ಸಮಾಜದ ಸೂಕ್ಷ್ಮತೆ ತೋರಿಸಿದ ಕಾದಂಬರಿ

KannadaprabhaNewsNetwork |  
Published : Jun 07, 2026, 02:00 AM IST
ಕನ್ನಡ ಕಾದಂಬರಿಗಳ ಅನುಸಂಧಾನ ಉಪನ್ಯಾಸ ಮಾಲಿಕೆಯನ್ನು ಪ್ರೊ. ಶಿವಾನಂದ ‌ಕೆಳಗಿನಮನಿ ಉದ್ಘಾಟಿಸಿದರು. | Kannada Prabha

ಸಾರಾಂಶ

ನಿರ್ಲಕ್ಷ್ಯಕ್ಕೊಳಪಟ್ಟ, ಶೋಷಣೆಗೊಳಪಟ್ಟ ಕೆಳಸಮುದಾಯದ ಜನರ ಬದುಕನ್ನು ವಾಸ್ತವತೆಯ ನೆಲೆಯ ಮೇಲೆ ಕಾದಂಬರಿಗಳನ್ನು ರಚಿಸಿ ನವೋದಯ ಕಾಲದ ಲೇಖಕರು ಓದುಗರಿಗೆ ಕಟ್ಟಿಕೊಟ್ಟರು.

ಧಾರವಾಡ:

ಹೊಸಗನ್ನಡದ ಕಾದಂಬರಿಗಳು ಧರ್ಮ ಮತ್ತು ಪ್ರಭುತ್ವವನ್ನು ಹೊರತುಪಡಿಸಿ ಮನುಷ್ಯನ ವೈಯಕ್ತಿಕ ಅನುಭವಗಳನ್ನು ದಾಖಲಿಸಿದವು. ಸಮಾಜದ ಸೂಕ್ಷ್ಮ ವಿಚಾರಗಳನ್ನು ಕಾದಂಬರಿಗಳ ಮೂಲಕ ಎತ್ತಿ ತೋರಿಸಿದವು. ಕನ್ನಡ ಸಾಹಿತ್ಯದಲ್ಲಿ ಇರುವಷ್ಟು ಪ್ರಕಾರಗಳು ಭಾರತೀಯ ಯಾವ ಭಾಷೆಯ ಸಾಹಿತ್ಯದಲ್ಲೂ ಇಲ್ಲ ಎಂದು ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವನಿಕೇತನ ಸಭಾಭವನದಲ್ಲಿ ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು, ಮನೋಹರ ಗ್ರಂಥ ಮಾಲಾ ಸಹಯೋಗ ಹಾಗೂ ಡಾ. ಆರ್.ಸಿ. ಹಿರೇಮಠ ಅಧ್ಯಯನ ಪೀಠದ ಸಹಾಯದೊಂದಿಗೆ ಧಾರವಾಡ ಕಟ್ಟೆ ಆಯೋಜಿಸಿದ ಕನ್ನಡ ಕಾದಂಬರಿಗಳ ಅನುಸಂಧಾನ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದರು.

ರಾಮ ಮನೋಹರ ಲೋಹಿಯಾ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್‌. ಅಂಬೇಡ್ಕರ್ ವಿಚಾರಗಳು ಹೊಸಗನ್ನಡ ಕಾದಂಬರಿಗಳ ಮೇಲೆ ಪ್ರಭಾವ ಬೀರಿವೆ. ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ನ್ಯಾಯದ ಧ್ವನಿಯಿದೆ. ಸಮಾಜವನ್ನು ಇರುವ ಹಾಗೆ ಒಪ್ಪಿಕೊಳ್ಳದೆ ಅದರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ವಿಮರ್ಶಿಸಿದ್ದು ನವ್ಯ ಸಾಹಿತ್ಯ. ನವ್ಯ, ಬಂಡಾಯ, ಸ್ತ್ರೀ ಪರ ಆಲೋಚನೆಗಳನ್ನು ಪ್ರಗತಿಶೀಲರು ಆಗಲೆ ಇಣುಕಿ ನೋಡಿದ್ದರು ಎಂದರು.

