ದಾಂಡೇಲಿ ಬಳಿ ಹೃದಯಾಘಾತದಿಂದ ಬಸ್‌ನಲ್ಲಿಯೇ ಪ್ರಯಾಣಿಕ ಸಾವು

KannadaprabhaNewsNetwork |  
Published : Nov 05, 2024, 12:33 AM IST
ಎಚ್‌೦೪.೧೧-ಡಿಎನ್‌ಡಿ೨: ಪುಂಡಲಿಕ ಚಂದರಗಿ | Kannada Prabha

ಸಾರಾಂಶ

ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮತ್ತೂರು ಗ್ರಾಮದ ಪುಂಡಲೀಕ ಚಂದರಗಿ (೫೭) ಎಂಬವರೇ ಸಾವಿಗೀಡಾದ ಪ್ರಯಾಣಿಕ.

ದಾಂಡೇಲಿ:

ಧಾರವಾಡದಿಂದ ದಾಂಡೇಲಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ. ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮತ್ತೂರು ಗ್ರಾಮದ ಪುಂಡಲೀಕ ಚಂದರಗಿ (೫೭) ಎಂಬವರೇ ಸಾವಿಗೀಡಾದ ಪ್ರಯಾಣಿಕ. ಧಾರವಾಡದಿಂದ ಸಾರಿಗೆ ಬಸ್‌ನಲ್ಲಿ ದಾಂಡೇಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾವಾಗಿದೆ. ದಾಂಡೇಲಿಗೆ ಬರುತ್ತಿದ್ದಂತೆಯೇ ಬಸ್‌ನಲ್ಲಿ ಇನ್ನಿತರ ಪ್ರಯಾಣಿಕರು ಬಸ್‌ನ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ. ಸಾರಿಗೆ ಸಂಸ್ಥೆಯ ಸಿಬ್ಬಂದಿ ತಕ್ಷಣವೇ ಸಾರ್ವಜನಿಕ ಆಸ್ಪತ್ರೆಯವರಿಗೆ ತಿಳಿಸಿದ್ದಾರೆ. ಕೂಡಲೇ ಪುಂಡಲೀಕ ಅವರನ್ನು ಆ್ಯಂಬುಲೆನ್ಸ್‌ ಮೂಲಕ ಚಿಕಿತ್ಸೆಗಾಗಿ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತು. ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪುಂಡಲೀಕ ಚಂದರಗಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ನಗರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಚಾವಣಿ ಏರಿದ ಎತ್ತು: ಅವಕ್ಕಾದ ಗ್ರಾಮಸ್ಥರು

