ಕನ್ನಡಪ್ರಭ ವಾರ್ತೆ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಿಲ್ಲಿಸಿದ್ದ ಮಹೀಂದ್ರ ಕಂಪನಿಯ (ಎಕ್ಸ್‌ಯುವಿ 300) ಕಾರು ಸ್ಫೋಟಗೊಂಡು ಸಂಪೂರ್ಣ ಛಿದ್ರಛಿದ್ರವಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರಿನ ಭಾಗಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿ ಬಿದ್ದಿದ್ದು, ಎಂಜಿನ್ ಸಹ ತುಂಡು-ತುಂಡಾಗಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ನಿಲ್ಲಿಸಿದ್ದ ಮಹೀಂದ್ರ ಕಂಪನಿಯ (ಎಕ್ಸ್‌ಯುವಿ 300) ಕಾರು ಸ್ಫೋಟಗೊಂಡು ಸಂಪೂರ್ಣ ಛಿದ್ರಛಿದ್ರವಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರಿನ ಭಾಗಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಚದುರಿ ಬಿದ್ದಿದ್ದು, ಎಂಜಿನ್ ಸಹ ತುಂಡು-ತುಂಡಾಗಿದೆ. ಅದೃಷ್ಟವಶಾತ್ ಕಾರಿನ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಫೋಟಗೊಂಡ ವಾಹನ ಹಿಪ್ಪರಗಿ ಗ್ರಾಮದ ಜಯಶ್ರೀ ಹಣಮಂತ ಅಥಣಿ ಅವರ ಹೆಸರಿನಲ್ಲಿದೆ. ತಮ್ಮ ಬಾರ್ ಮುಂದೆ ಕಾರು ನಿಲ್ಲಿಸಿದ್ದ ಕಾರಿನ ಮಾಲೀಕ ಹನುಮಂತ ಅಥಣಿ ಅವರು ವ್ಯವಹಾರ ಮುಗಿಸಿ ಶನಿವಾರ ರಾತ್ರಿ 10.45ರ ಸುಮಾರಿಗೆ ಹೊರಬಂದಾಗ ಏಕಾಏಕಿ ಭಾರಿ ಸ್ಫೋಟದ ಸದ್ದು ಕೇಳಿಸಿದ್ದು, ಓಡಿಬಂದು ನೋಡಿದಾಗ ಕಾರು ಸಂಪೂರ್ಣ ಛಿದ್ರವಾಗಿತ್ತು. ದೂರದ ಪ್ರದೇಶದವರೆಗೆ ಬಿಡಿಭಾಗಗಳು ಹಾರಿಬಿದ್ದಿವೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಬಾಗಲಕೋಟೆ ಹಾಗೂ ಬೆಳಗಾವಿಯಿಂದ ಬಾಂಬ್ ನಿಷ್ಕ್ರಿಯ ದಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ ಸ್ಫೋಟದ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತಾಂತ್ರಿಕ ದೋಷ, ಸ್ಫೋಟಕ ವಸ್ತು ಅಥವಾ ಇತರೆ ಯಾವುದೇ ಕಾರಣಗಳಿವೆಯೇ ಎಂಬ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಬಾಂಬ್ ನಿಷ್ಕ್ರಿಯ ದಳದ ಪರಿಶೀಲನೆ ಬಳಿಕವೇ ಸ್ಫೋಟದ ನಿಖರ ಕಾರಣ ಬಹಿರಂಗವಾಗಲಿದೆ. ಜಮಖಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.