ಅಧಿಕಾರ, ಆಸ್ತಿ, ಅಂತಸ್ತಿನಿಂದ ಮನುಷ್ಯ ದೊಡ್ಡವನಾಗಲ್ಲ: ಅಭಿನವ ಗವಿಸಿದ್ದೇಶ್ವರ ಶ್ರೀ

KannadaprabhaNewsNetwork |  
Published : Jan 29, 2026, 02:45 AM IST
ಕಾರ್ಯಕ್ರಮದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

ದಾನ, ಸತ್ಕಾರ್ಯ ಮಾಡುವುದು ಪುಣ್ಯದ ಕಾರ್ಯವಾಗಿದೆ. ದಂಡ ಕಟ್ಟುವುದು ನಿರರ್ಥಕವಾಗಿದೆ. ಕಾರಣ ಅವಕಾಶವಿದ್ದಾಗ ದಾಸೋಹಕ್ಕೆ, ಸತ್ಕಾರ್ಯಗಳಿಗೆ ದಾನ ಮಾಡುವುದರ ಮೂಲಕ ಪುಣ್ಯದ ಬುತ್ತಿ ಕಟ್ಟಿಕೊಳ್ಳಬೇಕು. ತನ್ಮೂಲಕ ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕು.

ಗದಗ: ಪ್ರತಿಯೊಬ್ಬರಲ್ಲಿ ದೊಡ್ಡವರಾಗಿ ಬೆಳೆಯಬೇಕು ಎಂಬ ಅಪೇಕ್ಷೆ ತಾಯಿ ಆದಿಯಾಗಿ ಎಲ್ಲರಲ್ಲಿಯೂ ಇರುವುದು. ಆದರೆ ಮನುಷ್ಯ ಹಣ, ಅಧಿಕಾರ, ಆಸ್ತಿ, ಅಂತಸ್ತಿನಿಂದ, ಸ್ಥಾನಮಾನದಿಂದ ದೊಡ್ಡವನಾಗುವುದಿಲ್ಲ. ಜನ್ಮದಿಂದ ಯಾರೂ ದೊಡ್ಡವರಾಗಿಲ್ಲ, ಆಗುವುದಿಲ್ಲ, ಕರ್ಮದಿಂದ ದೊಡ್ಡವರಾಗುತ್ತಾರೆ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ತಿಳಿಸಿದರು.

ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದಲ್ಲಿ ಚನ್ನವೀರ ಶರಣರ ಜಾತ್ರಾ ಮಹೋತ್ಸವ, 31ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಚಿಂತನ ಗೋಷ್ಠಿ ಸಾನಿಧ್ಯ ವಹಿಸಿ ಮಾತನಾಡಿ, ಉತ್ತಮ ಕಾರ್ಯಗಳಿಂದ ಪರಿಪೂರ್ಣ ವ್ಯಕ್ತಿತ್ವದಿಂದ ದೊಡ್ಡವನಾಗುತ್ತಾನೆ. ಮನುಷ್ಯನ ನೆಮ್ಮದಿಗಾಗಿ ದಿನದ ಪ್ರಾರಂಭದಲ್ಲಿ ಉತ್ತಮ ವಿಚಾರಗಳಿಂದ ಮೇಲೇಳುವುದು. ಉತ್ತಮ ವಿಚಾರಗಳೊಂದಿಗೆ ನಿದ್ರೆಗೆ ಜಾರುವುದಾಗಬೇಕು, ಆಗ ಸಹಜವಾಗಿ ಸುಖಿಯಾಗಿ, ನೆಮ್ಮದಿಯಾಗಿ ಇರಲು ಸಾಧ್ಯ ಎಂದರು.