ಹಳಿಯಾಳ: ತಾಲೂಕಿನ ತೇರಗಾಂವ ಗ್ರಾಮದಲ್ಲಿ ಭಾನುವಾರ ಗೋವರ್ಧನ ಪೂಜೆಯ ದಿನದಂದು ಎತ್ತೊಂದು ಗ್ರಾಮದ ಮನೆಯ ಚಾವಣಿ ಏರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಿಂದ ಅವಕ್ಕಾದ ಗ್ರಾಮಸ್ಥರು ಚಾವಣಿಯಿಂದ ಎತ್ತನ್ನು ಕೆಳಗಿಳಿಸಲು ಹರಸಾಹಸ ಪಟ್ಟರು.ದೀಪಾವಳಿ ಪ್ರಯುಕ್ತ ನಡೆದ ಬಲಿಪಾಡ್ಯದ ಮರುದಿನ ನಡೆಯುವ ಗುಳವ್ವನ ಪೂಜೆ ಮತ್ತು ಗೋವರ್ಧನಾ ಪೂಜೆಯ ದಿನದಂದು ಗ್ರಾಮೀಣ ಭಾಗದಲ್ಲಿ ಮನೆಯಲ್ಲಿದ್ದ ಗೋವು, ಜಾನುವಾರಗಳನ್ನು ಸ್ನಾನ ಮಾಡಿಸಿ, ಬಣ್ಣ ಹಚ್ಚಿ ಅಲಂಕರಿಸಿ ಅವುಗಳ ಕುತ್ತಿಗೆಗೆ ಒಣಕೊಬ್ಬರಿ ಹಾಗೂ ಮಿಠಾಯಿಗಳನ್ನು ಹಾಕಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಹೀಗೆ ಜಾನುವಾರುಗಳ ಮೆರವಣಿಗೆ ಸಾಗುವಾಗ ಅವುಗಳ ಕೊರಳಲ್ಲಿರುವ ಕೊಬ್ಬರಿ ಮಿಠಾಯಿಯನ್ನು ತೆಗೆಯಲು ಜನರು ಪೈಪೋಟಿ ನಡೆಸುತ್ತಿದ್ದರು. ಆಗ ಮಿಠಾಯಿ ಒಣಕೊಬ್ಬರಿ ಕಸಿಯಲು ಆದ ಪೈಪೋಟಿಗೆ ಬೆದರಿದ ಈಶ್ವರ ಮುಗಳಿ ಎಂಬ ರೈತರ ಎತ್ತೊಂದು ಓಡುವ ಭರಾಟೆಯಲ್ಲಿ ತನ್ನ ಮನೆಯೆಂದು ಭಾವಿಸಿ ದೇವೆಂದ್ರ ಮುಗಳಿ ಎಂಬ ರೈತರೊಬ್ಬರ ಮನೆಯ ಕಾಂಪೌಂಡ್ ಹತ್ತಿ ಮನೆಯ ಚಾವಣಿಯೇರಿದೆ. ಆಕಸ್ಮಿಕವಾಗಿ ನಡೆದ ಘಟನೆಯಿಂದ ಅವಕ್ಕಾದ ಗ್ರಾಮಸ್ಥರು ಮನೆಯ ಚಾವಣಿ ಹತ್ತಿ ರೋಷಾವೇಶದಲ್ಲಿ ಬುಸುಗುಡುತ್ತಿದ್ದ ಎತ್ತನ್ನು ಸಮಾಧಾನಗೊಳಿಸಿ ಕೆಳಗಿಸಿ ಪ್ರಕರಣಕ್ಕೆ ಸುಖಾಂತ್ಯ ಹಾಡಿದರು.ವ್ಯಕ್ತಿ ಮೇಲೆ ಹಲ್ಲೆ: ಮೂವರ ಮೇಲೆ ಕೇಸ್‌ ದಾಖಲು

ಶಿರಸಿ: ಇಬ್ಬರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಮೂವರ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಬದನಗೋಡದ ಸಮೇಲ ಚಂದ್ರಪ್ಪ ಭೋವಿವಡ್ಡರ, ಆಶೀಷ ಉಡ್ಡಪ್ಪ ಭೋವಿವಡ್ಡರ ಹಾಗೂ ಸಂತೋಷ ಫಕೀರಪ್ಪ ಭೋವಿವಡ್ಡರ ಹಲ್ಲೆ ನಡೆಸಿದ ವ್ಯಕ್ತಿಗಳಾಗಿದ್ದಾರೆ.

ಮೂವರ ಮೇಲೆ ಈ ಹಿಂದೆ ಕಳ್ಳತನದ ಪ್ರಕರಣ ದಾಖಲು ಮಾಡಿದ್ದರಿಂದ ದ್ವೇಷದಿಂದ ನ. ೨ರಂದು ಶ್ರೀಕಾಂತ ರಮೇಶ ಭೋವಿವಡ್ಡರ ಅವರಿಗೆ ಮೂವರು ಆರೋಪಿಗಳು ಕಬ್ಬಿಣದ ರಾಡ್ ಹಾಗೂ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಅದನ್ನು ತಪ್ಪಿಸಲು ಬಂದ ಪತ್ನಿ ಜ್ಯೋತಿ ಶ್ರೀಕಾಂತ ಭೋವಿವಡ್ಡರ ಮೇಲೂ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