ಜಯಮಂಗಲಿ ಉಗಮ ಸ್ಥಾನದಲ್ಲಿ ಹೊಸ ಜೇಡ ಪತ್ತೆ

KannadaprabhaNewsNetwork | Published : Oct 14, 2024 1:23 AM

ಸಾರಾಂಶ

ತುಮಕೂರಿನ ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನದಲ್ಲಿ ಹೊಸ ಜೇಡವನ್ನು ಪತ್ತೆ ಮಾಡಲಾಗಿದ್ದು, ಅದಕ್ಕೆ ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ.

ತೆಂಕಣ ಜಯಮಂಗಲಿ ಎಂದು ನಾಮಕರಣ । ಸಂಶೋಧನಾ ಬರಹ ಅಂತಾರಾಷ್ಟ್ರೀಯ ಜರ್ನಲ್ ಝೂಕೀಸ್ ನಿಯತಕಾಲಿಕೇಲಿ ಪ್ರಕಟಕನ್ನಡಪ್ರಭ ವಾರ್ತೆ ತುಮಕೂರುದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನದಲ್ಲಿ ಹೊಸ ಜೇಡವನ್ನು ಪತ್ತೆ ಮಾಡಲಾಗಿದ್ದು, ಅದಕ್ಕೆ ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ.

ಜಿಲ್ಲೆಯ ದೇವರಾಯನದುರ್ಗದ ಜಯಮಂಗಲಿ ಉಗಮ ಸ್ಥಾನ ಪ್ರದೇಶದಲ್ಲಿ ಜೇಡರ ಹುಳು ತಜ್ಞರಾದ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ಜಿ.ನಿಶಾ, ಚಿನ್ಮಯ್ ಸಿ.ಮಲಿಯೆ, ಡಬ್ಲ್ಯೂ ಡಬ್ಲ್ಯೂ ಸಂಸ್ಥೆಯ ಲೋಹಿತ್ ವೈ.ಟಿ. ಇವರು ಗಿಡ, ಮರಗಳಿಂದ ಬಿದ್ದ ಒಣ ತರಗೆಲೆಗಳಲ್ಲಿ ಜಂಪಿಂಗ್ ಸ್ಪೆಂಡರ್ ಗುಂಪಿನ ಈ ಜೇಡರ ಹುಳುಗಳ ಆವಾಸ, ವರ್ತನೆಯ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡಿದ್ದರು.

ಇತರೆ ಜೇಡರ ಹುಳುಗಳಿಗಿಂತ ಬಿನ್ನವಾಗಿರುವುದರಿಂದ ಈ ಜೇಡದ ಹೆಣ್ಣು ಮತ್ತು ಗಂಡು ಮಾದರಿಗಳನ್ನು ವಂಶವಾಹಿ ಡಿ.ಎನ್.ಎ ಹಾಗೂ ಅಣು ಮಟ್ಟದ ಅಧ್ಯಯನಕ್ಕಾಗಿ ಜಾನ್ ಕೆಲಬ್, ಕಿರಣ್ ಮರಾಠೆ, ಕೃಷ್ಣಮೇಘ ಕುಂಟೆ ಹಾಗೂ ಕೆನಡಾದ ವೈನೆ ಮ್ಯಾಡಿಸನ್ ವಿಜ್ಞಾನಿಗಳಿಗೆ ಕಳುಹಿಸಲಾಗಿತ್ತು.

ಬೇರೆ ಜೇಡಗಳ ಜೊತೆ ಈ ಜೇಡದ ಡಿ.ಎನ್.ಎ ಮ್ಯಾಪಿಂಗ್ ಮಾಡಿದಾಗ ಸಂಪೂರ್ಣ ಭಿನ್ನವಾಗಿರುವ ಅಣು ಸಂಯೋಜನೆ ಕಂಡುಬಂದಿರುವುದರಿಂದ ಇದನ್ನು ತೆಂಕಣ ಜಯಮಂಗಲಿ ಎಂದು ನಾಮಕರಣ ಮಾಡಲಾಗಿದೆ. ಹೊಸ ಜಾತಿಗೆ ತೆಂಕಣ (ದಕ್ಷಿಣ ಏಷ್ಯಾ) ಎಂತಲೂ ಮತ್ತು ಪ್ರಭೇದ ಜಯಮಂಗಲಿ (ಜಯಮಂಗಲಿ ಉಗಮ ಸ್ಥಾನ) ಎಂದು ಹೆಸರಿಸಲಾಗಿದೆ.

ಇಂತಹ ವಿಭಿನ್ನ ಲಕ್ಷಣದ ನಿಖರ ಮಾಹಿತಿಯ ಸಂಶೋಧನಾ ಬರಹ ಅಂತಾರಾಷ್ಟ್ರೀಯ ಜರ್ನಲ್ ಝೂಕೀಸ್ ನಿಯತಕಾಲಿಕೆಯಲ್ಲಿ ಅ.11ರ ಸಂಚಿಕೆಯಲ್ಲಿ ಪ್ರಕಟವಾಗಿದೆ. ಬೆಂಗಳೂರಿನ ಜೀವ ವಿಜ್ಞಾನ ಕೇಂದ್ರ (ಎನ್‌ಸಿಬಿಎಸ್) ಮತ್ತುಬ್ರಿಟಿಷ್ ಕೊಲಂಬಿಯಾ ಲ್ಯಾಬ್ ಸಹಯೋಗದಲ್ಲಿ ಈ ಸಂಶೋಧನೆ ಮಾಡಿದ್ದಾರೆ.

ಜೇಡಗಳು ಪರಿಸರ ಸಮತೋಲನೆಯಲ್ಲಿ, ಆಹಾರ ಜಾಲ ಹಾಗೂ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುವ ಈ ಜೀವಿಗಳು ಬೇಸಿಗೆಯಲ್ಲಿ ಬೀಳುವ ಕಾಡಿನ ಬೆಂಕಿಯಿಂದ ನೆಲ ಮಟ್ಟದಲ್ಲಿರುವ ಇಂತಹ ಹಲವು ಜೀವಿಗಳು ಹೊಸ ಪ್ರಪಂಚಕ್ಕೆ ಗೊತ್ತಾಗುವ ಮುನ್ನವೆ ವಿನಾಶ ಹೊಂದುತ್ತವೆ. ಪ್ರಪಂಚದಲ್ಲಿ ಸುಮಾರು 51929 ಪ್ರಭೇದಗಳಿದ್ದರೆ, ನಮ್ಮ ದೇಶದಲ್ಲಿ 1871 ಪ್ರಭೇದಗಳಿವೆ, ತುಮಕೂರು ಜಿಲ್ಲೆಯಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರಭೇದಗಳನ್ನು ಪತ್ತೆ ಹಚ್ಚಲಾಗಿದೆ.

Share this article