ಮನುಷ್ಯ ತನ್ನ ಮರಣಕ್ಕೆ ಭಯಭೀತನಾಗುತ್ತಾನೆ, ಏಕೆಂದರೆ ನಾನು, ನನ್ನದು ಎಂಬುದನ್ನು ಸಾವು ಕಸಿದುಕೊಂಡು ಹೋಗುತ್ತದೆ, ಅದರಿಂದ ಭಯಭೀತನಾಗುತ್ತಾನೆ. ಹುಟ್ಟು ಸಂತೋಷಪಡಿಸುತ್ತದೆ, ಸಾವು ದುಃಖಪಡಿಸುತ್ತದೆ. ಆದರೆ ಪುಣ್ಯವನ್ನು ಸಾವಿನಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ದಾನ, ಸತ್ಕಾರ್ಯ ಮಾಡುವುದು ಪುಣ್ಯದ ಕಾರ್ಯವಾಗಿದೆ. ದಂಡ ಕಟ್ಟುವುದು ನಿರರ್ಥಕವಾಗಿದೆ. ಕಾರಣ ಅವಕಾಶವಿದ್ದಾಗ ದಾಸೋಹಕ್ಕೆ, ಸತ್ಕಾರ್ಯಗಳಿಗೆ ದಾನ ಮಾಡುವುದರ ಮೂಲಕ ಪುಣ್ಯದ ಬುತ್ತಿ ಕಟ್ಟಿಕೊಳ್ಳಬೇಕು. ತನ್ಮೂಲಕ ಜೀವನದ ಸಾರ್ಥಕತೆ ಹೆಚ್ಚಿಸಿಕೊಳ್ಳಬೇಕೆಂದರು. ಹೊಸಹಳ್ಳಿಯ ಬೂದೀಶ್ವರ ಸ್ವಾಮಿಗಳು ಮಾತನಾಡಿ, ಮನುಷ್ಯನಿಗೆ ಹುಟ್ಟಿದ ಜೀವ ಬದುಕಬೇಕು, ಬದುಕು ಸುಖದಿಂದ ಕೂಡಿರಬೇಕೆಂಬ ಮಹಾದಾಸೆ ಇರುವುದು. ಶಾಂತಿ ಎನ್ನುವುದು ಎಲ್ಲೆಂದರಲ್ಲಿ ಹುಡುಕಿದರೆ ಸಿಗುವ ವಸ್ತುವಲ್ಲ, ಅದು ಪರಿಶುದ್ಧವಾಗಿ ನಮ್ಮ ಹೃದಯದಲ್ಲಿ ಅರಳುವುದಾಗಿದೆ. ಸುಖ, ಶಾಂತಿ, ನೆಮ್ಮದಿ ಮಹಾತ್ಮರ ಸನ್ನಿಧಾನದಲ್ಲಿ ದೊರೆಯುವುದು ಎಂದರು.

ಶಿವಶಾಂತವೀರ ಶರಣರು ಆಶೀರ್ವಚನ ನೀಡಿ, ಬಡವರ, ದೀನ ದುರ್ಬಲರ, ಅಸಹಾಯಕರ, ನೊಂದವರ ಬಾಳಿಗೆ ಸಂತೈಸುವುದರ ಮೂಲಕ ಬೆಳಕಾಗಿ ಸಾರ್ಥಕತೆ ಪಡೆಯಬೇಕು. ನಿತ್ಯ ಜೀವನದಲ್ಲಿ ಸಂಕಷ್ಟದಲ್ಲಿರುವವರ ಸಹಾಯಕವಾಗಿ ಕಾರ್ಯ ಮಾಡುವುದಾಗಬೇಕು ಎಂದರು.

ಕನಕಗಿರಿಯ ಡಾ. ಚನ್ನಮಲ್ಲ ಸ್ವಾಮಿಗಳು, ಗುಡ್ಡದ ಅನ್ವೇರಿಯ ಶಿವಯೋಗೀಶ್ವರ ಸ್ವಾಮಿಗಳು, ಹೆಬ್ಬಾಳ ಬ್ರಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು, ಮಂಗಳೂರಿನ ಸಿದ್ಧಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಸಚಿವ ಎಚ್.ಕೆ. ಪಾಟೀಲ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಬಿ.ಆರ್. ಯಾವಗಲ್, ಮಾಜಿ ಸಚಿವ ಎಸ್.ಎಸ್. ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಖನಿಜ ಅಬಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಪಾಟೀಲ, ರಾಜ್ಯ ವಿಕೇಂದ್ರಿಕರಣ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಖಜ್ಜಿಡೋಣಿಯ ಕೃಷ್ಣಾನಂದ ಶಾಸ್ತ್ರೀಗಳು ಉಪಾದೇಶಾಮೃತ ನೀಡಿದರು. ಮಹಾಂತ ಮಠದ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೀಯಾ ಪೀರಸಾಬ ಕೌತಾಳ ಅವರಿಂದ ಸಂಗೀತ ಸೇವೆ ಜರುಗಿತು. ಶಿವಲಿಂಗಯ್ಯ ಶಾಸ್ತ್ರಿ ಸಿದ್ದಾಪೂರ ಸ್ವಾಗತಿಸಿದರು. ಸವಿತಾ ಶಿವಕುಮಾರ ನಿರೂಪಿಸಿದರು. ಬಿ.ವೈ. ಡೊಳ್ಳಿನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೈಲಲ್ಲೂ ದರ್ಶನ್‌ಗೆ ‘ಅಭಿಮಾನಿಗಳು’ ಕಾಟ!
ನಾಳೆ ಹಲವು ಸಾಧಕರಿಗೆ ಗಾಂಧಿ ಪುರಸ್ಕಾರ ಪ್ರದಾನ