ಶೇಷಮೂರ್ತಿ ಅವಧಾನಿ
ಕಡು ಬಡವಿ ತಾಯಿ ಮುತ್ತಮ್ಮ ನಿಡಗುಂದ ದಲ್ಲಿ ಕೂಲಿನಾಲಿ ಕೆಲಸ. ಆದ್ರೆ ಇವರ ಪುತ್ರಿ ವೈಷ್ಣವಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತ ತನ್ನದೇ ಶೈಲಿಯಲ್ಲಿ ಆಟ ಆಡ್ತಾ ರಾಷ್ಟ್ರದ ಗಮನ ಸೆಳೆಯಲು ಮುಂದಾಗಿದ್ದಾಳೆ.
ತಾಯಿ ಮುತ್ತಮ್ಮಳ ಪರಿಶ್ರಮ ಮಗಳ ಸಾಧನೆಯಲ್ಲಿ ಸಿಹಿ ಫಲ ನೀಡಿದೆ. ಕೈಯಲ್ಲಿ ಕ್ರಿಕೆಟ್ ಬ್ಯಾಟ್! ಹಿಡಿದು ಬಡತನ ಮೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕಲಬುರಗಿ ಕುವರಿ ವೈಷ್ಣವಿ ಧರಿ ಇವಳ ಯಶೋ ಗಾತೆ ಇದಾಗಿದೆ.ಸಾಧನೆಗೆ ಅಸಾಧ್ಯ ಯಾವುದೂ ಇಲ್ಲ, ಸಾಧಿಸೋ ಛಲ ಬೇಕು ಅನ್ನೋ ಮಾತಿಗೆ ವೈಷ್ಣವಿ ಕನ್ನಡಿಯಾಗಿದ್ದಾಳೆ. ಕಷ್ಟಗಳ ನಡುವೆಯೂ ಸಾಧನೆಯ ಕನಸು ಕಾಣುವವರಿಗೆ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಕಲಬುರಗಿ ಜಿಲ್ಲೆಯ ವೈಷ್ಣವಿ ಧರಿ ಉತ್ತಮ ಉದಾಹರಣೆಯಾಗಿದ್ದಾಳೆ. ಕೂಲಿ ಕೆಲಸ ಮಾಡಿ ಮಗಳನ್ನು ಓದಿಸುತ್ತಿರುವ ತಾಯಿಯ ಪರಿಶ್ರಮಕ್ಕೆ ಈಗ ಫಲ ಸಿಕ್ಕಿದೆ. ಕ್ರಿಕೆಟ್‌ನಲ್ಲಿ ಆಸಕ್ತಿ ಬೆಳೆಸಿಕೊಂಡ ವೈಷ್ಣವಿ, ಇದೀಗ ರಾಷ್ಟ್ರಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ನಿಡಗುಂದಾ ಗ್ರಾಮದ ವೈಷ್ಣವಿ ಧರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಯುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (SGFI) ಅಂಡರ್-17 ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾಳೆ. ಪ್ರಸ್ತುತ ಕಲಬುರಗಿಯ ಎನ್‌ವಿ ಕನ್ಯಾ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವೈಷ್ಣವಿ ಕ್ರಿಕೆಟ್ ತಂಡದಲ್ಲಿ ಆಲ್‌ರೌಂಡರ್ ಆಗಿ ಸ್ಥಾನ ಪಡೆದಿದ್ದಾಳೆ. ಕೂಲಿ ಕೆಲಸ ಮಾಡುವ ತಾಯಿಯ ಪರಿಶ್ರಮ ವೈಷ್ಣವಿಗೆ ತಂದೆ ಇಲ್ಲ. ತಾಯಿ ಮುತ್ತಮ್ಮ ನಿಡಗುಂದಾ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಮಗಳ ಶಿಕ್ಷಣಕ್ಕಾಗಿ ಆಕೆಯನ್ನು ಕಲಬುರಗಿಯ ವಿಶ್ವಲ್ ನಗರದಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಇರಿಸಿದ್ದಾರೆ. ಆರ್ಥಿಕ ಸಂಕಷ್ಟಗಳ ನಡುವೆಯೂ ಮಗಳ ಓದು ಮತ್ತು ಕ್ರೀಡಾ ಆಸಕ್ತಿಗೆ ಬೆಂಬಲ ನೀಡುತ್ತಿದ್ದಾರೆ.*5ನೇ ತರಗತಿಯಿಂದಲೇ ಕ್ರಿಕೆಟ್ ಅಭ್ಯಾ: ವೈಷ್ಣವಿಗೆ ಆರಂಭದಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರಲಿಲ್ಲ. 5ನೇ ತರಗತಿಯಲ್ಲಿ ಶಾಲೆಗೆ ಸೇರಿದ ಬಳಿಕ ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ ಕೋಬಾಳ ಅವರ ಮೂಲಕ ಕ್ರಿಕೆಟ್ ಪರಿಚಯವಾಯಿತು. ನಂತರ ಎನ್‌ವಿ ಡಿಗ್ರಿ ಕಾಲೇಜು ಕ್ರಿಕೆಟ್ ಕ್ಲಬ್‌ನಲ್ಲಿ ತರಬೇತಿ ಪಡೆಯಲು ಆರಂಭಿಸಿದಳು. ಕೋಚ್‌ಗಳಾದ ಕೃಷ್ಣ, ನರೇಂದ್ರ, ಸಚಿನ್ ಹಾಗೂ ದೈಹಿಕ ಶಿಕ್ಷಕ ಸಂತೋಷ ಕೋಬಾಳ ಅವರ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ನಡೆಸಿದಳು. ಆರಂಭದಲ್ಲಿ ಕ್ರಿಕೆಟ್‌ನ ಗಂಧಗಾಳಿಯೂ ತಿಳಿಯದಿದ್ದ ಬಾಲಕಿ, ಇಂದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ. ಹೀಗೇ ತನ್ನ ಸಾಧನೆ ಹಾಗೂ ಪರಿಶ್ರಮದ ಮೂಲಕವೇ ಈ ಪ್ರತಿಭೆ ರಾಷ್ಟ್ರ ಮಠದಲ್ಲಿ ಬೆಳಕು ಕಂಡಿದೆ. ಆ ಮೂಲಕ ಸೇಡಂ, ಕಲಬುರಗಿ ಕೀರ್ತಿ ಪತಾಕೆ ರಾಷ್ಟ ಮಠದಲ್ಲಿ ಹಾರುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾಳೆ.