ತಂಬಾಕು ರಹಿತ ದಿನ ನಿಜವಾಗಿ ಪಾಲನೆ ಆಗ್ತಿಲ್ಲ

KannadaprabhaNewsNetwork | Published : Jun 1, 2024 12:45 AM

ಸಾರಾಂಶ

ಮೇ ೩೧ ವಿಶ್ವ ತಂಬಾಕು ರಹಿತ ದಿನ ಅಂತ ಹೇಳ್ತಾ ಇದ್ದೀವಿ. ಆದರೆ ಪಾಲನೆ ಆಗ್ತಾ ಇಲ್ಲ ಎಂದು ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶಿವಕುಮಾರ ಜಿ.ಜೆ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮೇ ೩೧ ವಿಶ್ವ ತಂಬಾಕು ರಹಿತ ದಿನ ಅಂತ ಹೇಳ್ತಾ ಇದ್ದೀವಿ. ಆದರೆ ಪಾಲನೆ ಆಗ್ತಾ ಇಲ್ಲ ಎಂದು ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶಿವಕುಮಾರ ಜಿ.ಜೆ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಜಾಥಾಗೆ ಹಸಿರು ನಿಶಾನೆ ತೋರಿಸಿದ ಬಳಿಕ ಮಾತನಾಡಿದರು. ತಂಬಾಕು ಸೇವೆನೆ ಮಾಡೋನಿಗಿಂತ ಪಕ್ಕದಲ್ಲಿ ನಿಂತವನ ಆರೋಗ್ಯ ಕೆಡುತ್ತಿದೆ. ಸಾರ್ವಜನಿಕವಾಗಿ ತಂಬಾಕು ಸೇವಿಸುತ್ತಿದ್ದರೂ ಜನರು ಪ್ರತಿರೋಧ ಮಾಡುತ್ತಿಲ್ಲ. ಪ್ರತಿರೋಧಿಸುವ ಮನೋಭಾವನೆ ಬರೋ ತನಕ ತಂಬಾಕು ವಿರುದ್ಧ ಪ್ರಚಾರ, ಘೋಷಣೆಯಿಂದ ಏನು ಆಗಲ್ಲ ಎಂದರು.

ಮಕ್ಕಳಲ್ಲಿಯೂ ಚಟ: ಮಕ್ಕಳಲ್ಲಿ ನಿಕೋಟಿನ್‌ ಸೇವೆ ಚಟ ಹೆಚ್ಚಾಗುತ್ತಿದೆ. ತಂಬಾಕು ಚಟದಿಂದ ವಿದ್ಯಾಭ್ಯಾಸ, ಆರೋಗ್ಯ, ಕುಟುಂಬ ಹಾಳಾಗುತ್ತದೆ. ಶಾಲಾ ಆವರಣ ದುಶ್ಚಟಗಳ ತಾಣವಾಗಿದೆ ಎಂದರು. ಶಾಲಾ ಆವರಣದತ್ತ ಪೊಲೀಸರು ನಿಗಾ ವಹಿಸಿದರೆ ಮಕ್ಕಳಲ್ಲಿ ತಂಬಾಕು ಸೇವನೆ ತಡೆಗಟ್ಟಲು ಸಾಧ್ಯವಾಗಬಹುದಾಗಿದ್ದು, ತಂಬಾಕು ಚಟದಿಂದ ಅನಾರೋಗ್ಯಕ್ಕೆ ನಾಂದಿ ಹಾಡಲಿದೆ ಎಂದರು.

ಜಾಥಾ ಪರವಾಗಿಲ್ಲ: ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಪಟ್ಟಣದಲ್ಲಿ ಮಕ್ಕಳಿಂದ ಜಾಥಾ ಹಮ್ಮಿಕೊಂಡಿರುವುದು ಒಳ್ಳೆಯ ವಿಚಾರ. ಜಾಥಾದಿಂದ ನೂರು ಜನರಲ್ಲಿ ೧೦ ಮಂದಿಯಲ್ಲಿ ಅರಿವು ಬಂದು ಶೇ.೧೦ ರಷ್ಟು ಜನರ ಮನಸ್ಸು ಬದಲಾವಣೆ ಆಗಬಹುದು ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಂಜುನಾಥ, ಇನ್ಸ್‌ಪೆಕ್ಟರ್‌ ಎಸ್.ಪರಶಿವಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್. ವೆಂಕಟೇಶ್‌, ಕಾರ್ಮಿಕ ನಿರೀಕ್ಷಕ ನಾರಾಯಣಮೂರ್ತಿ ಸೇರಿದಂತೆ ಹಲವರಿದ್ದರು.

Share this article