ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಎಸ್ಐಆರ್ ವಿಚಾರದಲ್ಲಿ ರಾಹುಲ್ ಗಾಂಧಿ ಅವರು ವಿವಿಧ ಪಕ್ಷ ಹಾಗೂ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ನಡೆಸುತ್ತಿರುವುದನ್ನು ಟೀಕಿಸಿದ ವಿಜಯೇಂದ್ರ, ತಮ್ಮೊಬ್ಬರ ಕೈಯಲ್ಲೇ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಗೊತ್ತಾಗಿರುವುದರಿಂದ ಎಲ್ಲರನ್ನೂ ಸೇರಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.ನೂರು ದಿನಗಳಲ್ಲಿ ಏನು ಕಡಿದು ಕಟ್ಟೆ ಹಾಕಿದ್ದಾರೆ?:
ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿಜಯೇಂದ್ರ, ನೂರು ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಏನು ಕಡಿದು ಕಟ್ಟಿಹಾಕಿದ್ದಾರೆ?. ಮುಖ್ಯಮಂತ್ರಿಗಳು ತಮ್ಮನ್ನು ಪ್ರಜಾಸೇವಕ ಎಂದು ಹೇಳಿಕೊಳ್ಳುತ್ತಾರೆ. ಭೀಕರ ಬರ ಇದ್ದರೂ ರೈತರಿಗೆ ₹2,500 ಪರಿಹಾರ ನೀಡುವುದಾಗಿ ಹೇಳುವುದು ಬಡವರಿಗೆ ಭಿಕ್ಷೆ ನೀಡಿದಂತೆ ಎಂದು ಟೀಕಿಸಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ಬಗ್ಗೆ ಇರುವ ಕಾಳಜಿ ಜನರ ಬಗ್ಗೆ ಇಲ್ಲ. ರಿಯಲ್ ಎಸ್ಟೇಟ್ ವಿಚಾರದಲ್ಲಿ ಅವರು ಎಕ್ಸಫರ್ಟ್. ಕಸದಿಂದ ರಸ ತೆಗೆಯುವಲ್ಲಿ ಅವರು ಬುದ್ಧಿವಂತರು ಎಂದು ವ್ಯಂಗ್ಯವಾಡಿದರು.ಸರ್ಕಾರದ ಬಹುತೇಕ ಯೋಜನೆಗಳು ಘೋಷಣೆ ಮತ್ತು ಪ್ರಚಾರಕ್ಕೆ ಸೀಮಿತವಾಗಿವೆ. ಮುಖ್ಯಮಂತ್ರಿ ಬೆಂಗಳೂರಿಗಷ್ಟೇ ಸೀಮಿತವಾಗಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಅವರಿಗೆ ಬರೆಯಲಾಗಿರುವ ಪತ್ರವೇ ಸರ್ಕಾರದ ಆರ್ಥಿಕ ನಿರ್ವಹಣೆಗೆ ಕೈಗನ್ನಡಿ ಎಂದರು.
ಉತ್ತರ ಕರ್ನಾಟಕದ ನೀರಾವರಿ ಮತ್ತು ಅಭಿವೃದ್ಧಿ ಯೋಜನೆಗಳಾದ ಯುಕೆಪಿ ಮತ್ತಿತರ ಪ್ರಮುಖ ಯೋಜನೆಗಳಿಗೆ ಆದ್ಯತೆ ನೀಡುವ ಬದಲು ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ಎಲ್ಲ ತಾಲೂಕುಗಳಲ್ಲೂ ರಿಂಗ್ ರೋಡ್ ಮಾಡುವ ಘೋಷಣೆ ಮಾಡಲಾಗುತ್ತಿದೆ. ಇದರ ಹಿಂದೆ ರಿಯಲ್ ಎಸ್ಟೇಟ್ ಹಿತಾಸಕ್ತಿ ಇದೆ. ಪಕ್ಷದ ಹಿರಿಯರೇ ಆಂತರಿಕವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವಾಗ ಡಿ.ಕೆ.ಶಿವಕುಮಾರ್ ಅವರಿಗೆ ನೆಮ್ಮದಿಯಿಂದ ರಿಯಲ್ ಎಸ್ಟೇಟ್ ಮಾಡಲು ಕೂಡ ಆಗುವುದಿಲ್ಲ ಎಂದು ಲೇವಡಿ ಮಾಡಿದರು.
ಜಾತಿ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರಲು ಯತ್ನ:ಹೇಗಾದರೂ ಮಾಡಿ ಬಣ್ಣಬಣ್ಣದ ಮಾತುಗಳನ್ನಾಡಿ, ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯಬೇಕೆಂಬ ಪ್ರಯತ್ನ ಕಾಂಗ್ರೆಸ್‌ನಿಂದ ನಡೆಯುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಮುಂಬರುವ ಜಿಪಂ, ತಾಪಂ ಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಬೂತ್ ಸಂಕಲ್ಪ ಯಾತ್ರೆ ಮೂಲಕ ಸಂಘಟನೆ ಬಲಪಡಿಸುತ್ತಿದೆ ಎಂದರು.
ಮತ್ತೆ ಸಿಎಂ ಆಗುವುದಕ್ಕೆ ನನ್ನ ತಕರಾರಿಲ್ಲ:2028ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಮತ್ತು ತಾವೇ ಮುಖ್ಯಮಂತ್ರಿ ಆಗುತ್ತೇನೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್ ಅವರು ಮತ್ತೆ ಮುಖ್ಯಮಂತ್ರಿಯಾಗುವುದಕ್ಕೆ ನನ್ನ ತಕರಾರು ಏನೂ ಇಲ್ಲ. ಆದರೆ ಸ್ಟಿಂಗ್ ಆಪರೇಷನ್, ಡಿಂಗ್ ಆಪರೇಷನ್‌ಗಳನ್ನು ಬದಿಗಿಟ್ಟು ಸರಿಯಾಗಿ ಆಡಳಿತ ನಡೆಸಲಿ ಎಂದು ಹೇಳಿದರು.
2028ರಲ್ಲಿ ಬಿಜೆಪಿ ಸರ್ಕಾರ: ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಗಳಿಗೆ ಬಿಜೆಪಿ ಸಜ್ಜಾಗುತ್ತಿದೆ. ರಾಜ್ಯದಾದ್ಯಂತ ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಬೂತ್ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ. ಜನರ ಸಮಸ್ಯೆಗಳನ್ನು ಆಲಿಸಿ, ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲಾಗುತ್ತಿದೆ ಎಂದು ವಿಜಯೇಂದ್ರ ತಿಳಿಸಿದರು.