ಮನರೇಗಾ ಮರು ಸ್ಥಾಪನೆಗಾಗಿ ಕೃಷಿ ಕಾಯ್ದೆ ವಿರುದ್ಧ ನಡೆದಂತೆ ಚಳವಳಿ

KannadaprabhaNewsNetwork |  
Published : Jan 25, 2026, 02:15 AM IST
ಆಶ್ರಯ ಮನೆಗಳ ಉದ್ಘಾಟನೆ | Kannada Prabha

ಸಾರಾಂಶ

ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮಗಳನ್ನು ಯಾವುದೇ ಜಾತಿ-ಮತ-ಬೇಧವಿಲ್ಲದೇ ನೀಡಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಬಡವರಿಗಾಗಿ ಏನೂ ಮಾಡಿದೆ ಹೇಳಿ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಹುಬ್ಬಳ್ಳಿ:

ಬಡ ಜನರಿಗೆ, ಕೂಲಿ ಕಾರ್ಮಿಕರಿಗೆ ಇದ್ದಲ್ಲಿಯೇ ಉದ್ಯೋಗದ ಅವಕಾಶ ಕಲ್ಪಿಸುತ್ತಿದ್ದ ಮನರೇಗಾ ಯೋಜನೆ ರದ್ದು ಮಾಡಿ ವಿಬಿ ಜಿ ರಾಮ್‌ ಜಿ ತರುತ್ತಿರುವ ವಿರುದ್ಧ ಈ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕರಾಳ ರೈತ ವಿರೋಧಿ ಕರಾಳ ಕೃಷಿ ಕಾನೂನಿನ ವಿರುದ್ಧ ನಡೆಸಿದ ಮಾದರಿಯಲ್ಲೇ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಎಲ್ಲರೂ ಅದಕ್ಕೆ ಬೆಂಬಲ ನೀಡಬೇಕೆಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಶನಿವಾರ ವಸತಿ ಇಲಾಖೆಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಪೂರ್ಣಗೊಂಡ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ ರಾಜ್ಯದ 42345 ಮನೆಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮನರೇಗಾ ಬದಲಿಸಿದ ಕೇಂದ್ರ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸರ್ಕಾರ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಯಾವ ರೀತಿ ರೈತರ ಮೂರು ಕಪ್ಪು ಕಾನೂನುಗಳ ವಿರುದ್ಧ ಹೋರಾಟ ಮಾಡಿ ಅದನ್ನು ವಾಪಸ್‌ ಪಡೆಯುವಂತೆ ಮಾಡಿದರೋ ಅದೇ ಮಾದರಿಯಲ್ಲಿ ಹೋರಾಟಕ್ಕೆ ಸಿದ್ಧರಾಗುತ್ತಿದ್ದೇವೆ. ಹೋರಾಟಕ್ಕೆ ಬೆಂಬಲ ನೀಡಲು ನೀವು ಸಹ ತಯಾರು ಇರಬೇಕು ಎಂದು ಮನವಿ ಮಾಡಿದರು.

ನಮ್ಮ ಹಳಿ ಮೇಲೆ ಮೋದಿ ರೈಲು:

ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮಗಳನ್ನು ಯಾವುದೇ ಜಾತಿ-ಮತ-ಬೇಧವಿಲ್ಲದೇ ನೀಡಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಬಡವರಿಗಾಗಿ ಏನೂ ಮಾಡಿದೆ ಹೇಳಿ ಎಂದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಮನರೇಗಾದಲ್ಲಿನ ಗಾಂಧೀಜಿ ಹೆಸರು ತೆಗೆದರು. ನೆಹರೂ ಸೇರಿದಂತೆ ಇಂದಿರಾಗಾಂಧಿ, ಸೋನಿಯಾ ಗಾಂಧಿ, ರಾಹುಲ್‌ ಗಾಂಧಿಯನ್ನು ಬರೀ ಬಯ್ಯೋದನ್ನೇ ಮಾಡುತ್ತಾರೆ. ಅದನ್ನು ಹೊರತು ಪಡಿಸಿ ದೇಶದ ಜನರಿಗೆ ಯಾವ ಉತ್ತಮ ಕಾರ್ಯಕ್ರಮ ನೀಡಿಲ್ಲ. ದೊಡ್ಡ ಬಾಯಿ ಮಾಡಿ ಕಾಂಗ್ರೆಸ್ಸಿಗರನ್ನು ಬೈಯ್ಯುವುದಲ್ಲ, ಜನರ ಹೊಟ್ಟಿಗೆ ಅನ್ನ, ತಲೆ ಮೇಲೆ ಸೂರು, ಕೈಗೆ ಕೆಲಸ ನೀಡಿದಾಗ ಮಾತ್ರ ಜನರು ಸುಖ ಹಾಗೂ ಸಮೃದ್ಧಿಯಿಂದ ಇರುತ್ತಾರೆ. ಅವತ್ತು ನಾವು ದೊಡ್ಡ ದೊಡ್ಡ ಆಣೆಕಟ್ಟು, ವಿದ್ಯುತ್ ಸ್ಥಾವರ, ರೇಲ್ವೆ ಯೋಜನೆಗಳನ್ನು ಮಾಡಿದ್ದರಿಂದಲೇ ಇವತ್ತು ದೇಶದ ಜನರು ಉಸಿರಾಡುತ್ತಿದ್ದಾರೆ. ನಾವು ಮಾಡಿದ ರೈಲು ಹಳಿ ಮೇಲೆ ಮೋದಿ ಅವರು ಹೊಸ ಹೊಸ ರೈಲುಗಳನ್ನು ಬಿಡುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

ಬಡ ಜನರ ಕೈಗೆ ಕೆಲಸ ಸಿಗಲೆಂದು ಸೋನಿಯಾ ಗಾಂಧಿ ಹಾಗೂ ಮನಮೋಹನ ಸಿಂಗ್‌ ಮನರೇಗಾ ಆರಂಭಿಸಿದರು. ವರ್ಷದ 365 ದಿನ ಕೆಲಸ ಕೊಡಲಾಗದೇ ಇದ್ದರೂ 100 ದಿನಗಳಾದರೂ ಕೆಲಸ ಸಿಗಲಿ ಎಂಬ ಆಶಯ ಹೊಂದಲಾಗಿತ್ತು. ಆದರೆ, ಕೇಂದ್ರದ ಬಿಜೆಪಿ ಆದ್ಯಾವುದೋ ಜಿ ರಾಮಜೀ ಕಾನೂನು ತಂದು ಯೋಜನೆಯ ದಾರಿ ತಪ್ಪಿಸಿದೆ. ಈ ಮೊದಲು ಯೋಜನೆಗೆ 90-10ರ ಅನುಪಾತದಲ್ಲಿ ಹಣ ಬರುತ್ತಿತ್ತು. ಪಂಚಾಯ್ತಿ ಮಟ್ಟದಲ್ಲಿಯೇ ಕಾರ್ಯಕ್ರಮ ರೂಪಿಸಿ ಜಾರಿಗೆ ತರುತ್ತಿದ್ದವು. ಆದರೆ ಈಗ 60-40ರ ಅನುಪಾತದಲ್ಲಿ ರಾಜ್ಯ ಸರ್ಕಾರದ ಮೇಲೆ ಭಾರ ಹಾಕಲಾಗಿದೆ. ಜೊತೆಗೆ 45 ದಿನಗಳಾದರೂ ಕೆಲಸ ಕೊಡಲು ಈ ಸರ್ಕಾರಕ್ಕೆ ಆಗುತ್ತಿಲ್ಲ. ಜೊತೆಗೆ ಒಂದು ದಿನದ ಕೂಲಿಗೆ ಕನಿಷ್ಠ ರು.400 ಕೊಡಬೇಕೆಂದು ಸೋನಿಯಾ ಗಾಂಧಿ ಪ್ರಯತ್ನಿಸಿದ್ದು, ಅದನ್ನೆಲ್ಲಾ ಈ ಮೋದಿ ಸರ್ಕಾರ ಬದಲು ಮಾಡಿದೆ. ಮನ ಬಂದಂತೆ ಮಸೂದೆ ಬದಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರಜಾತಂತ್ರ ಉಳಿಸಲು ಕೇಂದ್ರ ವಿರುದ್ಧ ಹೋರಾಟ

