ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ಹವಾಮಾನಾಧಾರಿತ ಬೆಳೆವಿಮೆ ಅಸಮರ್ಪಕವಾಗಿ ವಿತರಿಸುತ್ತಿರುವ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.
ಅದನ್ನು ಮುಂದಿನ ಒಂದು ವಾರದೊಳಗಾಗಿ ಸಮರ್ಪಕವಾಗಿ ದಾಖಲೆಗಳನ್ನು ಸರಿಪಡಿಸಿಕೊಂಡು ಸಂತ್ರಸ್ಥ ರೈತರಿಗೆ ನ್ಯಾಯೋಚಿತವಾದ ಪರಿಹಾರ ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಸೂಚಿಸಿದರು.ಜಿಲ್ಲೆಯಲ್ಲಿರುವ 280 ಮಳೆ ಮಾಪನ ಯಂತ್ರಗಳಲ್ಲಿ ಶೇ.75ರಷ್ಟು ಯಂತ್ರಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಿರುವಾಗ ಮಳೆಮಾಪನದ ದತ್ತಾಂಶ ಸಂಗ್ರಹಿಸುವುದಾದರೂ ಹೇಗೆ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ ಅವರು, ನೆರೆಯ ಗ್ರಾಪಂಗಳಲ್ಲಿ ಬಿದ್ದಿರುವ ಮಳೆಯ ಅಂದಾಜನ್ನು ಆಧರಿಸಿ, ಮಳೆಯ ಪ್ರಮಾಣವನ್ನು ನಿರ್ಧರಿಸುವುದು ಸರಿಯಾದ ಕ್ರಮವಲ್ಲ. ಒಂದೊಮ್ಮೆ ನೆರೆಯ ಗ್ರಾಪಂಗಳಲ್ಲಿನ ಮಳೆ ಪ್ರಮಾಣವನ್ನು ಗುರುತಿಸುವುದಾದರೆ ರಸ್ತೆಯ ದೂರವನ್ನಾಧರಿಸಿ ಅಥವಾ ವೈಮಾನಿಕ ದೂರವನ್ನು ಅಂದಾಜಿಸಿ ಮಳೆಯ ಮಾಪನ ಕೇಂದ್ರವನ್ನು ಗುರುತಿಸಲಾಗುವುದು ಎಂಬ ಬಗ್ಗೆ ಅಧಿಕಾರಿಗಳಲ್ಲಿ ನಿಖರವಾದ ಮಾಹಿತಿ ಇಲ್ಲ ಎಂದು ದೂರಿದರು.
ವಿಮಾ ಮೊತ್ತವನ್ನು ಅರ್ಹ ಬೆಳೆಗಾರರಿಗೆ ವಿತರಿಸುವಲ್ಲಿ ಈಗಾಗಲೇ ವಿಳಂಬವಾಗಿದ್ದು, ಪಾವತಿಸುವಂತೆ ಅನೇಕ ಬಾರಿ ಒತ್ತಡ ಹೇರಲಾಗಿತ್ತು. ವಿಳಂಬವಾಗಿಯಾದರೂ ವಿಮಾ ಮೊತ್ತ ಪಾವತಿಸುತ್ತಿರುವುದು ಸಮಾಧಾನ ಎಂದು ಅರಿವಿಗೆ ಬರುವುದರ ಜೊತೆಗೆ ಬೆಳೆಯ ನಷ್ಟವನ್ನು ಅಂದಾಜಿಸಿ, ವಿಮಾ ಮೊತ್ತ ಪಾವತಿಸುವಲ್ಲಿ ಆಗಿರುವ ಲೋಪದ ಬಗ್ಗೆ ಅಸಮಾಧಾನ ಹೊಂದಿರುವುದಾಗಿ ತಿಳಿಸಿದರು.
ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಅನುಷ್ಠಾನದಲ್ಲಿ ವ್ಯತ್ಯಯಗಳಾಗಿರುವುದು ಬೇಸರವೆನಿಸಿದೆ. ಮಳೆಮಾಪನ ಕೇಂದ್ರಗಳ ನಿಷ್ಕ್ರಿಯತೆಯಿಂದಾಗಿ ರೈತರಿಗೆ ತೀವ್ರ ಪ್ರಮಾಣದ ಅನ್ಯಾಯ ಆಗುತ್ತಿದೆ. ಯೋಜನೆಯ ಸಾರ್ಥಕತೆ ಕಾಣುತ್ತಿಲ್ಲ ಎಂದ ಅವರು, ಸಮಸ್ಯೆಯ ಇತ್ಯರ್ಥಕ್ಕೆ ಅಧಿಕಾರಿಗಳು ಗಮನಹರಿಸಿ. ಮುಂದಿನ ವರ್ಷಕ್ಕೆ ಈ ನ್ಯೂನತೆಗಳು ಮುಂದುವರೆಯದಂತೆಯೂ ಅಧಿಕಾರಿಗಳು ಗಮನಹರಿಸಬೇಕು. ಅಧಿಕಾರಿಗಳು ಸೂಕ್ಷ್ಮವಾಗಿ ಗುರುತಿಸಿ, ಕ್ರಮವಹಿಸಬೇಕು. ನ್ಯೂನತೆ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದರು.
ಅಲ್ಲದೇ ಮಳೆಮಾಪನ ಉಸ್ತುವಾರಿಗಾಗಿ ವಿಮಾ ಕಂಪನಿಗಳವರು ಪ್ರತಿನಿಧಿಯೊಬ್ಬರನ್ನು ನಿಯೋಜಿಸುವಂತೆ ಹಾಗೂ ಈ ಹಿಂದೆ ರೈತರಿಗೆ ನೀಡಲಾಗುತ್ತಿದ್ದ ಮೊಬೈಲ್ ಸಂದೇಶವನ್ನು ಪುನಃ ಕಳಿಸಲು ಏರ್ಪಾಡು ಮಾಡುವಂತೆ ಒತ್ತಾಯಿಸಲಾಗುವುದು. ಪ್ರಸ್ತುತ ಸಾಲಿನಲ್ಲಿ ಸರ್ಕಾರವು ರಾಜ್ಯದಲ್ಲಿ 2500ಕ್ಕೂ ಹೆಚ್ಚಿನ ಮಳೆ ಮಾಪನ ಯಂತ್ರಗಳನ್ನು ಅಗತ್ಯವಿರುವಲ್ಲಿ ಅನುಷ್ಟಾನಗೊಳಿಸಲಿದೆ ಎಂದರು.