುದು ಎರಡನೆ ಕ್ರಮ. ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಯಶಸ್ವಿ ತ್ಯಾಜ್ಯ ನಿರ್ವಹಣಾ ಮಾದರಿಗಳನ್ನು ಅಧ್ಯಯನ ಮಾಡಲು ಆಗಾಗ್ಗೆ ಇತರ ಮಹಾನಗರ ಪಾಲಿಕೆಗಳಿಗೆ ಭೇಟಿ ನೀಡುತ್ತಾರೆ. ಆದರೆ, ಅದರಿಂದ ಆಗಿರುವ ಪ್ರಯೋಜನೆ ಶೂನ್ಯ ಎಂಬುದು ಧಾರವಾಡದ ಕಸದ ಗುಡ್ಡದ ಸಮಸ್ಯೆಯೇ ಸಾಕ್ಷಿ. ಬೆಲ್ಲದ ವಿರುದ್ಧ ಚಿಂಚೋರೆ ಆಕ್ರೋಶ...
ಪದೇ ಪದೇ ಈ ಕಸದ ಗುಡ್ಡೆಯಿಂದ ಬರುತ್ತಿರುವ ವಿಷದ ಹೊಗೆಯು ಧಾರವಾಡ ಆವರಿಸುತ್ತಿರುವುದಕ್ಕೆ ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಅವರೇ ಕಾರಣ. ಮೂರು ಬಾರಿ ಶಾಸಕರಾದರೂ, ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದ್ದರೂ ಕಸದ ಗುಡ್ಡದ ಭಾರ ಇಳಿಸಲು ಅವರಿಗೆ ಏತಕ್ಕೆ ಆಗುತ್ತಿಲ್ಲ. ನಿಮಗೆ ಮತ ಹಾಕಿ ವಿಷಯ ಹೊಗೆ ಕುಡಿಯಬೇಕಾ? ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡರು.
ಧಾರವಾಡದಲ್ಲಿ ಏನೆಲ್ಲಾ ಮಾಡಿದ್ದೇನೆಂದು ಬ್ಯಾನರ್ ಹಾಕುವ ಬೆಲ್ಲದ ಅವರು, ಏನೆಲ್ಲಾ ಮಾಡಬೇಕಿತ್ತು ಎಂಬುದನ್ನು ಸಹ ಬ್ಯಾನರ್ ಹಾಕಬೇಕಿತ್ತು. ಈ ಕಸದ ಹೊಗೆಯಿಂದ ಮಕ್ಕಳು, ಮಹಿಳೆಯರು, ವೃದ್ಧರು ಸಾಯುವ ಸ್ಥಿತಿಗೆ ಬಂದಿದ್ದಾರೆ. ಅಧಿಕಾರ ಇದ್ದಾಗ ಜನರಿಗಾಗಿ ಸೇವೆ ಮಾಡಬೇಕು. ಕೂಡಲೇ 15-16ನೇ ಹಣಕಾಸು ಆಯೋಗದಿಂದ ₹ 80 ಕೋಟಿ ತಂದು ಗುಡ್ಡದ ಭಾರ ಇಳಿಸಬೇಕು. ಇದಕ್ಕಾಗಿ 15 ದಿನಗಳ ಕಾಲಾವಕಾಶ ನೀಡುತ್ತಿದ್ದು, ಈ ಕಾರ್ಯ ಮಾಡದೇ ಹೋದಲ್ಲಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಚಿಂಚೋರೆ ಎಚ್ಚರಿಕೆ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.