ಪ್ರಜಾಪ್ರಭುತ್ವ ಉಳಿಸಲು ಹಾಗೂ ದೇಶದ ಜನರು ಗುಲಾಮಗಿರಿಯಿಂದ ಮತ್ತೊಮ್ಮೆ ಹೊರ ಬರಲು ಮುಂಬರುವ ಯಾವುದೇ ಚುನಾವಣೆಗಳಲ್ಲಿ ಮತದಾರರು ಬಿಜೆಪಿ ವಿರುದ್ಧ ಮತ ಚಲಾಯಿಸಬೇಕು ಎನ್ನುವ ಮೂಲಕ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು 1972-73ರಲ್ಲಿ ಬಡವರಿಗೆ ಸೂರು ನೀಡಲು ಜನತಾ ಮನೆಗಳನ್ನು ನೀಡುವ ಮೂಲಕ ಈ ಪರಂಪರೆ ಶುರು ಮಾಡಿದ್ದು, ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ, ಏಳುವರೆ ಲಕ್ಷ ರುಪಾಯಿ ವೆಚ್ಚದ ಮನೆಗಳನ್ನು ಬರೀ ಒಂದು ಲಕ್ಷ ರುಪಾಯಿ ವೆಚ್ಚದಲ್ಲಿ ಲಕ್ಷಾಂತರ ಬಡ ಕಟುಂಬಗಳಿಗೆ ನೀಡುತ್ತಿದೆ. ಕೆಲವು ಮನೆಗಳನ್ನು ಸ್ವತಃ ವೀಕ್ಷಿಸಿದ್ದು ಗುಣಮಟ್ಟದ್ದಾಗಿದ್ದು ನೀರು, ವಿದ್ಯುತ್‌, ರಸ್ತೆ ಸೇರಿ ಮೂಲಭೂತ ಸೌಕರ್ಯಗಳೂ ಇವೆ. ದೇಶದ ಯಾವ ರಾಜ್ಯದಲ್ಲೂ ಇಂತಹ ಸೂರು ನೀಡುವ ಕಾರ್ಯ ನಡೆದಿಲ್ಲ ಎಂದರು. ಕೈಗೊಂಬೆ ರಾಜ್ಯಪಾಲರು..

ಕೇಂದ್ರ ಬಿಜೆಪಿ ಸರ್ಕಾರ ದೇಶದಲ್ಲಿ ಬಿಜೆಪಿ ಹೊರತು ಪಡಿಸಿ ಇರುವ ರಾಜ್ಯ ಸರ್ಕಾರಗಳ ರಾಜ್ಯಪಾಲರನ್ನು ಕೈಗೊಂಬೆಯಂತೆ ಬಳಸಿಕೊಳ್ಳುತ್ತಿದೆ. ರಾಜ್ಯ ಸರ್ಕಾರ ಹೇಳಿದ ಭಾಷಣ ಮಾಡದಂತೆ ಪ್ರಧಾನ ಮಂತ್ರಿ ಕಚೇರಿ, ಗೃಹ ಕಚೇರಿಯಿಂದ ರಾಜ್ಯಪಾಲರಿಗೆ ಆದೇಶ ಬರುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಗಳ ಒಳ್ಳೆಯ ಕಾರ್ಯಗಳಿಗೆ ಹಾಗೂ ಮಸೂದೆಗಳಿಗೆ ಹಿನ್ನಡೆಯಾಗುತ್ತಿದೆ. ಇದು ಬರೀ ಕರ್ನಾಟಕ ಮಾತ್ರವಲ್ಲದೇ, ತಮಿಳುನಾಡು ಹಾಗೂ ಕೇರಳದಲ್ಲೂ ಆಗಿದೆ. ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳನ್ನು ಸಹ ಹಿಡಿತಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಬಡವರು, ಮಧ್ಯಮ ವರ್ಗದವರು ಸಂಘಟಿತರಾಗಿ ಶಕ್ತಿ ಪ್ರದರ್ಶನ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಭಾರತ ದೇಶಕ್ಕೆ ಹಿಟ್ಲರ್‌, ಮುಸೋಲೋನಿ ಹಾಗೂ ಸದ್ದಾಂ ಹುಸೇನ ಅಂತಹ ರಾಜರು ನಿರಂತರ ಆಳ್ವಿಕೆ ನಡೆಸಲಿದ್ದಾರೆ ಎಂದು ಖರ್ಗೆ ಎಚ್ಚರಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ ಅಹಮ್ಮಖಾನ್‌, ಲೋಕೋಪಯೋಗಿ ಸಚಿವ ಸತೀಶ ಜಾರಕೀಹೊಳಿ, ಕಾರ್ಮಿಕ ಸಚಿವ ಸಂತೋಷ ಲಾಡ್‌, ಕಾನೂನು ಸಚಿವ ಎಚ್‌.ಕೆ. ಪಾಟೀಲ ಸೇರಿದಂತೆ ಕಾಂಗ್ರೆಸ್‌ ಮುಖಂಡರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!