ಹುಬ್ಬಳ್ಳಿ:
ಸಂಪೂರ್ಣ ಬಹುಮತವಿರುವ ಸರ್ಕಾರ ಬೀಳಿಸುವ ಹುನ್ನಾರಕ್ಕೆ ಕೈಹಾಕಿ ಪಾದಯಾತ್ರೆ ನಡೆಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಡೆ ಖಂಡಿಸಿ ಮಂಗಳವಾರ ಕರ್ನಾಟಕ ಕುರುಬ ಸಮಾಜ ಸಂಘ-ಸಂಸ್ಥೆಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ಒಕ್ಕೂಟದ ರಾಜ್ಯಾಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ವಿಪಕ್ಷಗಳು ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸುವ ಕುತಂತ್ರ ನಡೆಸಿವೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ತಂತ್ರ ರೂಪಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಬೇರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರ ಕೆಳಗಿಳಿಸಿ ಬಿಜೆಪಿ ನೇತೃತ್ವದ ಸರ್ಕಾರ ರಚನೆ ಮಾಡಿದ್ದುಂಟು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿನ ಸರ್ಕಾರ ಕೆಳಕ್ಕಿಳಿಸಬೇಕೆಂದು ಪ್ರಯತ್ನ ನಡೆಸಿದ್ದಾರೆ. ಅದರ ಭಾಗವೇ ಈಗ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು ರಾಷ್ಟ್ರಪತಿ ಅವರನ್ನು ಬದಲಾಯಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಕುರುಬ ಸಮಾಜದಿಂದ ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಸಾಕಷ್ಟು ಹಗರಣ ಮಾಡಿ ರಾಜ್ಯದ ಉದ್ದಗಲಕ್ಕೂ ಆಸ್ತಿ ಮಾಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಪುತ್ರ ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎಂಬುದು ಬಹಿರಂಗ ಸತ್ಯ. ರಾಜ್ಯ ಸರ್ಕಾರ ಈ ಪ್ರಕರಣಗಳನ್ನೂ ಎಸ್‌ಐಟಿಗೆ ವಹಿಸಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಲಿ ಎಂದರು.ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಒಕ್ಕೂಟದ ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಘೋಷಣೆ ಕೂಗಿದರು. ನಂತರ ಚೆನ್ನಮ್ಮ ವೃತ್ತಕ್ಕೆ ತೆರಳಿ ಅಲ್ಲಿಯೂ ಕೆಲಕಾಲ ಪ್ರತಿಭಟನೆ ನಡೆಸಿ ಅಲ್ಲಿಂದ ಪಾದಯಾತ್ರೆ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಹೂವಪ್ಪ ದಾಯಗೋಡಿ, ಶಿವಾನಂದ ಮುತ್ತಣ್ಣವರ, ಎಚ್.ಕೆ. ದೊಡ್ಡದುನಿ, ಹನುಮಂತ ಕಂಬಳಿ, ಡಿ.ಟಿ. ಪಾಟೀಲ, ನಿಂಗಪ್ಪ ಜಕ್ಕಲಿ, ಸಿದ್ದಲಿಂಗಪ್ಪ ಮಟ್ಟಿ, ಶಿವಾನಂದ ಮುತ್ತಣ್ಣವರ, ಕರಿಯಪ್ಪ ಬಿಸಗಲ್ಲ, ಸಂಜು ಧುಮಕ್ಕನಾಳ, ಸಂತೋಷ ಡೊಳ್ಳಿನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.