ದತ್ತ ಜಯಂತಿ ಉತ್ಸವಕ್ಕೆ ಶಾಂತಿಯುತ ತೆರೆ

KannadaprabhaNewsNetwork | Updated : Dec 27 2023, 01:32 AM IST

ಸಾರಾಂಶ

ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಮೂರು ದಿನಗಳ ಕಾಲ ದತ್ತಪೀಠದಲ್ಲಿ ಹಮ್ಮಿಕೊಂಡಿದ್ದ ದತ್ತ ಜಯಂತಿ ಮಂಗಳವಾರ ವಿದ್ಯುಕ್ತ ತೆರೆಕಂಡಿತು. ನಿರೀಕ್ಷೆಯಲ್ಲಿ ಭಕ್ತರು, ದತ್ತಮಾಲಾಧಾರಿಗಳು ಆಗಮಿಸದೆ ನೀರಸವಾಗಿತ್ತು.ಎಂದಿನಂತೆ ಜಿಲ್ಲಾಡಳಿತ ಹೆಚ್ಚಿನ ಬಂದೋಬಸ್ತ ವ್ಯವಸ್ಥೆ ಮಾಡಿತ್ತು ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

- ದತ್ತಮಾಲಾಧಾರಿಗಳ ನೀರಸ ಪ್ರತಿಕ್ರಿಯೆ, ನಿರೀಕ್ಷೆಯ ಗಡಿ ದಾಟದ ಸಂಖ್ಯೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ದತ್ತ ಜಯಂತಿಗೆ ಮಂಗಳವಾರ ತೆರೆ ಬಿದ್ದಿತು.

ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ದತ್ತಮಾಲಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಆದರೆ, ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ಮಾಲಾ ಧಾರಿಗಳು ಆಗಮಿಸಲಿಲ್ಲ.

ಈ ಬಾರಿ ದತ್ತಜಯಂತಿ ಕೊನೆಯ ದಿನ ದತ್ತಪೀಠಕ್ಕೆ ಸುಮಾರು 35 ಸಾವಿರ ದತ್ತ ಮಾಲಾಧಾರಿಗಳು ಬರುವ ನಿರೀಕ್ಷೆ ಯಲ್ಲಿ ಸಂಘಟನೆಯವರು ಇದ್ದರು. ಕಳೆದ ವರ್ಷ ಸುಮಾರು 19 ಸಾವಿರ ಮಂದಿ ದತ್ತಜಯಂತಿಯ ಕೊನೆಯ ದಿನದಂದು ದತ್ತಪೀಠಕ್ಕೆ ಆಗಮಿಸಿದ್ದರು. ಆದರೆ, ಈ ಬಾರಿ 10 ಸಾವಿರದ ಗಡಿ ದಾಟಲಿಲ್ಲ, ಕರಾವಳಿ ಪ್ರದೇಶದಿಂದ ಭಕ್ತರು ಆಗಮಿಸ ದಿರುವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷಗಳಲ್ಲಿ ಬೆಳಿಗ್ಗೆಯಿಂದಲೇ ದತ್ತಭಕ್ತರು ವಾಹನಗಳಲ್ಲಿ ಅಪಾರ ಸಂಖ್ಯೆಯಲ್ಲಿ ಬೇರೆ ಜಿಲ್ಲೆಗಳಿಂದ ಆಗಮಿಸು ತ್ತಿದ್ದರು. ಆದರೆ, ಈ ಬಾರಿ ಬೆಳಿಗ್ಗೆ 11 ಗಂಟೆಯಾದರೂ ಭಕ್ತರ ಸಂಖ್ಯೆ 5 ಸಾವಿರದ ಗಡಿ ದಾಟಲಿಲ್ಲ, ಪೀಠದಲ್ಲಿ ಉತ್ಸವದ ವಾತಾವರಣ ಕಂಡು ಬರುತ್ತಿರಲಿಲ್ಲ. ಮಧ್ಯಾಹ್ನ 12 ಗಂಟೆಯ ನಂತರದಲ್ಲಿ ಹೊರ ಜಿಲ್ಲೆಗಳಿಂದ ಭಕ್ತರ ಆಗಮನ ಪ್ರಾರಂಭ ವಾಯಿತು. 2 ಗಂಟೆಯವರೆಗೆ ಸಂಖ್ಯೆ ಹೆಚ್ಚಳವಾಯಿತಾದರೂ 10 ಸಾವಿರ ಗಡಿ ದಾಟಲಿಲ್ಲ.

