ಕನ್ನಡಪ್ರಭ ವಾರ್ತೆ ಹಾಸನ
ಹಾಸನ ಸಹಕಾರಿ ಹಾಲು ಒಕ್ಕೂಟದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಕ್ಕೂಟವು ೨೦೨೫-೨೬ನೇ ಸಾಲಿನಲ್ಲಿ ₹೨,೭೧೩.೧೯ ಕೋಟಿ ವಹಿವಾಟು ನಡೆಸಿದ್ದು, ಹಿಂದಿನ ಸಾಲಿಗಿಂತ ಶೇ.೧೩.೪೧ರಷ್ಟು ಪ್ರಗತಿ ದಾಖಲಿಸಿದೆ. ತೆರಿಗೆ ಪೂರ್ವ ₹೨೬.೭೪ ಕೋಟಿ ಲಾಭ ಗಳಿಸಿರುವುದು ಆರ್ಥಿಕವಾಗಿ ಒಕ್ಕೂಟದ ಸದೃಢತೆಯನ್ನು ತೋರಿಸಿದೆ. ವಿವಿಧ ನಿಧಿ ಹಾಗೂ ತೆರಿಗೆ ಬಾಬ್ತುಗಳನ್ನು ಕಳೆದ ನಂತರ ಉಳಿದ ₹೫.೩೨ ಕೋಟಿ ನಿವ್ವಳ ಲಾಭವನ್ನು ಸದಸ್ಯ ಸಂಘಗಳಿಗೆ ಬೋನಸ್, ಡಿವಿಡೆಂಡ್ ಮತ್ತಿತರ ರೂಪದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ೧,೭೬೪ ಹಾಲು ಉತ್ಪಾದಕರ ಸಹಕಾರ ಸಂಘಗಳು ಒಕ್ಕೂಟದ ಪ್ರಮುಖ ಶಕ್ತಿಯಾಗಿವೆ. ಈ ಸಂಘಗಳಿಂದ ಪ್ರಸ್ತುತ ಪ್ರತಿದಿನ ಸರಾಸರಿ ೧೫ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಗರಿಷ್ಠ ೧೬.೬೬ ಲಕ್ಷ ಲೀಟರ್ ಸಂಗ್ರಹವಾಗಿರುವುದು ಹಾಸನದ ಹೈನುಗಾರಿಕೆಯ ವ್ಯಾಪ್ತಿಯನ್ನು ಸೂಚಿಸುತ್ತದೆ. ಹಾಲಿನ ಉತ್ಪಾದನೆ ಹೆಚ್ಚುತ್ತಿರುವುದೇ ಒಂದು ಕಡೆ ಸಂತಸದ ಸಂಗತಿಯಾದರೂ, ಅದಕ್ಕೆ ತಕ್ಕ ಮಾರುಕಟ್ಟೆ ಸೃಷ್ಟಿಸುವುದು ಒಕ್ಕೂಟದ ಮುಂದಿರುವ ದೊಡ್ಡ ಸವಾಲಾಗಿದೆ. ಸ್ಥಳೀಯ ಮಾರುಕಟ್ಟೆಯ ಮಿತಿಯಿಂದಾಗಿ ಪ್ರತಿದಿನ ೪.೫ರಿಂದ ೫ ಲಕ್ಷ ಲೀಟರ್ ಹಾಲನ್ನು ಪರಿವರ್ತನೆಗೆ ಕಳುಹಿಸುವ ಪರಿಸ್ಥಿತಿ ಇದೆ. ಹೀಗಾಗಿ ಬೆಂಗಳೂರು ಮಾರುಕಟ್ಟೆಯಲ್ಲಿ ಹಾಸನಕ್ಕೆ ಸೂಕ್ತ ಪಾಲು ನೀಡಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಕಳೆದ ೧೨ ವರ್ಷಗಳಿಂದ ಈ ಬೇಡಿಕೆ ಮುಂದುವರಿದಿದ್ದರೂ, ಈ ಬಾರಿ ಹೆಚ್ಚುವರಿ ಹಾಲಿನ ಪ್ರಮಾಣ ಮತ್ತು ಹೊಸ ಮೆಗಾ ಡೈರಿ ಹಿನ್ನೆಲೆ ಬೇಡಿಕೆಗೆ ಮತ್ತಷ್ಟು ಮಹತ್ವ ಬಂದಿದೆ ಎಂದು ಹೇಳಿದರು.
