ಕನ್ನಡಪ್ರಭ ವಾರ್ತೆ ಕೊಪ್ಪಳ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಚಿವರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ಕೂಡಲೇ ಇಂಥ ಸಚಿವರನ್ನು ಶಿಕ್ಷಣ ಇಲಾಖೆಯಿಂದ ಬದಲಾಯಿಸಿ ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಗುಂಗಿನಲ್ಲಿದೆ. ಅಭಿವೃದ್ಧಿ, ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ಮಾತನಾಡುತ್ತಲೇ ಇಲ್ಲ. ಅವರಿಗೆ ಅದು ಬೇಕಾಗಿಲ್ಲ. ಹೋದಲ್ಲೆಲ್ಲ ಬರಿ, ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಹೇಳುವುದೇ ದೊಡ್ಡ ಕೆಲಸವಾಗಿದೆ ಎಂದರು.ಅಚ್ಚರಿ ಎಂದರೆ ಇದುವರೆಗೂ ಯಾರೊಬ್ಬರಿಗೂ ಯುವನಿಧಿ ನೀಡಿಲ್ಲ. ಆದರೂ ನಾವು ಯುವಕರಿಗೆ ಯುವನಿಧಿ ನೀಡುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿದು ಹೋಗಿದ್ದರಿಂದ ಶೇ. 20 ಕೃಪಾಂಕ ನೀಡಿದ್ದಾರೆ. ಈಗಂತೂ ಪದೇ ಪದೇ ಪರೀಕ್ಷೆ ನಡೆಸುವುದರಿಂದ ಹೈಸ್ಕೂಲ್ ಶಿಕ್ಷಕರು ಬರಿ ಪರೀಕ್ಷಾ ಕರ್ತವ್ಯದಲ್ಲಿಯೇ ನಿರತರಾಗುವಂತೆ ಮಾಡಿದೆ ಎಂದರು.ಕಲ್ಯಾಣ ಕರ್ನಾಟಕದಲ್ಲಿ 17796 ಶಿಕ್ಷಕರ ಕೊರತೆ ಇದೆ. ಈ ಭಾಗದಿಂದ 6 ಸಾವಿರ ಶಿಕ್ಷಕರು ಬೇರೆಡೆ ವರ್ಗಾವಣೆಯಾಗಿದ್ದಾರೆ. ಹೀಗಾದರೆ ಹೇಗೆ ಈ ಭಾಗದ ಶಿಕ್ಷಣ ಸುಧಾರಣೆಯಾಗುತ್ತದೆ ಎಂದು ಕಿಡಿಕಾರಿದರು.
ಸಿನೆಮಾ ಲೋಕದಿಂದ ಬಂದಿರುವ ಶಿಕ್ಷಣ ಸಚಿವರನ್ನು ದೇವರೇ ಕಾಪಾಡಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಅದರಲ್ಲೂ ಕಾಲೇಜಿಗೆ ಹೋಗುವ ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.ಗೆಲುವು ನಿಶ್ಚಿತ:
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಮೊದಲ ಪ್ರಾಶಸ್ತ್ಯ ಮತಗಳಲ್ಲಿಯೇ ಗೆಲುವು ಸಾಧಿಸುತ್ತಾರೆ ಎಂದು ರವಿಕುಮಾರ ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಲೋಕಸಭಾ ಅಭ್ಯರ್ಥಿ ಡಾ. ಬಸವರಾಜ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ಜಿಲ್ಲಾ ವಕ್ತಾರ ಸೋಮಶೇಖರಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೊದಲಾದವರು ಇದ್ದರು.
ಇದೆಂಥಾ ಸರ್ಕಾರ:ಬರೆಯೋಕೆ, ಓದೋಕೆ ಬಾರದವರಿಗೆ ಸರ್ಕಾರಿ ನೌಕರಿ ನೀಡುವುದು ಎಂದರೆ ಇದೆಂಥಾ ಸರ್ಕಾರ ಎಂದು ಎಂಎಲ್ಸಿ ಎನ್. ರವಿಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ನಗರದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓದಲು, ಬರೆಯಲು ಬಾರದೆ ಇದ್ದರೂ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ ಅವರು, ಅಂಧೇರಿ ದರ್ಬಾರ್ ಸರ್ಕಾರ ಎಂದು ಕುಟುಕಿದರು.