ಬೇರೆ ಊರುಗಳಿಂದ ಆಗಮಿಸಿದ ದತ್ತಮಾಲಾಧಾರಿಗಳು ಸರದಿ ಸಾಲಿನಲ್ಲಿ ನಿಂತು ದತ್ತಪೀಠದೊಳಗೆ ತೆರಳಿ ದತ್ತ ಪಾದುಕೆಗಳ ದರ್ಶನ ಪಡೆದು, ಮನೆ ಮನೆಗಳಿಗೆ ತೆರಳಿ ಸಂಗ್ರಹಿಸಿದ ಪಡಿಯನ್ನು ಸಮರ್ಪಿಸಿದರು.

ಪಾದಯಾತ್ರೆ: ಮಾಜಿ ಸಚಿವ ಸಿ.ಟಿ. ರವಿ, ಬಿಜೆಪಿ ಜಿಲ್ಲಾ ವಕ್ತಾರ ರವಿ ಚಿಕ್ಕದೇವನೂರು, ಚಿಕ್ಕಮಗಳೂರು ತಾಲೂಕಿನ ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್ ಅವರು ಹೊನ್ನಮ್ಮನಹಳ್ಳದಿಂದ ಪಾದಯಾತ್ರೆಯಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದರು.

ಕಳೆದ ವರ್ಷದಂತೆ ಈ ಬಾರಿಯೂ ಕೂಡ ದತ್ತಪೀಠದ ಆವರಣದೊಳಗೆ ಹೋಮ ಹಾಗೂ ಪೂಜಾ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಸಂಘ ಪರಿವಾರದ ಮುಖಂಡರು ಸೇರಿದಂತೆ ಮಾಜಿ ಸಚಿವ ಸಿ.ಟಿ. ರವಿ, ಖ್ಯಾತ ಜ್ಯೋತಿಷಿ ದ್ವಾರಕ ನಾಥ್ ದಂಪತಿ, ದತ್ತಪೀಠ ಸಂವರ್ಧನಾ ಸಮಿತಿಯವರು ಪಾಲ್ಗೊಂಡಿದ್ದರು.

ದತ್ತಪೀಠಕ್ಕೆ ಪ್ರಮೋದ್ ಮಧ್ವರಾಜ್, ಕಡೂರು ಮಾಜಿ ಶಾಸಕ ಬೆಳ್ಳಿಪ್ರಕಾಶ್, ವಿಎಚ್‌ಪಿ ಮುಖಂಡ ಸೂರ್ಯ ನಾರಾಯಣ, ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೀಶ್‌ರಾಜ್ ಅರಸ್ ಹಾಜರಿದ್ದರು.

ದತ್ತ ಜಯಂತಿಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಈ ಬಾರಿ ಸುಮಾರು 4 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ಚಿಕ್ಕಮಗಳೂರಿನಲ್ಲಿ ಮೊಕ್ಕಂ ಹೂಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಅವರು ದತ್ತಪೀಠದಲ್ಲಿ ಬೆಳಿಗ್ಗೆಯಿಂದಲೇ ಹಾಜರಿದ್ದರು.----- ಬಾಕ್ಸ್‌ ------

ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿ: ಸಿ.ಟಿ. ರವಿ

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವಾಗಲೂ ಬಹುತ್ವದ ಬಗ್ಗೆ ಮಾತನಾಡುತ್ತಿರುತ್ತಾರೆ. ಆದರೆ, ಬಹುತ್ವವನ್ನ ಒಪ್ಪಿಕೊಂಡಿರುವ ಜೊತೆಗೆ ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ. ಹಾಗಾಗಿ ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿಯೇ ಎಂದು ಮಾಜಿ ಸಚಿವ ಸಿ.ಟಿ ರವಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಮಂಗಳವಾರ ತಾಲೂಕಿನ ಇನಾಂ ದತ್ತಾತ್ರೇಯ ಪೀಠದಲ್ಲಿ ದತ್ತ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಹೋಮ ಪೂಜೆ ಹಾಗೂ ದತ್ತ ಪಾದುಕೆಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಹಮ್ಮಿಕೊಂಡಿದ್ದ ದತ್ತ ಮಾಲೆ ಜಯಂತಿ ವಿದ್ಯುಕ್ತವಾಗಿ ಸಂಪನ್ನಗೊಂಡಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೂಡ ವಿಶೇಷ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಸರ್ಕಾರದ ಪ್ರತಿನಿಧಿಗಳಾಗಿ ಯಾರಾದರೂ ಒಬ್ಬರು ಭಾಗವಹಿಸಬೇಕಾಗಿತ್ತು ಆದರೆ ಯಾರು ಬರಬಾರದೇ ಇರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿ. ಇದು ಮುಜರಾಯಿ ಇಲಾಖೆಗೆ ಸೇರಿದ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಒಬ್ಬರು ಭಾಗವಹಿಸಬೇಕಾದದ್ದು ಕ್ರಮವಾಗಿತ್ತು ಯಾರು ಭಾಗವಹಿಸದೆ ಇರುವುದು ದುರಾದೃಷ್ಟಕರ. ಅವರ ಮನಸ್ಸಿನಲ್ಲಿ ಹಿಂದೂ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆ ಎಂಬ ಭಾವನೆ ಇರಬಹುದು.

