ಹೆಲ್ಮೆಟ್, ಪೊಲೀಸರ ಭಯಕ್ಕೋ ಜೀವದ ಮೇಲಿನ ಕಾಳಜಿಗೋ?

KannadaprabhaNewsNetwork |  
Published : Jun 07, 2026, 02:00 AM IST
ಕನ್ನಡಪ್ರಭದಲ್ಲಿ ಜೂ.2ರಂದು ಹೆಲ್ಮೆಟ್ ಇಲ್ಲದೆ ರಸ್ತೆಗಿಳಿದರೆ ಬೀಳುತ್ತೆ ದಂಡ ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು.  | Kannada Prabha

ಸಾರಾಂಶ

ಕಳೆದ ಐದು ದಿನಗಳಲ್ಲಿಯೇ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ಸುಮಾರು 9 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.

ಬಳ್ಳಾರಿ: ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಗೊಳಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ದಂಡಾಸ್ತ್ರ ಪ್ರಯೋಗ ಆರಂಭಿಸಿದ ಬಳಿಕ ವಾಹನ ಸವಾರರಲ್ಲಿ ಹೆಲ್ಮೆಟ್ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಕಳೆದ ಐದು ದಿನಗಳಲ್ಲಿಯೇ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು ಸುಮಾರು 9 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ಆದರೆ ಈ ಬೆಳವಣಿಗೆಯ ಹಿಂದೆ ಆತಂಕಕಾರಿ ಸಂಗತಿಯೊಂದು ಅಡಗಿದೆ. ಬಹುತೇಕರು ತಮ್ಮ ಸುರಕ್ಷತೆಗಾಗಿ ಅಲ್ಲ, ಪೊಲೀಸರ ಭಯದಿಂದಲೇ ಹೆಲ್ಮೆಟ್ ಧರಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಈಗ ಹೆಲ್ಮೆಟ್ ಧರಿಸಿದ ಸವಾರರ ಸಂಖ್ಯೆ ಹೆಚ್ಚಾಗಿದ್ದರೂ ಗುಣಮಟ್ಟದ ಸುರಕ್ಷತಾ ಸಾಧನವಾಗಿ ಬಳಸುವ ಬದಲು ಕೇವಲ ದಂಡದಿಂದ ತಪ್ಪಿಸಿಕೊಳ್ಳುವ ಉಪಾಯವಾಗಿ ಹೆಲ್ಮೆಟ್ ಬಳಸುತ್ತಿರುವವರೇ ಹೆಚ್ಚು. ಕೆಲವರು ಕಡಿಮೆ ಬೆಲೆಯ, ಸುರಕ್ಷತಾ ಮಾನದಂಡಗಳಿಗೆ ಹೊಂದದ ಹೆಲ್ಮೆಟ್ ಧರಿಸುತ್ತಿದ್ದರೆ, ಇನ್ನು ಕೆಲವರು ಪೊಲೀಸ್ ಸಿಬ್ಬಂದಿಯನ್ನು ಕಂಡಾಗ ಮಾತ್ರ ಹೆಲ್ಮೆಟ್ ತೊಟ್ಟು, ನಂತರ ತೆಗೆದುಹಾಕುವ ಪ್ರವೃತ್ತಿ ತೋರಿಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ದಂಡ ವಸೂಲಿಗಾಗಿ ಅಲ್ಲ. ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ತಲೆಗೆ ಗಂಭೀರ ಪೆಟ್ಟಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅಪಘಾತದ ಸಂದರ್ಭದಲ್ಲಿ ಹೆಲ್ಮೆಟ್ ಜೀವ ರಕ್ಷಕ ಕವಚವಾಗಿದ್ದು, ಅನೇಕ ಸಾವು-ನೋವು ತಪ್ಪಿಸಬಲ್ಲದು ಎಂಬುದು ವೈದ್ಯಕೀಯ, ಸಂಚಾರ ತಜ್ಞರ ಅಭಿಪ್ರಾಯ.

ಆದರೆ. ಕೆಲ ಸವಾರರು ಮುಖ್ಯ ರಸ್ತೆಗಳನ್ನು ಬಿಟ್ಟು ಓಣಿಗಳಲ್ಲಿ ಸಂಚರಿಸುವುದು, ಪೊಲೀಸರ ಕಣ್ತಪ್ಪಿಸಿಕೊಂಡು ಓಡಾಡಲು ಯತ್ನಿಸುವುದು, ಕಳಪೆ ಹೆಲ್ಮೆಟ್ ಬಳಸುವುದು ಪೊಲೀಸ್ ಇಲಾಖೆಯ ಉದ್ದೇಶವನ್ನೇ ವಿಫಲಗೊಳಿಸುವಂತಿದೆ.

