ಕನ್ನಡ ಅನ್ನದ ಭಾಷೆಯಾಗದಿದ್ದರೆ ಮಾತೃಭಾಷಾ ಶಿಕ್ಷಣಕ್ಕೆ ಹಿನ್ನಡೆ

KannadaprabhaNewsNetwork |  
Published : Nov 17, 2026, 02:00 AM IST
15ಎಚ್ಎಸ್ಎನ್12 :  | Kannada Prabha

ಸಾರಾಂಶ

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. ೨೫ ಮೀಸಲಾತಿ ನೀಡಿದರೆ ಮಾತೃಭಾಷಾ ಶಿಕ್ಷಣದ ಬಗ್ಗೆ ಪೋಷಕರಲ್ಲಿ ವಿಶ್ವಾಸ ಮತ್ತು ಅಭಿಮಾನ ಹೆಚ್ಚಾಗಲಿದೆ. ಕನ್ನಡವೇ ಕರ್ನಾಟಕದ ಪ್ರಮುಖ ಶಿಕ್ಷಣ ಮಾಧ್ಯಮವಾಗಬೇಕು. ಕನ್ನಡಿಗರಿಗೆ ತಮ್ಮದೇ ನಾಡಿನಲ್ಲಿ ಉದ್ಯೋಗಾವಕಾಶಗಳು ದೊರೆಯುವಂತಾಗಬೇಕು. ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು. ಕನ್ನಡ ಭಾಷೆಯ ಉಳಿವು ಕೇವಲ ಸಂಘಟನೆಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೂ ಆಗಿದೆ. ದೈನಂದಿನ ಬದುಕಿನಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡುವ ಮೂಲಕ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾಸನ

ಕನ್ನಡ ಭಾಷೆ ಉಳಿದು ಸಮೃದ್ಧವಾಗಿ ಬೆಳೆಯಬೇಕಾದರೆ ಅದು ಕೇವಲ ಸಂವಹನದ ಭಾಷೆಯಾಗದೆ ಅನ್ನದ ಭಾಷೆಯಾಗಬೇಕು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಎಲ್ಲ ನೇಮಕಾತಿಗಳಲ್ಲಿ ಶೇ.೨೫ ಮೀಸಲಾತಿ ಕಲ್ಪಿಸಬೇಕು ಎಂದು ಕನ್ನಡ ನುಡಿ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್‌ ಒತ್ತಾಯಿಸಿದರು.ನಗರದ ಸಂಸ್ಕೃತ ಭವನದಲ್ಲಿ ಗಂಧದ ಗುಡಿ ಕನ್ನಡ ಸಂಘ, ಬೆಂಗಳೂರು ಹಾಗೂ ಚೇತನ ಫೌಂಡೇಶನ್, ಧಾರವಾಡ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕನ್ನಡ ನುಡಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದರೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತವೆ ಎಂಬ ಭಾವನೆ ಪೋಷಕರಲ್ಲಿ ಮೂಡಿರುವುದರಿಂದ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ ಎಂದರು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ. ೨೫ ಮೀಸಲಾತಿ ನೀಡಿದರೆ ಮಾತೃಭಾಷಾ ಶಿಕ್ಷಣದ ಬಗ್ಗೆ ಪೋಷಕರಲ್ಲಿ ವಿಶ್ವಾಸ ಮತ್ತು ಅಭಿಮಾನ ಹೆಚ್ಚಾಗಲಿದೆ. ಕನ್ನಡವೇ ಕರ್ನಾಟಕದ ಪ್ರಮುಖ ಶಿಕ್ಷಣ ಮಾಧ್ಯಮವಾಗಬೇಕು. ಕನ್ನಡಿಗರಿಗೆ ತಮ್ಮದೇ ನಾಡಿನಲ್ಲಿ ಉದ್ಯೋಗಾವಕಾಶಗಳು ದೊರೆಯುವಂತಾಗಬೇಕು. ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು. ಕನ್ನಡ ಭಾಷೆಯ ಉಳಿವು ಕೇವಲ ಸಂಘಟನೆಗಳ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೂ ಆಗಿದೆ. ದೈನಂದಿನ ಬದುಕಿನಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡುವ ಮೂಲಕ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಮೆರವಣಿಗೆ, ಘೋಷಣೆ ಹಾಗೂ ಸನ್ಮಾನಗಳಿಗೆ ಸೀಮಿತವಾಗದೆ ಹೊಸ ತಲೆಮಾರಿನ ಸಾಹಿತಿಗಳು, ಕವಿಗಳು ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಬೇಕು. ಕನ್ನಡದ ಮೇಲಿನ ಅಭಿಮಾನದಿಂದ ದೂರದ ಜಿಲ್ಲೆಗಳಿಂದಲೂ ಸಾಹಿತಿಗಳು ಆಗಮಿಸಿರುವುದು ಭಾಷೆಯ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಎಲ್ಲ ಸಂಘಟನೆಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಬೇಕು ಎಂದು ಹೇಳಿದರು. ಸಾಹಿತಿ ಎನ್. ಶೈಲಜಾ ಹಾಸನ ಮಾತನಾಡಿ, ಕನ್ನಡದ ಉಳಿವು ಕೇವಲ ಘೋಷಣೆಗಳಿಗೆ ಸೀಮಿತವಾಗಬಾರದು. ಯುವಜನತೆ ಕನ್ನಡವನ್ನು ದೈನಂದಿನ ಬದುಕಿನಲ್ಲಿ ಬಳಸುವ ಮೂಲಕ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕೈಜೋಡಿಸಬೇಕು. ಚೇತನ ಫೌಂಡೇಶನ್ ಹಾಗೂ ಕನ್ನಡ ಸಂಘವು ರಾಜ್ಯಾದ್ಯಂತ ೨೭೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡಪರ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಭಾ ಕಾರ್ಯಕ್ರಮದ ಬಳಿಕ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಹಿತ್ಯ, ಕಲೆ, ಸಂಗೀತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕನ್ನಡ ಹೊಯ್ಸಳ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶಿಕ್ಷಕರತ್ನ ರಾಜ್ಯೋತ್ಸವ ಹಾಗೂ ಹಲ್ಮಿಡಿ ದೀಮಂತ ಕನ್ನಡಿಗ-ಕನ್ನಡತಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಗಂಧದಗುಡಿ ಕನ್ನಡ ಸಂಘದ ರಾಜ್ಯ ಗೌರವಾಧ್ಯಕ್ಷ ಬಿ. ರಂಗಸ್ವಾಮಿ, ಸಮಾಜ ಸೇವಕ ಗಣೇಶ್ ತಮ್ಲಾಪುರ, ಸಾಹಿತಿ ಮತ್ತು ಪತ್ರಕರ್ತ ನಾಗರಾಜು ಹೆತ್ತೂರ್, ಕಿರುತೆರೆ ಮತ್ತು ಚಲನಚಿತ್ರ ನಟಿ ವೇದಾ, ಸರಕಾರಿ ನೌಕರರ ಸಂಘದ ಆಲೂರು ತಾಲೂಕು ಅಧ್ಯಕ್ಷ ಡಿ. ಎಂ. ವರದರಾಜು, ಎಸ್. ಎಲ್. ರಂಗಸ್ವಾಮಿ, ಚೇತನ ಫೌಂಡೇಶನ್ ಧಾರವಾಡ ಅಧ್ಯಕ್ಷ ಚಂದ್ರಶೇಖರ್ ಮಾಡಲಗೇರಿ, ಗಂಧದ ಗುಡಿ ಕನ್ನಡ ಸಂಘದ ಅಧ್ಯಕ್ಷ ಬಾವುಟ ಬಸವರಾಜು ಇತರರು ಉಪಸ್ಥಿತರಿದ್ದರು.

===

ಫೋಟೋ

ಹಾಸನ ನಗರದ ಸಂಸ್ಕೃತ ಭವನದಲ್ಲಿ ಆಯೋಜಿಸಿದ್ದ ಕನ್ನಡ ನುಡಿ ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮ ಉಳಿದರೆ ಸಮಾಜದ ಉಳಿವು
ಅವ್ಯವಸ್ಥೆ ಕಂಡು ಗ್ರಂಥಪಾಲಕನಿಗೆ ತರಾಟೆ