ಆಡಂಬರವಿಲ್ಲದ ಶುದ್ಧ ಭಕ್ತಿ ಮಾರ್ಗ ನೆಮ್ಮದಿಯ ಬದುಕನ್ನು ನೀಡಬಲ್ಲದು-ಶಂಕರಾನಂದ ಸ್ವಾಮೀಜಿ

KannadaprabhaNewsNetwork |  
Published : Feb 08, 2025, 12:33 AM IST
ಫೋಟೋ : 6ಎಚ್‌ಎನ್‌ಎಲ್1 | Kannada Prabha

ಸಾರಾಂಶ

ಆಡಂಬರವಿಲ್ಲದ ಶುದ್ಧ ಭಕ್ತಿ ಮಾರ್ಗದಿಂದ ಉತ್ತಮ ತತ್ವಗಳನ್ನು ಆಧರಿಸಿದ ಜೀವನ ವಿಧಾನ ನೆಮ್ಮದಿಯ ಬದುಕನ್ನು ನೀಡಬಲ್ಲದು ಎಂದು ಹೊತನಹಳ್ಳಿ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು ನುಡಿದರು.

ಹಾನಗಲ್ಲ: ಆಡಂಬರವಿಲ್ಲದ ಶುದ್ಧ ಭಕ್ತಿ ಮಾರ್ಗದಿಂದ ಉತ್ತಮ ತತ್ವಗಳನ್ನು ಆಧರಿಸಿದ ಜೀವನ ವಿಧಾನ ನೆಮ್ಮದಿಯ ಬದುಕನ್ನು ನೀಡಬಲ್ಲದು ಎಂದು ಹೊತನಹಳ್ಳಿ ಸಿದ್ಧಾರೂಢ ಮಠದ ಸದ್ಗುರು ಶಂಕರಾನಂದ ಮಹಾಸ್ವಾಮಿಗಳು ನುಡಿದರು. ಗುರುವಾರ ಹಾನಗಲ್ಲ ತಾಲೂಕಿನ ಮಲ್ಲಿಗಾರದಲ್ಲಿ ಸಿದ್ಧರಾಮೇಶ್ವರ ಮಂದಿರದ ಕಳಸಾರೋಹಣ ಹಾಗೂ ಸಭಾ ಭವನ ಉದ್ಘಾಟನೆಯ ನಿಮಿತ್ತ ಹಮ್ಮಿಕೊಂಡ ಎರಡು ದಿನಗಳ ಕಾರ್ಯಕ್ರಮ ಉದ್ಘಾಟನೆಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಗುರುಭಕ್ತಿ ಕಡಿಮೆಯಾಗುತ್ತಿದೆ. ದೇವರು ಧರ್ಮದ ಶ್ರದ್ಧೆಗೂ ಹಿನ್ನಡೆಯಾಗುತ್ತಿದೆ. ಸಾಮಾಜಿಕ ವಿಘಟನೆಯಲ್ಲಿ ತೊಡಗಿ ಸಮಾಜ ಹರಿದುಹಂಚಿ ಹೋಗುತ್ತಿದೆ. ಇಂತಹ ಆತಂಕದ ದಿನಗಳಲ್ಲಿ ದೇವರು ಧರ್ಮ ಜಾಗೃತಿಯ ಜೊತೆಗೆ ಯುವ ಪೀಳಿಗೆಯನ್ನು ಉತ್ತಮ ಸಂಸ್ಕಾರದಲ್ಲಿ ಬೆಳೆಸುವ ಸಂಕಲ್ಪ ಹಿರಿಯರದಾಗಬೇಕಾಗಿದೆ. ಮಠ ಮಂದಿರಗಳ ಮೂಲಕ ಇಂತಹ ಶಕ್ತಿಯುತ ಕಾರ್ಯ ನಡೆಯಬೇಕು ಎಂದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಮುಖ್ಯ ಅತಿಥಿಯಾಗಿ ಮಾತನಾಡಿ, ಅನಾದಿ ಕಾಲದಿಂದ ಭಾರತ ದೇಶದಲ್ಲಿ ದೇವರು ಧರ್ಮದ ನಂಬಿಕೆಯನ್ನು ಹಸಿರಾಗಿ ಉಳಿಸಿಕೊಂಡು ಬಂದಿದ್ದೇವೆ. ದೇವರ ದರ್ಶನ ಪೂಜೆಗಳ ಮೂಲಕ ಉತ್ತಮ ಸಂಸ್ಕೃತಿಯ ಮಾರ್ಗದರ್ಶನ ಬೇಕಾಗಿದೆ. ಪಾಶ್ಚಿಮಾತ್ಯಂ ಸಂಸ್ಕೃತಿಗೆ ಮಾರುಹೋಗಿ ಸ್ವದೇಶಿ ಸಂಸ್ಕೃತಿಯಿಂದ ವಿಮುಖರಾಗುವುದು ಬೇಡ. ಮಾನವ ಜನ್ಮ ದೊಡ್ಡದು ದುರಾಸೆ, ದುರಹಂಕಾರ, ವೈಷಮ್ಯಗಳ ಮೂಲಕ ಇದನ್ನು ಹಾಳು ಮಾಡಿಕೊಳ್ಳುವುದು ಬೇಡ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಎಲ್ಲ ಕಾಲಕ್ಕೂ ಸಲ್ಲುವ ವಚನಕಾರರು ಕೇವಲ ವಚನ ರಚನಗೆ ಸೀಮಿತವಾಗಿರಲಿಲ್ಲ. ಸಮಾಜದ ಹಿತವೇ ಅವರ ಮುಖ್ಯ ಧ್ಯೇಯವಾಗಿತ್ತು. ಬಸವಾದಿ ಶಿವಶರಣರು ಸ್ವಾರ್ಥ ತ್ಯಜಿಸಿ ಸಮಾಜದ ಹಿತವನ್ನೇ ಬದುಕಾಗಿಸಿಕೊಂಡರು. ಶ್ರೀಗುರು ಸಿದ್ಧರಾಮೇಶ್ವರರು ಕೆರೆಗಳನ್ನು ಕಟ್ಟಿಸಿ ದೇವಾಲಯಗಳನ್ನು ನಿರ್ಮಿಸಿ, ದಾನ ಧರ್ಮಾದಿಗಳ ಮೂಲಕ ಜನರ ಕಷ್ಟಕ್ಕೆ ನೆರವಾಗಿ, ಅನ್ನದಾನದ ಶ್ರೇಷ್ಠತೆಯನ್ನು ಮೆರೆದರು. ಜಾತಿ ಮತದ ಮೇರೆ ಮೀರಿ ನೀತಿ ಮೌಲ್ಯದ ಜೀವನಕ್ಕೆ ಸಾಕ್ಷಿಯಾದರು ಎಂದರು. ಶಾಂತಪೂರಮಠದ ಶಿವಾನಂದ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ನ್ಯಾಯವಾದಿ ಬಿ.ಎಸ್. ಅಕ್ಕಿವಳ್ಳಿ ಅಧ್ಯಕ್ಷತೆವಹಿಸಿದ್ದರು. ದೇವಸ್ಥಾನ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಆಶಯ ನುಡಿ ನುಡಿದರು. ಹೈಕೋರ್ಟ್‌ ನ್ಯಾಯವಾದಿ ಸಂದೀಪ ಪಾಟೀಲ, ಎಪಿಎಂಸಿ ಮಾಜಿ ಅಧ್ಯಕ್ಷ ನಿಂಗಪ್ಪ ಪೂಜಾರ, ಪ್ರಗತಿಪರ ರೈತ ಮಹಾಬಳೇಶ್ವರ ಅರಳಲೆಮಠ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಚಂದ್ರಶೇಖರ ಗೂಳಿಯವರ, ಮಲ್ಲಪ್ಪ ಅಡವಿ, ಪುಟ್ಟಪ್ಪ ಹಾವೇರಿ, ನಾಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನಿವೃತ್ತ ಶಿಕ್ಷಕ ಕೆ.ಎಲ್.ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಶೇಕಣ್ಣ ವಂದಿಸಿದರು.ಕುಂಭ ಮೆರವಣಿಗೆ:ಇದಕ್ಕೂ ಮೊದಲು ಶ್ರೀ ಸಿದ್ಧರಾಮೇಶ್ವರ ದೇವಸ್ಥಾನಕ್ಕೆ ಆರೋಹಣ ಮಾಡುವ ಕಳಸದ ಮೆರವಣಿಗೆ ಗ್ರಾಮದಲ್ಲಿ ಪೂರ್ಣ ಕುಂಭದೊಂದಿಗೆ ನಡೆಯಿತು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!