ಬಿ. ಶೇಖರ್ ಗೋಪಿನಾಥಂ
ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸರ್ವ ಧರ್ಮಗಳ ಗುರುಗಳು ಪಾಲ್ಗೊಳ್ಳುವ ಮೂಲಕ ಧರ್ಮ ಸಂಸತ್ ನೆನಪಿಸಿದರು.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ 2026ನೇ ಸಾಲಿನ ದಸರಾ ಮಹೋತ್ಸವಕ್ಕೆ ಕೊಪ್ಪಳದ ಗವಿ ಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಇದಕ್ಕೆ ಕಳಶ ಎಂಬಂತೆ ಸರ್ವಧರ್ಮಗಳ 300 ಹೆಚ್ಚಿನ ಗುರುಗಳು ಪಾಲ್ಗೊಂಡಿದ್ದರು.ಹಿಂದೂ ಮಠಾಧೀಶರು, ಮುಸ್ಲಿಂ ಧರ್ಮದಿಂದ ಮೌಲ್ವಿಗಳು, ಕ್ರೈಸ್ತ ಧರ್ಮದಿಂದ ಫಾದರ್ ಗಳು, ಜೈನ ಮುನಿಗಳು, ಸಿಖ್ ಸಂತರು, ಬೌದ್ಧರು ಬಂತೇಜಿಗಳು ಮತ್ತು ಟಿಬೆಟಿಯನ್ ಗುರುಗಳು ದಸರಾ ಉದ್ಘಾಟನೆಯಲ್ಲಿ ಭಾಗವಹಿಸುವ ಮೂಲಕ ದಸರಾ ಮೆರುಗು ಹೆಚ್ಚಿಸಿದರು.
ಅದರಂತೆ ದಸರಾ ಉದ್ಘಾಟನೆಗೆ ದೂರದ ಊರುಗಳಿಂದ ಶನಿವಾರ ಆಗಮಿಸಿದ್ದ ಮಠಾಧೀಶರಿಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ದಸರಾ ಉದ್ಘಾಟಕರಾದ ಕೊಪ್ಪಳದ ಗವಿ ಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಗಳು ಸಹ ಸುತ್ತೂರು ಶ್ರೀಕ್ಷೇತ್ರದಲ್ಲಿ ಉಳಿದುಕೊಂಡಿದ್ದರು.
ಸಾಷ್ಟಾಂಗ ನಮಸ್ಕಾರ:
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ಬೆಟ್ಟದಪುರದ ಕನ್ನಡ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಪಾಲ್ಗೊಂಡಿದ್ದವರಲ್ಲಿ ಪ್ರಮುಖರು.
ಕಾರ್ಯಕ್ರಮ ಮುಗಿದ ಬಳಿಕ ಎಲ್ಲಾ ಗುರುಗಳು ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ತೆರಳಿ, ಪ್ರಸಾದ ಸ್ವೀಕರಿಸಿದರು. ಸುತ್ತುರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗವಿ ಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಖುದ್ದಾಗಿ ಊಟ ಬಡಿಸಿದರು.