ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಐತಿಹಾಸಿಕ ಹಿನ್ನೆಲೆ ಮಳಲಿ ಲಕ್ಷ್ಮೀದೇವಿ ದೇವಾಲಯದಲ್ಲಿ ವಾರ್ಷಿಕ ₹1 ಕೋಟಿಗೂ ಅಧಿಕ ಆದಾಯ ಹೊಂದಿದೆ. ದೇವಾಲಯವನ್ನು ಯಾದವ ಸಮುದಾಯದ ಕುಟುಂಬಗಳ ಸದಸ್ಯರು ನೂರಾರು ವರ್ಷಗಳಿಂದ ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು. ಹತ್ತಾರು ವರ್ಷಗಳಿಂದ ೨೪ ಕುಟುಂಬಗಳ ಸದಸ್ಯರು ತಲಾ ಹದಿನೈದು ದಿನಗಳಂತೆ ಪೂಜೆ ನಡೆಸುತ್ತಿದ್ದರು. ಸರ್ಕಾರದಿಂದ ನೇಮಕವಾದ ಅರ್ಚಕರಿಗೆ ಮಾತ್ರ ಪೂಜೆಗೆ ಅವಕಾಶ ಎಂಬ ಆದೇಶದ ಹಿನ್ನೆಲೆ ೧೯ ಕುಟುಂಬಗಳ ಸದಸ್ಯರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಆರು ಕುಟುಂಬಗಳ ಸದಸ್ಯರಿಗೆ ಮಾತ್ರ ನೇಮಕಾತಿ ಆದೇಶ ನೀಡಲಾಗಿತ್ತು. ಸರ್ಕಾರದ ತಸ್ತಿಕ್ ಹಣವನ್ನು ಎಲ್ಲಾ ೨೪ ಕುಟುಂಬಕ್ಕೆ ನೀಡಲಾಗುತ್ತಿತ್ತು ಮತ್ತು ಅರ್ಜಿ ಸಲ್ಲಿಸಿದ್ದರೂ ಉಳಿದ ೧೩ ಕುಟುಂಬಗಳಿಗೆ ಇನ್ನೂ ನೇಮಕಾತಿ ಆದೇಶ ನೀಡಿಲ್ಲ ಮತ್ತು ನೇಮಕಾತಿ ನೀಡದ ಹಿನ್ನೆಲೆ ಪೂಜೆಯಿಂದ ಹೊರಗಿಡದಂತೆ ೧೩ ಕುಟುಂಬಗಳ ಸದಸ್ಯರು ಮನವಿ ಮಾಡಿದ್ದರು. ಆದರೆ ನೇಮಕಾತಿಗೊಂಡ ಅರ್ಚಕರಿಗೆ ಮಾತ್ರ ಪೂಜೆಗೆ ಅವಕಾಶ ನೀಡಿ ಎಂದು ನೇಮಕಗೊಂಡ ಅರ್ಚಕರು ಮನವಿ ಮಾಡಿದ್ದ ಹಿನ್ನೆಲೆ ಅರ್ಚಕರ ನಡುವಿನ ವೈಮನಸ್ಸು ಸ್ಪೋಟಗೊಂಡು ದೇವಾಲಯ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಕೇವಲ ಆರು ಕುಟುಂಬಗಳಿಗೆ ಏಕೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿದ ಅರ್ಚಕರು, ಹಿಂದಿನಿಂದಲೂ ೨೪ ಕುಟುಂಬಗಳು ಪೂಜೆ ಮಾಡಿಕೊಂಡು ಬರುತ್ತಿವೆ. ೨೪ ಅರ್ಚಕರ ಕುಟುಂಬಗಳಿಗೂ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ, ಅಲ್ಲಿಯವರೆಗೂ ದೇವಾಲಯದ ಬಾಗಿಲು ತೆರೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಅರ್ಚಕರು ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಅವರು ಶೀಘ್ರವಾಗಿ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದ ಕಾರಣದಿಂದ ಸ್ಥಗಿತವಾಗಿದ್ದ ಪೂಜೆ ಆರಂಭಗೊಂಡು, ಬೆಳಗ್ಗೆಯಿಂದ ಕಾದಿದ್ದ ಭಕ್ತರು ಶ್ರೀದೇವಿಯ ದರ್ಶನ ಪಡೆದರು.--------