ಸಾಮಾನ್ಯವಾಗಿ ಮಂಡ್ಯ ಜಿಲ್ಲೆಯನ್ನು ಕೃಷಿ ಪ್ರಧಾನ ಜಿಲ್ಲೆ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲಿರುವ ತುಂಡು ಭೂಮಿಯಿಂದ ಏನನ್ನೂ ಸಾಧಿಸಲಾಗದು. ಪ್ರತಿಯೊಬ್ಬರೂ ಉನ್ನತ ವ್ಯಾಸಂಗ ಮಾಡಿ ದೊಡ್ಡ ಅಧಿಕಾರಿಯಾಗಬೇಕು. ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಎಲ್ಲರೂ ಕೂಡಿ ಕಲ್ಪಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಕುಟುಂಬಗಳು ಇಬ್ಬಾಗವಾದಂತೆ ಕೃಷಿ ಪ್ರಧಾನ ಜಿಲ್ಲೆ ಮಂಡ್ಯದಲ್ಲಿ ತುಂಡು ಭೂಮಿ ಹೆಚ್ಚಾಗಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿಲ್ಲ. ರೈತ ಮಕ್ಕಳು ಕೃಷಿಯೊಂದಿಗೆ ಶಿಕ್ಷಣವಾಗಿ ಪ್ರಗತಿ ಸಾಧಿಸಿ ಅಭಿವೃದ್ಧಿ ಹೊಂದಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕದ ಮನೆ ಅಂಕೇಗೌಡ ಹೇಳಿದರು.
ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಕೆ.ವಿ.ಎಸ್.ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ನಡೆದ ನಿತ್ಯ ಸಚಿವ ಕೆ.ವಿ.ಶಂಕರಗೌಡರ 111ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯ ಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಮತ್ತು ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಮಂಡ್ಯ ಜಿಲ್ಲೆಯನ್ನು ಕೃಷಿ ಪ್ರಧಾನ ಜಿಲ್ಲೆ ಎಂದು ಹೇಳಲಾಗುತ್ತಿದೆ. ಆದರೆ, ಇಲ್ಲಿರುವ ತುಂಡು ಭೂಮಿಯಿಂದ ಏನನ್ನೂ ಸಾಧಿಸಲಾಗದು. ಪ್ರತಿಯೊಬ್ಬರೂ ಉನ್ನತ ವ್ಯಾಸಂಗ ಮಾಡಿ ದೊಡ್ಡ ಅಧಿಕಾರಿಯಾಗಬೇಕು. ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಎಲ್ಲರೂ ಕೂಡಿ ಕಲ್ಪಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಭೂಮಿಯನ್ನು ಎಲ್ಲರೂ ಅರ್ಧ ಎಕರೆ, ಕಾಲು ಎಕರೆ ಎಂದು ವಿಭಾಗ ಮಾಡಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಕೈ ಹಿಡಿಯುವುದು ಕೇವಲ ಶಿಕ್ಷಣ ಮಾತ್ರ. ಪ್ರತಿಯೊಬ್ಬರೂ ದೊಡ್ಡ ಕನಸನ್ನು ಕಂಡು ಉನ್ನತ ವಿದ್ಯೆಯನ್ನು ಪಡೆಯಬೇಕು ಎಂದರು.
ವಿದ್ಯೆಯಲ್ಲಿ ಮಂಡ್ಯ ಜಿಲ್ಲೆ ಹಿಂದೆ ಎನ್ನುವಂತಹ ಕಾಲ ಇತ್ತು. ಆದರೆ, ಶಂಕರಗೌಡರು ಮತ್ತು ಸ್ನೇಹಿತರು ಈ ಸಂಸ್ಥೆಯನ್ನು ಸ್ಥಾಪಿಸಿದ ನಂತರದ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಂಡ್ಯ ಜಿಲ್ಲೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದೆ ಎಂದರು.