₹೮೩೦ ಕೋಟಿ ವೆಚ್ಚದ ಮೆಗಾ ಡೈರಿ ಶೀಘ್ರ ಕಾರ್ಯಾರಂಭ:ಹಾಸನದ ಕೈಗಾರಿಕಾ ವಸಾಹತುವಿನಲ್ಲಿ ಸುಮಾರು ೭೮ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ₹೮೩೦.೬೬ ಕೋಟಿ ವೆಚ್ಚದ ಮೆಗಾ ಡೈರಿ ಯೋಜನೆ ಈಗ ಅಂತಿಮ ಹಂತ ತಲುಪಿದೆ. ಹಾಲು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಘಟಕವನ್ನು ಭವಿಷ್ಯದಲ್ಲಿ ೧೫ ಲಕ್ಷ ಲೀಟರ್ ಗೆ ವಿಸ್ತರಿಸುವ ಅವಕಾಶವಿದೆ. ಇದರ ಜತೆಗೆ ದಿನಕ್ಕೆ ೬೦ ಮೆಟ್ರಿಕ್ ಟನ್ ಹಾಲಿನ ಪುಡಿ ಉತ್ಪಾದಿಸುವ ಘಟಕವೂ ನಿರ್ಮಾಣಗೊಂಡಿದೆ. ಯಂತ್ರೋಪಕರಣಗಳ ಅಳವಡಿಕೆ ಸೇರಿದಂತೆ ಪ್ರಮುಖ ಕಾಮಗಾರಿಗಳು ಪೂರ್ಣಗೊಂಡಿದ್ದು, ಜುಲೈನಲ್ಲಿ ಟ್ರಯಲ್ ರನ್ ಕೂಡ ನಡೆಸಲಾಗಿದೆ. ಉಳಿದ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ, ೨೦೨೭ರ ಆರಂಭದಲ್ಲಿ ಮೆಗಾ ಡೈರಿ ಕಾರ್ಯಾರಂಭಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಹೊಸ ಮೆಗಾ ಡೈರಿ ಮತ್ತು ಹಾಲಿನ ಪುಡಿ ಘಟಕದ ಸಾಮರ್ಥ್ಯವನ್ನು ಬಳಸಿಕೊಂಡು ಹಾಸನದ ಹಾಲು ಉತ್ಪನ್ನಗಳಿಗೆ ದೇಶಿಯ ಮಾರುಕಟ್ಟೆಯಾಚೆಗೂ ದಾರಿ ತೆರೆಯಲು ಸಿದ್ಧತೆ ನಡೆದಿದೆ. ಯುಎಚ್ಟಿ ಹಾಲು, ಸುವಾಸಿತ ಹಾಲು ಸೇರಿದಂತೆ ವಿವಿಧ ಉತ್ಪನ್ನಗಳ ಜತೆಗೆ ಹೊಸ ಘಟಕಗಳಲ್ಲಿ ರಫ್ತು ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಉದ್ದೇಶ ಹೊಂದಲಾಗಿದೆ. ವಿದೇಶಗಳಿಗೆ ಹಾಲು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಕಳುಹಿಸಲು ಅಗತ್ಯ ರಫ್ತು ಪರವಾನಗಿ ಪಡೆಯುವ ಪ್ರಾಥಮಿಕ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ. ಇದು ಯಶಸ್ವಿಯಾದರೆ ಜಿಲ್ಲೆಯ ಹಾಲು ಉತ್ಪಾದಕರಿಗೆ ಹೊಸ ಮಾರುಕಟ್ಟೆ ಸಿಗುವ ಸಾಧ್ಯತೆ ಇದೆ ಎಂದರು. ಹಾಲು ಉತ್ಪಾದಕರ ಆರ್ಥಿಕ ೨೦೨೬-೨೭ರಿಂದ ೨೦೨೮-೨೯ರವರೆಗೆ ೧.