ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ, 50 ಸಾವಿರಕ್ಕೂ ಹೆಚ್ಚಿನ ಕುಟುಂಬಗಳ ಸಂಭ್ರಮದ ಕ್ಷಣವಾಗಿ ಕಂದಾಯ ಇಲಾಖೆಯ ದರಖಾಸ್ತು ಪೋಡಿ, ಪೌತಿ ಖಾತೆ, ಕಂದಾಯ ಗ್ರಾಮ, 94ಸಿ ಹಕ್ಕುಪತ್ರಗಳ ವಿತರಣೆ ಮತ್ತು ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತುಗಳ ಸಮರ್ಪಣೆ ಹಾಗೂ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು.
ಹಾಸನದಲ್ಲಿ ಪ್ರವಾಸೋದ್ಯಮ ಸಾಕಷ್ಟಿದೆ. ಹಾಗಾಗಿ ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಹೇಮಾವತಿ ಜಲಾಶಯದ ಮುಂದೆ ಉದ್ಯಾನವನ ಮಾಡಬೇಕೆಂದು ಜಿಲ್ಲೆಯ ಉಸ್ತುವಾರಿ ಸಚಿವರಾದ ಕೃಷ್ಣ ಭೈರೇಗೌಡರು ವೇದಿಕೆಯಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಹಾಸನ ನಮಗೆ ನೆರೆಯ ಜಿಲ್ಲೆ. ಹಾಸನ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದೆ. ಹಾಗಾಗಿ ಜಲಾಶಯದ ಮುಂದೆ ಉದ್ಯಾನವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಾನು ಮಾತು ಕೊಡುವುದಿಲ್ಲ. ಕೊಟ್ಟ ಮೇಲೆ ಆ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಅಭಯ ನೀಡಿದರು.75 ವರ್ಷಗಳಾದರೂ ಸಮಾನತೆ ಬಂದಿಲ್ಲ:
ಇಂದು 132 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ 166 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ನೂರಾರು ಕೋಟಿ ರು.ಗಳ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಅತ್ಯಂತ ಸಂತೋಷದಿಂದ ನೇರವೇರಿಸಿದ್ದೇನೆ. ಇಲ್ಲಿಯ ಸಮಸ್ಯೆಗಳನ್ನು ಅರಿತ್ತಿದ್ದು ಅವುಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.ಇದುವರೆಗೆ 1,08, 135 ಕೋಟಿ ರು. ವೆಚ್ಚ ಮಾಡಲಾಗಿದೆ. ಸರ್ಕಾರ ರಚನೆಗೊಂಡ ಒಂದು ವರ್ಷದೊಳಗೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಹಾಗೂ ಯುವ ನಿಧಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಶಕ್ತಿ ಯೋಜನೆಯಡಿ ಇದುವರೆಗೂ 600 ಕೋಟಿಗೂ ಹೆಚ್ಚು ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ ಎಂದರು.