ಮಕ್ಕಳು ಎಲ್ಲಿಯವರೆಗೆ ಓದುತ್ತಾರೋ ಅಲ್ಲಿಯವರೆಗೂ ಓದಿಸುವಂತಹ ಪ್ರಯತ್ನವನ್ನು ಪೋಷಕರು ಮಾಡಬೇಕು. ಕೆಎಎಸ್, ಐಎಎಸ್ ಅಧಿಕಾರಿಯಾಗಲು ಮುಂಜಾನೆ 4 ಗಂಟೆಯಿಂದ 8 ಗಂಟೆಯವರೆಗೆ ಪ್ರಾಮಾಣಿಕವಾಗಿ ಬದ್ಧತೆಯಿಂದ ಅಧ್ಯಯನ ಮಾಡಬೇಕು. ಆಗ ಖಂಡಿತಾ ಅವರು ಯಶಸ್ಸು ಪಡೆಯುತ್ತಾರೆ. ಇದಕ್ಕೆ ಪೂರಕವಾದ ಪುಸ್ತಕಗಳನ್ನು ನಾನು ಕೊಡುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಪುಸ್ತಕ ಮನೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳಿವೆ. ಅವುಗಳನ್ನು ಎಲ್ಲರೂ ಓದಬಹುದು. ಪ್ರವೇಶ ಶುಲ್ಕ, ಸದಸ್ಯತ್ವದ ಅವಶ್ಯಕತೆ ಇಲ್ಲ. ನಾನು ಮತ್ತು ನನ್ನ ಪತ್ನಿ ಇಬ್ಬರೇ ಅದನ್ನು ನೋಡಿಕೊಳ್ಳುತ್ತೇವೆ ಎಂದು ತಮ್ಮ ಪುಸ್ತಕ ಮನೆ ಬಗ್ಗೆ ಮಾಹಿತಿ ಹಂಚಿಕೊಂಡರು.
ಕೆ.ವಿ.ಶಂಕರಗೌಡರು ತಮ್ಮ ಸ್ವಾರ್ಥ ಮತ್ತು ಕುಟಂಬಕ್ಕಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಅವರ ಬದುಕಿನುದ್ದಕ್ಕೂ ಸಮಾಜ ಸೇವೆಗಾಗಿಯೇ ತಮ್ಮನ್ನು ತಾವು ತೊಡಗಿಸಿಕೊಂಡರು. ಅದರ ಫಲವೇ ಇಂದು ಪಿಇಎಸ್ ಸಂಸ್ಥೆ ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂದರು.
ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಮಾತನಾಡಿ, ಕೆ.ವಿ.ಶಂಕರಗೌಡ ಮತ್ತವರ ಸ್ನೇಹಿತರು ನಾಟಕ ಪ್ರದರ್ಶನ ಮಾಡಿ ಈ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಇದರಿಂದಾಗಿ ಈ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಸಾಧಿಸಿ ಲಕ್ಷಾಂತರ ಮಂದಿ ಇಂಜಿನಿಯರಿಂಗ್ ಪದವಿ ಪಡೆಯಲು ಸಾಧ್ಯವಾಗಿದೆ ಎಂದರು.
ಸರಸ್ವತಿ ಯಾರಪ್ಪನ ಮನೆ ಸ್ವತ್ತೂ ಅಲ್ಲ. ಪ್ರತಿಭೆ ಇದ್ದವರಿಗೆ ಸರಸ್ವತಿ ಒಲಿಯುತ್ತಾಳೆ. ಇದಕ್ಕೆ ಅಂಕೇಗೌಡರೇ ಸಾಕ್ಷಿ. ತಮ್ಮ ದುಡಿಮೆಯ ಹಣವೆಲ್ಲವನ್ನೂ ಪುಸ್ತಕಗಳಿಗೆ ಹಾಕಿ ಹಲವು ಮಂದಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇವರ ಸೇವೆಯನ್ನು ಕಂಡ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.
ಇದೇ ವೇಳೆ ಖ್ಯಾತ ವೈದ್ಯ ಡಾ.ಎ.ವಿ.ಉಮೇಶ್ ಅವರಿಗೆ ರಾಜ್ಯ ಮಟ್ಟದ ರಂಗಭೂಮಿ ಪ್ರಶಸ್ತಿ ಹಾಗೂ ವೈದ್ಯ ಹಾಗೂ ಚಿಂತಕ ಡಾ.ಬಿ.ಸುಜಯ್ ಕುಮಾರ್ ಅವರಿಗೆ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಪಿಇಟಿ ಖಜಾಂಚಿ ಚಂದ್ರಕಲಾ ಶಿವಾನಂದ, ಟ್ರಸ್ಟಿಗಳಾದ ಡಾ.ರಾಮಲಿಂಗಯ್ಯ ಹಲವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.