ಈದ್ ಮಿಲಾದ್ ನಲ್ಲಿ ಪಾಲ್ಗೊಳ್ಳುತ್ತಾರೆ, ದತ್ತ ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರೆ ಯಾವ ಸಂದೇಶ ಕೊಡುತ್ತದೆ ? ನಾವು ಹಿಂದೂ ಭಾವನೆಗಳ ಜೊತೆಗಿಲ್ಲ ಎಂಬ ಸಂದೇಶವನ್ನು ಅವರು ಕೊಡುತ್ತಿದ್ದಾರೆಂದು ನನಗೆ ಅನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೂ ಧರ್ಮ ಮಾತ್ರ ಜಗತ್ತಿನ ಎಲ್ಲವನ್ನು ಒಳಗೊಳ್ಳುವಂತದ್ದು ಇಲ್ಲಿ ಬಹುತ್ವಕ್ಕೆ ಅವಕಾಶವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗಲೂ ಬಹುತ್ವದ ಬಗ್ಗೆ ಮಾತನಾಡುತ್ತಿರುತ್ತಾರೆ, ಬಹುತ್ವವನ್ನ ಒಪ್ಪಿಕೊಂಡಿರುವುದರ ಜೊತೆಗೆ ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ. ಹಾಗಾಗಿ ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿಯೇ ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.

ಅವರವರ ಭಾವಕ್ಕೆ, ಭಕ್ತಿಗೆ ತೆರನಾಗಿ ಇರುತಿಹನು ಶಿವಯೋಗಿ ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿರುವ ಹಿಂದೂ ಧರ್ಮ. ದುರ್ದೈವದ ಸಂಗತಿ ಎಂಬಂತೆ ಇತ್ತೀಚಿನ ದಿನಗಳಲ್ಲಿ ಕೆಲವು ಸಂಘಟನೆಗಳು ಶಿವನನ್ನೇ ಹಿಂದೂ ಧರ್ಮದಿಂದ ಬೇರೆಯಾಗಿ ನೋಡಲು ಯೋಚಿಸುತ್ತಿವೆ. ಜಗತ್ತಿನ ಯಾವ ಶಕ್ತಿ ಕೂಡ ಶಿವನನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ದತ್ತಾತ್ರೇಯರು ಎಂದರೆ ಬ್ರಹ್ಮ ವಿಷ್ಣು ಮಹೇಶ್ವರರು ಏಕೀಭಾವವಾಗಿ ಅವತರಿಸಿರುವುದೇ ದತ್ತಾತ್ರೇಯರ ಅವತಾರ ಯಾವ ಶಕ್ತಿಯು ಕೂಡ ಅದನ್ನ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು 26 ಕೆಸಿಕೆಎಂ 1

ದತ್ತಜಯಂತಿ ಹಿನ್ನಲೆಯಲ್ಲಿ ದತ್ತಪೀಠಕ್ಕೆ ಮಂಗಳವಾರ ಆಗಮಿಸಿದ ದತ್ತಮಾಲಾಧಾರಿಗಳು ದತ್ತ ಪಾದುಕೆಗಳ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿರುವುದು.

----

26 ಕೆಸಿಕೆಎಂ 2

ದತ್ತಜಯಂತಿಯ ಕೊನೆಯ ದಿನವಾದ ಮಂಗಳವಾರದಂದು ದತ್ತಪೀಠದ ಆವರಣದಲ್ಲಿ ಹೋಮ ನಡೆಯಿತು.

Share this article