ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಎ.ಪಿ.ರಂಗನಾಥ್ ಅಭ್ಯರ್ಥಿ ಸಾಧ್ಯತೆ

KannadaprabhaNewsNetwork |  
Published : Jan 22, 2024, 02:23 AM IST
ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ | Kannada Prabha

ಸಾರಾಂಶ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಸುಖಾಂತ್ಯವಾಗಿದ್ದು, ಬಹುತೇಕ ಜೆಡಿಎಸ್‌ನ ಎ.ಪಿ.ರಂಗನಾಥ್ ಅವರೇ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಸುಖಾಂತ್ಯವಾಗಿದ್ದು, ಬಹುತೇಕ ಜೆಡಿಎಸ್‌ನ ಎ.ಪಿ.ರಂಗನಾಥ್ ಅವರೇ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.ಭಾನುವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ಉಭಯ ಪಕ್ಷಗಳ ಹಿರಿಯ ನಾಯಕರು ಸಭೆ ನಡೆಸಿ ಜೆಡಿಎಸ್‌ನ ರಂಗನಾಥ್ ಅವರೇ ಮೈತ್ರಿಕೂಟದ ಅಭ್ಯರ್ಥಿಯಾಗಲು ಬಿಜೆಪಿ ನಾಯಕರು ತಾತ್ವಿಕವಾಗಿ ಒಪ್ಪಿದರು. ಈ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಹೈಕಮಾಂಡ್‌ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.ಈ ಸಭೆ ಕೇವಲ ಪರಿಷತ್ ಉಪಚುನಾವಣೆಗೆ ಮಾತ್ರ ಸೀಮಿತವಾಗಿದ್ದು, ಪರಿಷತ್ತಿನ ಇತರ ಆರು ಸ್ಥಾನಗಳ ಚುನಾವಣೆ ಬಗ್ಗೆಯೂ ಸಾಂಕೇತಿಕವಾಗಿ ಮಾತುಕತೆ ನಡೆಸಲಾಗಿದೆ. ಸಮಯದ ಅಭಾವ ಇದ್ದುದರಿಂದ ಮುಂದೆ ಮತ್ತೆ ಸಭೆ ಸೇರಿ ಚರ್ಚಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಿರಿಯರು ಸಭೆ ಸೇರಿ ಮುಂದಿನ ವಿಧಾನಪರಿಷತ್ ಉಪ ಚುನಾವಣೆ, ವಿಧಾನಪರಿಷತ್ತಿನ ಉಳಿದ ಆರು ಸ್ಥಾನಗಳ ಚುನಾವಣೆ ಕುರಿತು ಚರ್ಚಿಸಿದ್ದೇವೆ. ಎಲ್ಲ ಕ್ಷೇತ್ರಗಳ ಕುರಿತು ಸವಿಸ್ತಾರವಾಗಿ ಚರ್ಚೆ ಆಗಿದೆ. ಚರ್ಚಿತ ಅಂಶಗಳ ಕುರಿತಂತೆ ನಮ್ಮ ರಾಷ್ಟ್ರೀಯ ಅಧ್ಯಕ್ಷರ ಗಮನಕ್ಕೆ ತಂದು ಅತಿ ಶೀಘ್ರವೇ ಅಭ್ಯರ್ಥಿಗಳ ಘೋಷಣೆಗೆ ತೀರ್ಮಾನಿಸಿದ್ದೇವೆ. ಅರ್ಥಪೂರ್ಣ ಚರ್ಚೆ ನಡೆದಿದೆ. ಕಾರ್ಯಕರ್ತರು ತಳಮಟ್ಟದಲ್ಲಿ ಹೊಂದಿಕೊಂಡು ಹೋಗುವ ಸಮಸ್ಯೆ ಇಲ್ಲ ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಉಭಯ ಪಕ್ಷಗಳ ಪ್ರಮುಖ ನಾಯಕರು ಮಾತನಾಡಿದ್ದೇವೆ. ಪ್ರಥಮ ಹಂತದಲ್ಲಿ ಮೊದಲ ಸಭೆ ಮಾಡಿದ್ದೇವೆ. ಮುಂದೆ ವಿಧಾನ ಪರಿಷತ್ ಉಪ ಚುನಾವಣೆ ಇದೆ. ಅಭ್ಯರ್ಥಿ ಆಯ್ಕೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್‌ಗೆ ಮಾಹಿತಿ ನೀಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಗೆ ಇಲ್ಲಿಂದಲೇ ಸಂದೇಶ ಕೊಡಲಿದ್ದೇವೆ. ಮೋದಿ ಅವರ ಕೈ ಬಲಪಡಿಸಲು ಒಟ್ಟಾಗಿ ಹೋಗುತ್ತೇವೆ. ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ, ಅದು ತೊಲಗಬೇಕು ಎಂದರು.

ಸಭೆಯಲ್ಲಿ ಬಿಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಭಾಗವಹಿಸಿದ್ದರು. ಜೆಡಿಎಸ್‌ ವತಿಯಿಂದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ಭೋಜೆಗೌಡ, ಕೆ.ಎ.ತಿಪ್ಪೇಸ್ವಾಮಿ ಹಾಗೂ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