೨೫ ಲಕ್ಷ ರಾಸುಗಳನ್ನು ವಿಮಾ ವ್ಯಾಪ್ತಿಗೆ ತರಲು ಯೋಜಿಸಲಾಗಿದೆ. ಪ್ರತಿ ರಾಸುವಿನ ಮೌಲ್ಯವನ್ನು ₹೭೦ ಸಾವಿರ ಎಂದು ಪರಿಗಣಿಸಿ, ವಿಮಾ ಪ್ರೀಮಿಯಂಗೆ ಸುಮಾರು ₹೨೪.೭೨ ಕೋಟಿ ಅನುದಾನ ನೀಡಲಾಗುತ್ತಿದೆ. ಹೈನುಗಾರಿಕೆ ರೈತರಿಗೆ ಹಸು ಖರೀದಿ, ಕೊಟ್ಟಿಗೆ ನಿರ್ಮಾಣ ಮತ್ತು ಅಗತ್ಯ ಉಪಕರಣಗಳ ಖರೀದಿಗೆ ₹೩ ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸುವ ಯೋಜನೆಯೂ ರೂಪಿಸಲಾಗಿದೆ. ಬರಗಾಲ, ಮೇವು ಕೊರತೆ, ಪಶುಗಳ ಅನಾರೋಗ್ಯ ಹಾಗೂ ಆಕಸ್ಮಿಕ ಸಾವಿನಿಂದ ರೈತರು ಆರ್ಥಿಕವಾಗಿ ಕುಸಿಯದಂತೆ ವಿಮಾ ರಕ್ಷಣೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘಗಳೇ ಒಕ್ಕೂಟದ ತಳಮಟ್ಟದ ಬಲ. ಹೀಗಾಗಿ ಸಂಘಗಳ ಮೂಲಸೌಕರ್ಯ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ೨೦೨೫-೨೬ರಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ₹೧೫.೬೩ ಕೋಟಿ ಸಹಾಯಧನ ನೀಡಲಾಗಿದ್ದು, ೨೦೨೬-೨೭ರಲ್ಲಿ ₹೧೯.೮೩ ಕೋಟಿ ನೆರವು ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಹಾಸನದಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ಹಾಲಿಗೆ ಶಾಶ್ವತ ಮಾರುಕಟ್ಟೆ, ಸಂಘಗಳ ಕಟ್ಟಡಗಳಿಗೆ ಹೆಚ್ಚಿನ ಅನುದಾನ, ರೈತರಿಂದ ನೇರವಾಗಿ ಕಚ್ಚಾ ವಸ್ತು ಖರೀದಿ, ಮಧ್ಯವರ್ತಿಗಳ ಹಾವಳಿ ನಿಯಂತ್ರಣ ಸೇರಿದಂತೆ ಹಲವು ಬೇಡಿಕೆಗಳನ್ನು ಕೆಎಂಎಫ್ ಮುಂದಿಡಲಾಗಿದೆ. ಹಾಲು, ತುಪ್ಪ, ಬೆಣ್ಣೆ ಸೇರಿದಂತೆ ಉತ್ಪನ್ನಗಳ ಮಾರಾಟದಲ್ಲಿ ಅನಗತ್ಯ ಕಮಿಷನ್ ವ್ಯವಸ್ಥೆಗೆ ಅವಕಾಶ ನೀಡಬಾರದು. ಕೆಎಂಎಫ್ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳ ಪಾಲಾಗದಂತೆ ರಕ್ಷಿಸಬೇಕು. ಬೆಂಗಳೂರಿನಲ್ಲಿ ಸಂಸ್ಥೆಗೆ ಲಭ್ಯವಿರುವ ಭೂಮಿ ಹಾಗೂ ಇತರೆ ಆಸ್ತಿಗಳನ್ನು ಸಂರಕ್ಷಿಸಿ, ಬೆಳೆಯುತ್ತಿರುವ ಮಾರುಕಟ್ಟೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ ಎಂದು ತಿಳಿಸಿದರು.