ಕಾಲನ ಕಣ್ಣಿನಿಂದ ಜೀವನ ಅರಿಯಬಹುದು: ರಾಘವೇಶ್ವರ ಶ್ರೀ

KannadaprabhaNewsNetwork | Published : Aug 7, 2024 1:09 AM

ಸಾರಾಂಶ

ಗುರುಕುಲ ಜೀವನವನ್ನು ಕಲಿಯುವ, ಜೀವನ ಅರ್ಥ ಮಾಡಿಕೊಳ್ಳುವ ವಿದ್ಯಾಸ್ಥಾನ. ಮಠ ಎನ್ನುವುದು ನಮ್ಮ ಜೀವನವನ್ನು ಅರ್ಥ ಮಾಡಿಕೊಳ್ಳುವ ಜಾಗ. ಜೀವನವನ್ನು ತಿಳಿಯುವುದು ಎನ್ನುವುದು ಕಾಲವನ್ನು ತಿಳಿದುಕೊಳ್ಳುವುದು.

ಗೋಕರ್ಣ: ಕಾಲವನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಜೀವನವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬಹುದು. ಕಾಲದ ಕಣ್ಣಿನ ಮೂಲಕ ಜೀವನವನ್ನು ಅರಿತುಕೊಳ್ಳೋಣ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುಮಾಸ್ಯ ಕೈಗೊಂಡಿರುವ ಶ್ರೀಗಳು ಮಂಗಳವಾರ ಕಾಲ ಸರಣಿಯಲ್ಲಿ ಪ್ರವಚನ ನೀಡಿದರು.

ಗುರುಕುಲ ಜೀವನವನ್ನು ಕಲಿಯುವ, ಜೀವನ ಅರ್ಥ ಮಾಡಿಕೊಳ್ಳುವ ವಿದ್ಯಾಸ್ಥಾನ. ಮಠ ಎನ್ನುವುದು ನಮ್ಮ ಜೀವನವನ್ನು ಅರ್ಥ ಮಾಡಿಕೊಳ್ಳುವ ಜಾಗ. ಜೀವನವನ್ನು ತಿಳಿಯುವುದು ಎನ್ನುವುದು ಕಾಲವನ್ನು ತಿಳಿದುಕೊಳ್ಳುವುದು. ಕಾಲ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅದನ್ನು ಹೊರತುಪಡಿಸಿ ಜೀವನವಿಲ್ಲ ಎಂದು ಬಣ್ಣಿಸಿದರು.ಖಗೋಳದಲ್ಲಿ ನಮ್ಮನ್ನು ಪ್ರತಿನಿಧಿಸುವ ಗ್ರಹ, ರಾಶಿಯನ್ನು ತಿಳಿದುಕೊಂಡರೆ ನಮ್ಮ ನಮ್ಮ ಜೀವನವನ್ನು ಅರಿತುಕೊಳ್ಳಬಹುದು. ಆಗ ನಮ್ಮ ವೈಯಕ್ತಿಕ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಗ್ರಹಮಂಡಲಗಳನ್ನು ದರ್ಪಣವಾಗಿ ಬಳಸಿಕೊಂಡರೆ ಓರೆಕೋರೆಗಳನ್ನು ತಿಳಿದುಕೊಂಡರೆ ಜೀವನ ಹಸನುಗೊಳ್ಳುತ್ತದೆ ಎಂದರು.ಕಾಲ ಜೀವನದ ಸೂಕ್ಷ್ಮವಾದ್ದನ್ನು, ಸ್ಥೂಲವಾದ್ದನ್ನು ಹೀಗೆ ಪ್ರತಿಯೊಂದನ್ನೂ ತಿಳಿಸುತ್ತದೆ. ಮಳೆ ಸುರಿಯುತ್ತದೆ, ನೀರು ಹರಿಯುತ್ತಿದೆ ಎಂದರೆ ಚಂದ್ರನ ಪ್ರಭಾವ ಇದೆ ಎಂಬ ಅರ್ಥ. ಬೆಂಕಿಗೆ ಕುಜ ಕಾರಣನಾದರೆ ಆಕಾಶಕಾರಕ ಗ್ರಹ ಗುರು. ವಾಯುಕಾರಕ ಶನಿ. ಹೀಗೆ ಪ್ರತಿಯೊಂದು ಘಟನೆಗಳಿಗೂ ಒಂದೊಂದು ಗ್ರಹಗಳು ಕಾರಣವಾಗುತ್ತವೆ ಎಂದರು.

ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸೇವಾ ಸಮಿತಿ ಕೋಶಾಧ್ಯಕ್ಷ ಸುಧಾಕರ ಬಡಗಣಿ, ಕಾರ್ಯದರ್ಶಿ ಜಿ.ಕೆ. ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಗುಂಡಿ ಮಂಜಪ್ಪ- ಗೀತಾ ಮಂಜಪ್ಪ ದಂಪತಿ ಭಿಕ್ಷಾಸೇವೆ ನೆರವೇರಿಸಿದರು. ಎಸ್.ಜಿ. ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.

Share this article