ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಹೊರವಲಯದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ಕೈಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಭೇಟಿ ನೀಡಿ ಹಂತ-1 ಹಂತ-2 ಹಾಗೂ ಹಂತ-3 ರಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾದ ಕೈಗಾರಿಕಾ ಪ್ರದೇಶದ ನಿವೇಶನಗಳು ಹಾಗೂ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಕೊಲ್ಹಾರ ತಾಲೂಕಿನ ಮುಳವಾಡ ಹೊರವಲಯದಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ಕೈಗಾರಿಕಾ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಭೇಟಿ ನೀಡಿ ಹಂತ-1 ಹಂತ-2 ಹಾಗೂ ಹಂತ-3 ರಲ್ಲಿ ಈಗಾಗಲೇ ಅಭಿವೃದ್ಧಿಪಡಿಸಲಾದ ಕೈಗಾರಿಕಾ ಪ್ರದೇಶದ ನಿವೇಶನಗಳು ಹಾಗೂ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ನಂತರ ಹೊಸದಾಗಿ ರಾಜ್ಯ ಮಟ್ಟದಲ್ಲಿ ಅನುಮೋದನೆಯಾದ ಮೆ.ರಿಲಾಯನ್ಸ್ ಕನ್ಸೂಮರ್‌ ಪ್ರೋಡಕ್ಟ್ಸ್ ಲಿಮಿಟೆಡ್ ಬೆಂಗಳೂರು ಇವರಿಂದ ₹1622 ಕೋಟಿ ಯೋಜನಾ ವೆಚ್ಚದಲ್ಲಿ, ಸುಮಾರು 1200 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಿರುವ ಪ್ಯಾಕೇಜ್ಡ್ ಕಾರ್ಬೋನೇಟೆಡ್ ಸಾಫ್ಟ್‌ಡ್ರಿಂಕ್ಸ್ ‍ಅಂಡ್ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್‌ ಘಟಕದ ಸ್ಥಳ ವೀಕ್ಷಿಸಿದರು. ಬಳಿಕ ಪ್ರಗತಿ ಹಂತದಲ್ಲಿರುವ ಸುಮಾರು ₹25 ಕೋಟಿ ಯೋಜನಾ ವೆಚ್ಚದಲ್ಲಿ ಸ್ಥಾಪನೆಗೊಳ್ಳಲಿರುವ ಮೆ. ಚತುರ್ಮುಖಿ ಡೇರಿ ಪ್ರೋಡಕ್ಟ್ ಐಸ್ ಕ್ರೀಂ ಉತ್ಪಾದನಾ ಘಟಕ ಪರಿಶೀಲಿಸಿದರು.

ಭೇಟಿಯ ವೇಳೆ ಕೈಗಾರಿಕಾ ಪ್ರದೇಶದಲ್ಲಿನ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆ, ಬೀದಿ ದೀಪಗಳು, ಹಸಿರು ಪ್ರದೇಶ ಹಾಗೂ ಇತರೆ ಮೂಲಭೂತಸೌಕರ್ಯಗಳ ಸ್ಥಿತಿಗತಿಗಳ ಕುರಿತು ಕೈಗಾರಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೈಗಾರಿಕೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ, ಹಾಗೂ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮುಳವಾಡ ಕೈಗಾರಿಕಾ ಪ್ರದೇಶದ ಹಂತ-1, ಹಂತ-2 ಈಗಾಗಲೇ ಅಭಿವೃದ್ಧಿಗೊಂಡಿದ್ದು, ವಿವಿಧ ಕೈಗಾರಿಕೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಕೈಗಾರಿಕಾ ಪ್ರದೇಶವು ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ಸ್ಥಳವಾಗಿದ್ದು, ಕೈಗಾರಿಕೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ನಿರ್ವಹಣೆ ಮತ್ತು ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಕೆ.ಐ.ಎ.ಡಿ.ಬಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ಅಭಿಯಂತರರು ಹಾಗೂ ಜಂಟಿ ನಿರ್ದೇಶಕರು ಉಪಸ್ಥಿತರಿದ್ದರು.