ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ 8 ವರ್ಷಗಳಲ್ಲಿ ಹೆಚ್ಚುವರಿಯಾಗಿ ಪಾವತಿ ಮಾಡಲಾಗಿರುವ ಸಂಭಾವನೆ 4.74 ಲಕ್ಷ ರುಪಾಯಿ ವಾಪಸ್ ನೀಡುವಂತೆ ಹಿರೇಮಗಳೂರಿನ ಶ್ರೀ ಕೋದಂಡರಾಮಚಂದ್ರ ಸ್ವಾಮಿ ದೇವಾಲಯದ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ ತಾಲೂಕು ತಹಸೀಲ್ದಾರ್ ನೊಟೀಸ್ ಜಾರಿ ಮಾಡಿದ್ದಾರೆ.ಇದಕ್ಕೆ ಲಿಖಿತವಾಗಿ ಉತ್ತರಿಸಿರುವ ಕಣ್ಣನ್ ಅವರು ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಆದೇಶದ ಪ್ರತಿಯನ್ನು ನೀಡುವಂತೆ ತಹಸೀಲ್ದಾರ್ ಅವರಿಗೆ ಕೋರಿಕೊಂಡಿದ್ದಾರೆ.
2013- 14ನೇ ಸಾಲಿನಿಂದ 2021-22ರವರೆಗೆ ಕಣ್ಣನ್ ಅವರಿಗೆ 3.36 ಲಕ್ಷ ರುಪಾಯಿ ಸಂಭಾವನೆ ಬಿಡುಗಡೆ ಯಾಗಬೇಕಾಗಿತ್ತು. ಆದರೆ, ಅವರ ಖಾತೆಗೆ ಮುಜರಾಯಿ ಇಲಾಖೆಯಿಂದ 8.10 ಲಕ್ಷ ರುಪಾಯಿ ಈ ಅವಧಿಯಲ್ಲಿ ಬಿಡುಗಡೆಯಾಗಿದೆ.2013-14 ರಿಂದ 2016- 17ನೇ ಸಾಲಿನವರೆಗೆ ವಾರ್ಷಿಕ 24 ಸಾವಿರ ರುಪಾಯಿ ಸಂಭಾವನೆ ಕೊಡಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ ವರ್ಷಕ್ಕೆ 90 ಸಾವಿರ ರುಪಾಯಿ ಬಿಡುಗಡೆ ಮಾಡಲಾಗಿದೆ. 2017-18ನೇ ಸಾಲಿನಿಂದ 2021-22ರವರೆಗೆ ವರ್ಷಕ್ಕೆ 48 ಸಾವಿರ ಬಿಡುಗಡೆಯಾಗಬೇಕಾಗಿತ್ತು. ಆಗಲೂ ಕೂಡ 90 ಸಾವಿರದಂತೆ ಬಿಡುಗಡೆಯಾಗಿದೆ. ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಬಿಡುಗಡೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ 2022-23ನೇ ಸಾಲಿನಿಂದ ಸಂಭಾವನೆ ತಡೆ ಹಿಡಿಯಲಾಗಿದೆ.
ಎಡವಟ್ಟು: ಹಿರೇಮಗಳೂರು ಕಣ್ಣನ್ ಯಾವತ್ತೂ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಳ ಮಾಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದವರಲ್ಲ. 2013-14ರಲ್ಲಿ ಮುಜರಾಯಿ ಇಲಾಖೆಯಲ್ಲಿ ಆಗಿರುವ ತಪ್ಪು 2021-22ನೇ ಸಾಲಿನವರೆಗೆ ಮುಂದುವರೆದಿದೆ.ಕೋದಂಡರಾಮಚಂದ್ರ ದೇವಾಲಯ ಸಿ ದರ್ಜೆಯ ದೇಗುಲವಾಗಿದ್ದು, ಇದಕ್ಕೆ ಸರ್ಕಾರದಿಂದ ವಾರ್ಷಿಕ ತಸ್ತೀಕ್ 60 ಸಾವಿರ, ಹುಂಡಿಯಿಂದ ಸರಾಸರಿ 35 ರಿಂದ 40 ಸಾವಿರ ಸೇರಿದಂತೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಬರುತ್ತಿದೆ. ಆದರೆ, ಇಲ್ಲಿಗೆ ವಾರ್ಷಿಕವಾಗಿ 1.46 ಲಕ್ಷ ರುಪಾಯಿ ಖರ್ಚು ಬರುತ್ತಿದೆ. ಹೆಚ್ಚುವರಿ ಸಂಭಾವನೆ ಬರುತ್ತಿರುವುದು ತಿಳಿಯದೆ ಆಗಿರುವ ಎಡವಟ್ಟಾಗಿದೆ.23 ಕೆಸಿಕೆಎಂ 5