ನಿರ್ಲಕ್ಷ್ಯಕ್ಕೊಳಪಟ್ಟ, ಶೋಷಣೆಗೊಳಪಟ್ಟ ಕೆಳಸಮುದಾಯದ ಜನರ ಬದುಕನ್ನು ವಾಸ್ತವತೆಯ ನೆಲೆಯ ಮೇಲೆ ಕಾದಂಬರಿಗಳನ್ನು ರಚಿಸಿ ನವೋದಯ ಕಾಲದ ಲೇಖಕರು ಓದುಗರಿಗೆ ಕಟ್ಟಿಕೊಟ್ಟರು. ಎಸ್‌.ಎಲ್‌. ಭೈರಪ್ಪ ಒಬ್ಬ ಶ್ರೇಷ್ಠ ಕಾದಂಬರಿಕಾರರಾದರೂ ವೈಚಾರಿಕ ನೆಲೆಯಲ್ಲಿ ಅವರನ್ನು ಪರಿಗಣಿಸಲು ಸಾಧ್ಯವಿಲ್ಲ. ಮೇಲ್ಜಾತಿಯವರ ದಬ್ಬಾಳಿಕೆಯ ಜತೆಗೆ ತಮ್ಮೊಳಗೆ ಹುಟ್ಟಿಕೊಳ್ಳುತ್ತಿರುವ ಯಜಮಾನಿಕೆ, ವೈರುಧ್ಯ, ದ್ವೇಷ-ಅಸೂಹೆಗಳನ್ನು ದಲಿತ, ಬಂಡಾಯ ಸಾಹಿತಿಗಳು ತಮ್ಮ ಕಾದಂಬರಿಗಳಲ್ಲಿ ಚಿತ್ರಿಸಿದ್ದಾರೆ ಎಂದು ಹೇಳಿದರು.

ಆರ್‌.ಸಿ. ಹಿರೇಮಠ ಅಧ್ಯಯನ ಪೀಠದ ಅಧ್ಯಕ್ಷ ಪ್ರೊ. ಕೃಷ್ಣ ನಾಯಕ ಮಾತನಾಡಿ, ನವೋದಯ ಪೂರ್ವದ ಕಾದಂಬರಿಯ ಕಥಾವಸ್ತು ಸಮಾಜದಲ್ಲಿನ ಮೌಢ್ಯ, ಕಂದಾಚಾರ, ಶೋಷಣೆ, ಜಾತಿ ತಾರತಮ್ಯಗಳೇ ಆಗಿವೆ. ಕುವೆಂಪು, ಶಿವರಾಮ ಕಾರಂತರ ನೋಡುವಂತಹ ದಲಿತ ಚಿತ್ರಣಕ್ಕೂ ದೇವನೂರರು ನೋಡುವ ದಲಿತ ಚಿತ್ರಣಕ್ಕೂ ವ್ಯತ್ಯಾಸವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಕೇಂದ್ರೀಯ ವಿವಿಯ ಪ್ರೊ. ಬಸವರಾಜ ಡೋಣೂರ ಮಾತನಾಡಿ, ಕಾದಂಬರಿ ಆಧುನಿಕ ಕಾಲದ ಮಹಾಕಾವ್ಯ. ಒಂದು ಕಾಲದಲ್ಲಿ ಮಹಾಕಾವ್ಯ ಯಾವ ಸ್ಥಾನ ಪಡದಿತ್ತೊ, ಆ ಸ್ಥಾನವನ್ನು ಕಾದಂಬರಿ ಪಡೆದಿದೆ. ಸಾಹಿತ್ಯದಲ್ಲಿ ಕಾದಂಬರಿಗೆ ಅಗ್ರವಾದ ಸ್ಥಾನಮಾನವಿದೆ ಎಂದು ಹೇಳಿದರು.

ಈ ವೇಳೆ ಸಿದ್ಧಾರೂಢ ಗುಗ್ಗರಿ, ಡಾ. ವಿಜಯಲಕ್ಷ್ಮೀ ದಾನರಡ್ಡಿ, ಸೌಮ್ಯ ನೇತ್ರೇಕರ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿ ತಡೆಗೆ ಒತ್ತಾಯ
ಉದ್ಯಮಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಸ್ಟಾರ್ಟಪ್‌ ಕಾನ್‌ಕ್ಲೇವ್‌