ಹೆಲ್ಮೆಟ್ ಧರಿಸುವುದು ಪೊಲೀಸರನ್ನು ಕಂಡು ಭಯ ಪಡುವುದಕ್ಕಲ್ಲ; ಕುಟುಂಬದವರ ಮುಖವನ್ನು ಮತ್ತೆ ಸುರಕ್ಷಿತವಾಗಿ ಕಾಣುವುದಕ್ಕಾಗಿ. ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಜೀವ ರಕ್ಷಣೆಗಾಗಿ ಹೆಲ್ಮೆಟ್ ಧರಿಸುವ ಸಂಸ್ಕೃತಿ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

ವಿದ್ಯಾವಂತರಾದವರು ಸಹ ಹೆಲ್ಮೆಟ್ ಇಲ್ಲದೇ ಓಡಾಡುತ್ತಾರೆ. ಪೊಲೀಸರು ಕಂಡ ಕೂಡಲೇ ಹೆಲ್ಮೆಟ್ ಹಾಕಿಕೊಳ್ಳುತ್ತಾರೆ. ಬಳಿಕ ಹೆಲ್ಮೆಟ್ ತೆಗೆದು ವಾಹನದ ಮುಂದಿಟ್ಟುಕೊಂಡು ಓಡಾಡುತ್ತಿದ್ದಾರೆ. ಸುಶಿಕ್ಷಿತರು ಎನಿಸಿಕೊಂಡವರೇ ಈ ರೀತಿ ವರ್ತಿಸುವುದು ಎಷ್ಟು ಸರಿ? ಪೊಲೀಸರು ದಂಡ ಹಾಕುತ್ತಾರೆ ಎಂದು ಟೀಕಿಸುವ ಇವರು ಹೆಲ್ಮೆಟ್ ಧರಿಸುವುದು ತಮ್ಮ ಜವಾಬ್ದಾರಿ ಎಂದು ಏಕೆ ತಿಳಿಯುವುದಿಲ್ಲ? ಎಂದು ಪ್ರಶ್ನಿಸುತ್ತಾರೆ ಸಂಚಾರ ಪೊಲೀಸರು.

ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಜನರ ಜೀವ ರಕ್ಷಣೆಗಾಗಿ. ದಂಡ ಹಾಕುವುದು ನಮ್ಮ ಉದ್ದೇಶಲ್ಲ. ಹೆಲ್ಮೆಟ್ ಹಾಕುವುದು ಪ್ರಾಕ್ಟೀಸ್ ಆಗಬೇಕು. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದು ಜನರಲ್ಲಿ ಜಾಗೃತಿ ಬರಬೇಕು. ಮುಂದಿನ ಹಂತದಲ್ಲಿ ಕಾಲೇಜುಗಳ ಬಳಿ ಹೆಲ್ಮೆಟ್ ಪರಿಶೀಲನೆ ಕಾರ್ಯ ನಡೆಯಲಿದೆ ಎನ್ನುತ್ತಾರೆ ಎಸ್ಪಿ ಸುಮನ್ ಡಿ.ಪನ್ನೇಕರ್.

----------------------

ಬಳ್ಳಾರಿ ಜಿಲ್ಲೆಯಲ್ಲಿ ಜೂನ್ 1ರಿಂದ ದಾಖಲಾದ ಪ್ರಕರಣ- ದಂಡದ ಮೊತ್ತ

ಜೂನ್ 1: ಜಿಲ್ಲೆಯಲ್ಲಿನ ಪ್ರಕರಣ 611

ದಂಡದ ಮೊತ್ತ: 3,05,500 ರು.

----------

ಜೂನ್ 2: ಜಿಲ್ಲೆಯಲ್ಲಿನ ಪ್ರಕರಣ 472

ದಂಡದ ಮೊತ್ತ: 2,36,000 ರು.

-------------

ಜೂನ್ 3: ಜಿಲ್ಲೆಯಲ್ಲಿನ ಪ್ರಕರಣ 387

ದಂಡದ ಮೊತ್ತ: 1,93,500 ರು.

------------

ಜೂನ್ 4: ಜಿಲ್ಲೆಯಲ್ಲಿನ ಪ್ರಕರಣ 433

ದಂಡದ ಮೊತ್ತ: 2,16,500 ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿ ತಡೆಗೆ ಒತ್ತಾಯ
ಉದ್ಯಮಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಸ್ಟಾರ್ಟಪ್‌ ಕಾನ್‌ಕ್ಲೇವ್‌