ಒತ್ತುವರಿ ಮಾಡಿಕೊಂಡವರಿಗೆ ಸಕ್ರಮಮಾಡಿ ಉಳುವವರಿಗೆ ಭೂಮಿ ಕೊಡುವ ಕೆಲಸ ಮಾಡಲಾಗುತ್ತಿದೆ. ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯಲ್ಲಿ ಕೆಲವು ತೊಡಕುಗಳಿವೆ ಅದನ್ನು ಪರಿಹರಿಸಿ ತುಮಕೂರು ವರೆಗೂ ನೀರು ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಅವರು ಮಾತನಾಡಿ, ಕಾರ್ಯಕ್ರಮಕ್ಕೆ ಸಮುದ್ರದ ರೀತಿಯಲ್ಲಿ ಜನಸಾಗರ ಹರಿದುಬಂದಿದ್ದು, ತಾಳ್ಮೆಯಿಂದ ಇಷ್ಟುಸಂಖ್ಯೆಯಲ್ಲಿ ಜನ ಬಂದಿರುವುದು ನಮ್ಮ ಪುಣ್ಯ. ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಭೂಮಿ ಎಂಬುದು ಗೊಂದಲದ ಗೂಡಾಗಿದೆ. ವಿವಾದಗಳನ್ನು ಬಗೆಹರಿಸಿ, ಭೂ ಗ್ಯಾರಂಟಿ ಕಡೆಗೆ ಕೊಂಡೊಯ್ಯಲಾಗುತ್ತಿದೆ. ಭೂ ಮಾಲೀಕತ್ವದ ಖಚಿತತೆ ಕೊಡುವ ಕೆಲಸ ಮಾಡಲಾಗುತ್ತಿದೆ. ಇದೊಂದು ದೊಡ್ಡ ಮೈಲಿಗಲ್ಲು. ನಾನ ಬದಲಾವಣೆಗಳನ್ನು ತಂದು ಭೂ ಗ್ಯಾರಂಟಿ ನೀಡಲು ಒಂದು ತಂಡವಾಗಿ ಕೆಲಸ ಮಾಡುವ ಮೂಲಕ ಅಧಿಕಾರಿ ಸಿಬ್ಬಂದಿ ಸಹಕಾರ ನೀಡುತ್ತಿದ್ದಾರೆ ಎಂದರು.
ಸಚಿವರಾದ ಸತೀಶ್ ಜಾರಕಿಹೊಳಿ ಮಾತನಾಡಿ, ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳನ್ನು ಕಂದಾಯ ಇಲಾಖೆ ಮಾಡುತ್ತಿದೆ. ಇದರಿಂದ ಇಡೀ ರಾಜ್ಯದ ಜನತೆಗೆ ಲಾಭ ದೊರಕುತ್ತಿದೆ ಎಂದರು. ಹೊಸ ಕಾಮಗಾರಿಗಳನ್ನು ನಿಲ್ಲಿಸಿ ಹಳೆಯ ನಾಲೆಗಳ ದುರಸ್ಥಿಗೆ ಹೆಚ್ಚು ಒತ್ತು ನೀಡಿದರೆ ರೈತರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದರು.
*****
ಬಾಕ್ಸ್....ಕೃಷ್ಣಭೈರೇಗೌಡರು ಮುಂದಿಟ್ಟ ಬೇಡಿಕೆಗಳುಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ ವೇಗ ಸಿಗಬೇಕು. ಹೇಮಾವತಿ ನಾಲೆ ಸೇರಿದಂತೆ ಇತರೆ ನಾಲೆಗಳು ಉಪ ನಾಲೆಗಳ ಆಧುನೀಕರಣವಾಗಬೇಕು. ಇದರಿಂದ ಅಚ್ಚುಕಟ್ಟು ವ್ಯಾಪ್ತಿಯ ಕಟ್ಟಕಡೆಯ ರೈತರಿಗೂ ನೀರು ತಲುಪುತ್ತದೆ. ಗೊರೂರಿನ ಹೇಮಾವತಿ ಜಲಾಶಯದ ಕೆಳ ಭಾಗದಲ್ಲಿ ಉದ್ಯಾನವನ ನಿರ್ಮಾಣ ಮಾಡಿದರೆ ಪ್ರವಾಸೋಧ್ಯಮಕ್ಕೆ ಪುಷ್ಠಿ ನೀಡಿದಂತಾಗುತ್ತದೆ. ಗಂಡಸಿ ಹೋಬಳಿಗಳ ಕೆರೆಗಳಿಗೆ ಕಾವೇರಿ ನೀರಾವರಿ ನಿಗಮದಿಂದ ನೀರು ತುಂಬಿಸುವ ಕೆಲಸ ಆಗಬೇಕು. ಮಾನವ ಪ್ರಾಣಿ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದೆ. ರೈತರು ತೊಂದರೆಗೆ ಸಿಲುಕುತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸಬೇಕು ಎಂದು ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದರು.