ಕೋಟ್ಯಂತರ ಮೌಲ್ಯದ ಆಸ್ತಿ ಸರ್ಕಾರದ ಸುಪರ್ದಿಗೆ

KannadaprabhaNewsNetwork |  
Published : Jun 07, 2026, 02:00 AM IST
ಬಳ್ಳಾರಿಯ  ಪೋಲಾ ಹೋಟೆಲ್ ಎದುರಿನ ಮೆಸೋನಿಕ್ ಹಾಲ್‌ಗೆ ಸೇರಿದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಜಿಲ್ಲಾಡಳಿತ ಶನಿವಾರ ವಶಕ್ಕೆ ಪಡೆದುಕೊಂಡಿತು.  | Kannada Prabha

ಸಾರಾಂಶ

ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

ಬಳ್ಳಾರಿ: ನಗರದ ಪೋಲಾ ಹೋಟೆಲ್ ಎದುರಿನ ಮೆಸೋನಿಕ್ ಹಾಲ್‌ಗೆ ಸೇರಿದ ಕೋಟ್ಯಂತರ ರುಪಾಯಿ ಮೌಲ್ಯದ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ.

ಈ ಜಾಗದ ಕುರಿತು ಹಲವು ವರ್ಷಗಳಿಂದ ಆಡಳಿತಾತ್ಮಕ ಮತ್ತು ಕಾನೂನು ಪ್ರಕ್ರಿಯೆ ನಡೆಯುತ್ತಿದ್ದವು. ಸಂಬಂಧಪಟ್ಟ ದಾಖಲೆಗಳು ಹಾಗೂ ಆದೇಶಗಳ ಆಧಾರದ ಮೇಲೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಾಗವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡರು.

ಜಿಲ್ಲಾಡಳಿತದ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ಜಾಗವನ್ನು ವಶಕ್ಕೆ ಪಡೆದ ಬಳಿಕ ಸರ್ಕಾರದ ಸ್ವತ್ತಾಗಿದೆ ಎಂಬ ಫಲಕವನ್ನು ಅಳವಡಿಸಲಾಗಿದೆ.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಮಾತನಾಡಿ, ಬಳ್ಳಾರಿಯ ಟಿ.ಎಸ್ ಸಂಖ್ಯೆ 307 ರಲ್ಲಿರುವ 4 ಎಕರೆ 44 ಸೆಂಟ್ಸ್ ವಿಸ್ತೀರ್ಣದ ಜಾಗವನ್ನು ಜಿಲ್ಲಾಧಿಕಾರಿ ಆದೇಶದನ್ವಯ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರದ ಸುಪರ್ದಿಗೆ ಪಡೆದಿದ್ದಾರೆ.

ಈ ಜಮೀನು 1884ರಿಂದಲೂ ಮೆಸೋನಿಕ್ ಹಾಲ್ ಹೆಸರಿನಲ್ಲಿ ಖಾಸಗಿಯವರ ಬಳಕೆಯಲ್ಲಿತ್ತು. ಆದರೆ, ಈ ಆಸ್ತಿಗೆ ಸಂಬಂಧಿಸಿದಂತೆ ನಿಯಮಾನುಸಾರ ಯಾವುದೇ ರೀತಿಯ ಸದುಪಯೋಗ ಅಥವಾ ಅಗತ್ಯ ನವೀಕರಣ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಾಗವನ್ನು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಇದನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಕಂದಾಯ ಇಲಾಖೆಗೆ ಮಹತ್ವದ ಆದೇಶ ಹೊರಡಿಸಿದ್ದರು.

ಜಿಲ್ಲಾಧಿಕಾರಿ ಖಡಕ್ ಆದೇಶದ ಬೆನ್ನಲ್ಲೇ ಅಧಿಕಾರಿಗಳ ತಂಡ, ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಕಾನೂನಾತ್ಮಕವಾಗಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ., ಡಿಡಿಎಲ್‌ಆರ್ ಪ್ರಮೋದ್, ಬಳ್ಳಾರಿ ತಾಲೂಕು ತಹಶೀಲ್ದಾರ್‌ ಟಿ.ರೇಖಾ, ಕಂದಾಯ ನಿರೀಕ್ಷಕರು, ಮಹಾನಗರಪಾಲಿಕೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿ ತಡೆಗೆ ಒತ್ತಾಯ
ಉದ್ಯಮಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಸ್ಟಾರ್ಟಪ್‌ ಕಾನ್‌ಕ್ಲೇವ್‌