ಸಾಂಸ್ಕೃತಿಕ ತಳಹದಿ ಮೇಲೆ ಬೆಳೆದಿರುವ ರಾಷ್ಟ್ರಕ್ಕೆ ಉಜ್ವಲ ಭವಿಷ್ಯವಿದೆ-ಶಾಸಕ ಮಾನೆ

KannadaprabhaNewsNetwork |  
Published : Nov 24, 2025, 03:15 AM IST
ಫೋಟೊ: 20ಎಚ್‌ಎನ್‌ಎಲ್1 | Kannada Prabha

ಸಾರಾಂಶ

ರಾಷ್ಟ್ರವೊಂದರ ನಿಜವಾದ ಅಭಿವೃದ್ಧಿ ಎಂದರೆ ಅದು ಆರ್ಥಿಕ ಅಭಿವೃದ್ಧಿಯಲ್ಲ, ಬದಲಿಗೆ ಸಾಂಸ್ಕೃತಿಕ ಶ್ರೀಮಂತಿಕೆ. ಸಾಹಿತ್ಯ, ಕಲೆ, ಸಂಸ್ಕೃತಿ ಎಲ್ಲಿ ಗಟ್ಟಿಯಾದ ತಳಹದಿಯ ಮೇಲೆ ಬೆಳೆದಿರುತ್ತದೆಯೋ ಆ ರಾಷ್ಟ್ರಕ್ಕೆ ಉಜ್ವಲ ಭವಿಷ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ರಾಷ್ಟ್ರವೊಂದರ ನಿಜವಾದ ಅಭಿವೃದ್ಧಿ ಎಂದರೆ ಅದು ಆರ್ಥಿಕ ಅಭಿವೃದ್ಧಿಯಲ್ಲ, ಬದಲಿಗೆ ಸಾಂಸ್ಕೃತಿಕ ಶ್ರೀಮಂತಿಕೆ. ಸಾಹಿತ್ಯ, ಕಲೆ, ಸಂಸ್ಕೃತಿ ಎಲ್ಲಿ ಗಟ್ಟಿಯಾದ ತಳಹದಿಯ ಮೇಲೆ ಬೆಳೆದಿರುತ್ತದೆಯೋ ಆ ರಾಷ್ಟ್ರಕ್ಕೆ ಉಜ್ವಲ ಭವಿಷ್ಯವಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. ತಾಲೂಕಿನ ಆಡೂರು ಗ್ರಾಮದಲ್ಲಿ ಮಾತೃನುಡಿ ಕಲಾಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮಾತೃನುಡಿ ಸಂಭ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವೆಲ್ಲರೂ ಕನ್ನಡಿಗರೆಂಬ ಹೆಮ್ಮೆ ನಮ್ಮಲ್ಲಿ ಮೂಡಬೇಕಾದರೆ, ನಾವು ನಿಜವಾದ ಕನ್ನಡಿಗರಾಗಬೇಕಾದರೆ ಕರ್ನಾಟಕದ ನೆಲ-ಜಲ ರಕ್ಷಣೆ ಮತ್ತು ಸಮಾಜ ಸಂಘಟನೆಗೆ ನಮ್ಮ ಕೊಡುಗೆಯನ್ನೇನಾದರೂ ನೀಡಲೇಬೇಕು. ಇಲ್ಲಿ ಹುಟ್ಟಿದ ಮಾತ್ರಕ್ಕೆ ಕನ್ನಡಿಗರೆನಿಸಿಕೊಳ್ಳಲು ಸಾಧ್ಯವಿಲ್ಲ. ಸಾಹಿತ್ಯ ಸಮಾಜ ತಿದ್ದಿ ಅಭಿವೃದ್ಧಿ ಕಡೆಗೆ ಮುಖ ಮಾಡಲು ಮಾರ್ಗದರ್ಶನ ನೀಡುತ್ತದೆ. ವಿಶ್ವ ಭಾಷೆಗಳಲ್ಲಿ ಕನ್ನಡಕ್ಕೆ ವಿಶೇಷವಾದ ಸ್ಥಾನವಿದೆ. ಹೆಚ್ಚು ಜ್ಞಾನಪೀಠ ಪ್ರಶಸ್ತಿ ಮುಡಿಗೇರಿಸಿಕೊಂಡ ಬೇರೊಂದು ಭಾಷೆ ಭಾರತದಲ್ಲಿಲ್ಲ. ಆದರೆ ನಮ್ಮ ಅಭಿಮಾನ ಶೂನ್ಯತೆಯಿಂದ ನಮ್ಮದೇ ನಾಡಿನಲ್ಲಿ ನಾವು ಭಾಷಾರಕ್ಷಣೆಗೆ ಸಂಘಟನೆ ಕಟ್ಟಿಕೊಳ್ಳಬೇಕಾದ ಸಂದರ್ಭ ಬಂದೊದಗಿರುವುದು ಖೇದದ ಸಂಗತಿ ಎಂದರು. ಸಾನ್ನಿಧ್ಯ ವಹಿಸಿದ್ದ ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕನ್ನಡ ನಾಡು ಸಾವಿರಾರು ವರ್ಷಗಳ ತನ್ನ ಸುಧೀರ್ಘ ಇತಿಹಾಸದಲ್ಲಿ ಮನುಕುಲದ ಉದ್ಧಾರಕ್ಕೆ ಬೇಕಾಗಿರುವ ಎಲ್ಲ ಸಂಗತಿಗಳನ್ನೂ ಪ್ರಬುದ್ಧವಾಗಿ ಹೊಂದಿಕೊಂಡು ಬಂದಿದೆ. ಇಲ್ಲಿನ ಆಚಾರ, ವಿಚಾರ, ವೈದ್ಯ, ಭಾಷೆ, ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿಯಾದ್ದದ್ದು. ನಮ್ಮತನ ಅರಿತು, ಅಳವಡಿಸಿಕೊಂಡಾಗ ಅದು ವೇದ್ಯವಾಗುತ್ತದೆ. ಆ ಹಿನ್ನೆಲೆಯಲ್ಲಿ ಕನ್ನಡಿಗರು ಆತ್ಮಾಭಿಮಾನ ಹೊಂದಬೇಕಾಗಿರುವುದು ಸದ್ಯದ ತುರ್ತು ಅಗತ್ಯವಾಗಿದೆ. ಯೋಗ, ಗೋಸಂರಕ್ಷಣೆ ಮೊದಲಾದ ಪದ್ಧತಿಗಳನ್ನು ನೂರಾರು ವರ್ಷಗಳ ಹಿಂದೆಯೇ ಹಾನಗಲ್ಲಿನ ಲಿಂ.ಕುಮಾರ ಶಿವಯೋಗಿಗಳು ಶಿವಯೋಗ ಮಂದಿರದ ಮೂಲಕ ನಾಡಿಗೆ ಹಂಚುವ ಮೂಲಕ ಎಲ್ಲರ ಆರೋಗ್ಯಪೂರ್ಣ ಬದುಕಿಗೆ ಅವಕಾಶ ಕಲ್ಪಿಸಿದ್ದರು. ಯೋಗ ರೋಗ ದೂರ ಮಾಡಿದರೆ, ಗೋವು ಚೇತನ್ಯ ಮತ್ತು ಪರೋಪಕಾರದ ಸಂಕೇತವಾಗಿದೆ. ಪಾಶ್ಚಾತ್ಯರು ಕೂಡ ನಮ್ಮ ಈ ಒಳಿತನ್ನು ಅನುಸರಿಸುವ ಸಂದರ್ಭದಲ್ಲಿ ನಾವು ಪಾಶ್ಚಾತ್ಯ ಶೈಲಿಗೆ ಮಾರುಹೋಗಿ ಬದುಕಿನ ನೆಮ್ಮದಿ ಕಳೆದುಕೊಂಡು ತೊಳಲುತ್ತಿರುವುದು ವಿಪರ್ಯಾಸ ಎಂದರು. ಬಿಜಕಲ್ ವಿರಕ್ತಮಠದ ಶಿವಲಿಂಗ ಸ್ವಾಮೀಜಿ ಸಮ್ಮುಖವಹಿಸಿದ್ದರು. ಕಲಾಸಂಘದ ಅಧ್ಯಕ್ಷ ಗುಡ್ಡಪ್ಪ ಪೋಲೇಶಿ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಜಿಪಂ ಮಾಜಿ ಸದಸ್ಯರಾದ ಎನ್.ಬಿ.ಪೂಜಾರ, ಟಾಕನಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಗ್ರಾಪಂ ಅಧ್ಯಕ್ಷ ಮಾರ್ತಾಂಡಪ್ಪ ಬಾರ್ಕಿ, ಅನಿತಾ ಶಿವೂರ, ಭರಮಣ್ಣ ಶಿವೂರ, ಮೈಲಾರೆಪ್ಪ ಬಾರ್ಕಿ, ಚಂದ್ರಪ್ಪ ಜಾಲಗಾರ, ಶರಣ ಬಳಿಗಾರ, ಉಮೇಶ ಗೌಳಿ ಇದ್ದರು.

PREV

Recommended Stories

ರಾಜಾಪುರ ಕ್ರೆಡಿಟ್ ಸೊಸೈಟಿ, ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿವೇತನ ವಿತರಣೆ
ಕನ್ನಡ ನಾಡು ನುಡಿ ರಕ್ಷಣೆಗೆ ಸರ್ಕಾರ ಬದ್ಧ: ಎನ್ ಎಸ್ ಬೋಸುರಾಜ್