ಜಗಳೂರು ತಾಲೂಕು ಆಡಳಿತದಿಂದ ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕ ಸಮಸ್ಯೆಗಳ ಸರಮಾಲೆಯೇ ಅನಾವರಣಗೊಂಡವು. ಕುಡಿಯುವ ನೀರು, ಆರೋಗ್ಯ ಸೇವೆ, ಸಾರಿಗೆ, ನಿವೇಶನ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಕುರಿತು ಸಾರ್ವಜನಿಕರು ಅಧಿಕಾರಿಗಳ ಮುಂದೆ ಅಹವಾಲುಗಳ ಮಹಾಪೂರವನ್ನೇ ಹರಿಸಿದರು.
- ಜಗಳೂರು ತಾಲೂಕಲ್ಲಿ ಕುಡಿಯುವ ನೀರು, ಆರೋಗ್ಯ, ನಿವೇಶನ, ಸಾರಿಗೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರ ಆಕ್ರೋಶ
- - -
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕು ಆಡಳಿತದಿಂದ ಶನಿವಾರ ನಡೆದ ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕ ಸಮಸ್ಯೆಗಳ ಸರಮಾಲೆಯೇ ಅನಾವರಣಗೊಂಡವು. ಕುಡಿಯುವ ನೀರು, ಆರೋಗ್ಯ ಸೇವೆ, ಸಾರಿಗೆ, ನಿವೇಶನ ಹಾಗೂ ಗ್ರಾಮೀಣ ಮೂಲಸೌಕರ್ಯಗಳ ಕುರಿತು ಸಾರ್ವಜನಿಕರು ಅಧಿಕಾರಿಗಳ ಮುಂದೆ ಅಹವಾಲುಗಳ ಮಹಾಪೂರವನ್ನೇ ಹರಿಸಿದರು.
ಸ್ವೀಕೃತವಾದ 17 ಅರ್ಜಿಗಳನ್ನು ಐಟಿಜಿಆರ್ಎಸ್ ಪೋರ್ಟಲ್ನಲ್ಲಿ ದಾಖಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ 15 ದಿನಗಳೊಳಗೆ ಆದ್ಯತೆ ಮೇರೆಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಕೆ.ಗುರುಬಸವರಾಜ್ ಭರವಸೆ ನೀಡಿದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವೀಕೃತವಾದ ಅರ್ಜಿಗಳನ್ನು ಆಯಾ ಇಲಾಖೆಗಳ ಗಮನಕ್ಕೆ ತಂದು, ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಂಡು ಶೀಘ್ರ ವಿಲೇವಾರಿ ಮಾಡಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ, ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ವಾರಗಳಲ್ಲಿ ಕಲ್ಲದೇವರಪುರ ಹಾಗೂ ಸೊಕ್ಕೆ ಗ್ರಾಮಗಳಲ್ಲಿ ತಾಲೂಕು ಆಡಳಿತದಿಂದ ''''ಸೇವೆ ಮನೆ ಬಾಗಿಲಿಗೆ'''' ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಗ್ರಾಮೀಣ ಭಾಗದ ಜನರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಸೇವೆ ಸುಧಾರಣೆಗೆ ಆಗ್ರಹ:
ಜಗಳೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ರೇಡಿಯೋಲಜಿಸ್ಟ್ ತಂತ್ರಜ್ಞರ ಮೂಲಕ ಸ್ಕ್ಯಾನಿಂಗ್ ವ್ಯವಸ್ಥೆ ಕಲ್ಪಿಸುವುದು, ಹೆಚ್ಚುವರಿ ಆಂಬ್ಯುಲೆನ್ಸ್ ಒದಗಿಸುವುದು ಹಾಗೂ ತುರ್ತು ಸಂದರ್ಭ ಮತ್ತು ರಜಾ ದಿನಗಳಲ್ಲಿಯೂ ಎಕ್ಸ್ರೇ ಸೌಲಭ್ಯ ಕಲ್ಪಿಸಬೇಕೆಂದು ರೈತ ಮುಖಂಡ ಕುಮಾರ್ ಸೇರಿದಂತೆ ಇತರರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ವಿಶ್ವನಾಥ್ ಹಾಗೂ ಆಸ್ಪತ್ರೆ ಆಡಳಿತಾಧಿಕಾರಿಗಳು, ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಹೊಸ ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಖಾಲಿ ಇರುವ ವೈದ್ಯರ ಹುದ್ದೆಗಳ ಭರ್ತಿಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿಗಾಗಿ ಪರದಾಟ:
ಮರೇನಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಟ್ಯಾಂಕರ್ ಮೂಲಕ ಪೂರೈಸುವ ನೀರು ಸಾಲುತ್ತಿಲ್ಲ. ಶಾಶ್ವತ ಪರಿಹಾರಕ್ಕಾಗಿ ಹೊಸ ಬೋರ್ವೆಲ್ ಕೊರೆಸಬೇಕು ಎಂದು ಓಬಳೇಶ್ ಒತ್ತಾಯಿಸಿದರು. ಅರಿಶಿನಗುಂಡಿ ಹಾಗೂ ಸಿದ್ದಮ್ಮನಹಳ್ಳಿ ಗ್ರಾಮಗಳಲ್ಲಿನ ನೀರಿನ ಸಮಸ್ಯೆಯನ್ನೂ ಸಭೆಯ ಗಮನಕ್ಕೆ ತರಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾದಿಕ್ ಉಲ್ಲಾ ಹಾಗೂ ತಾಲೂಕು ಪಂಚಾಯಿತಿ ಇಒ ಕೆಂಚಪ್ಪ ಅವರು, ಮರೇನಹಳ್ಳಿಗೆ ಪ್ರತಿದಿನ 12 ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಅರಿಶಿನಗುಂಡಿಯಲ್ಲಿ ಹೊಸ ಬೋರ್ವೆಲ್ ಕೊರೆಸಲು, ಮೋಟಾರ್ ಹಾಗೂ ಪೈಪ್ಲೈನ್ ಅಳವಡಿಸಲು ₹4 ಲಕ್ಷ ಅನುದಾನ ಮಂಜೂರಾಗಿದ್ದು, ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ನಿವೇಶನ, ಸ್ಮಶಾನ, ಸಾರಿಗೆ ಸೌಲಭ್ಯಕ್ಕೂ ಒತ್ತಾಯ:
ರೈತ ಮುಖಂಡ ಮಹಾಂತೇಶ್ ಮಾತನಾಡಿ, ಸರ್ಕಾರಿ ಯೋಜನೆಗಳ ಮಾಹಿತಿ ತಲುಪಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಟಾಂ ಟಾಂ ಮೂಲಕ ಜನಜಾಗೃತಿ ಮೂಡಿಸಬೇಕು. ಗ್ರಾಪಂ ವ್ಯಾಪ್ತಿ ಸರ್ಕಾರಿ ಜಮೀನುಗಳನ್ನು ಗುರುತಿಸಿ ನಿರಾಶ್ರಿತರಿಗೆ ನಿವೇಶನ ಕಲ್ಪಿಸುವುದರ ಜತೆಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಹಿಂದಿನ ಸಭೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಲೇವಾರಿ ಸ್ಥಿತಿಗತಿ ಕುರಿತು ದಲಿತ ಮುಖಂಡ ರಾಜನಹಟ್ಟಿ ಚಂದ್ರಪ್ಪ ಅಧಿಕಾರಿಗಳಿಂದ ಸ್ಪಷ್ಟನೆ ಕೋರಿದರು. ದೊಣೆಹಳ್ಳಿ ಹೊಸೂರು ಬಳಿ ಸ್ಮಶಾನ ನಿರ್ಮಾಣಕ್ಕೆ ಸರ್ವೆ ಕಾರ್ಯ ಕೈಗೊಳ್ಳಬೇಕು. ಪ್ರೌಢಶಾಲೆ ಮುಂಭಾಗ ಸರ್ಕಾರಿ ಬಸ್ಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ರೈತರಿಗೆ ಕೃಷಿ ಇಲಾಖೆಯಿಂದ ತಾಡಪತ್ರಿ ವಿತರಣೆ ಹಾಗೂ ಎಸ್ಸಿಪಿ/ ಟಿಎಸ್ಪಿ ಯೋಜನೆಗಳ ಅನುದಾನ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಿಆರ್ಸಿ ಡಿಡಿ ಹಾಲಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ್, ಪಶು ಸಂಗೋಪನಾ ಇಲಾಖೆ ಎಡಿ ಡಾ.ಲಿಂಗರಾಜ್, ಎಇಇಗಳಾದ ಶಿವಮೂರ್ತಿ, ಶಶಿಕಾಂತ್, ಅರಣ್ಯ ಇಲಾಖೆ ಅಧಿಕಾರಿಗಳಾದ ನಿತಿನ್ ಬಲ್ಲವರ್, ಮಹೇಶ್ವರಪ್ಪ, ಸಿಡಿಪಿಒ ಶಿವಕುಮಾರ್, ಬಿಸಿಎಂ ವಿಸ್ತರಣಾಧಿಕಾರಿ ಜಯ್ಯಪ್ಪ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
- - -
-15ಜೆ.ಜಿ.ಎಲ್.1:
ಪ್ರಜಾಸೇವಾ ಆಂದೋಲನದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.