ಬಸವರಾಜ ಸರೂರ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ರಾಜ್ಯ ಸರ್ಕಾರ ಕೊನೆಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೇ ಸ್ಥಳೀಯ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ರಾಜಕೀಯ ಪ್ರಕ್ರಿಯೆಗಳಿಗೆ ಚಾಲನೆ ದೊರೆತಂತಾಗಿದೆ. ಮೀಸಲಾತಿ: ಅಧ್ಯಕ್ಷ ಸ್ಥಾನವು ಹಿಂದುಳಿದ ‘ಅ’ ವರ್ಗದ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ: ಅಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿರುವುದರಿಂದ ಬಿಜೆಪಿಯಲ್ಲಿ ಆ ಪ್ರವರ್ಗಕ್ಕೆ ಸೇರಿರುವ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ಹೊನ್ನವ್ವ ಕಾಟಿ, ತ್ರಿವೇಣಿ ಪವಾರ, ರತ್ನವ್ವ ಪೂಜಾರ ಆರ್ಹರಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಜಯಶ್ರೀ ಪೀಸೆ ಹಾಗೂ ಆರ್.ಶಂಕರ್ ಬಣದ ಜತೆ ಗುರುತಿಸಿಕೊಂಡಿರುವ ಅರೀಪಾಖಾನಂದ ಸೌದಾಗರ ಅರ್ಹರಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಈ ಬಾರಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ದೊರಕಿದ್ದು ಬಿಜೆಪಿಯಲ್ಲಿ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಬುರಡಿಕಟ್ಟಿ, ಗುರುರಾಜ ತಿಳವಳ್ಳಿ, ಅರ್ಹರಿದ್ದಾರೆ. ಇದಲ್ಲದೆ ಸಾಮಾನ್ಯ ಕ್ಷೇತ್ರ ಹೊರತುಪಡಿಸಿ ಅನ್ಯ ಕ್ಷೇತ್ರದಿಂದ ಆಯ್ಕೆಯಾದವರು ಹಾಗೂ ಇತರೇ ಪ್ರವರ್ಗದ ಸದಸ್ಯರೂ ಸ್ಪರ್ಧಿಸಬಹುದಾಗಿದೆ. ಮಲ್ಲಿಕಾರ್ಜುನ ಅಂಗಡಿ ಹೆಚ್ಚಿನ ಉತ್ಸುಕರಾಗಿದ್ದರೆ ಪ್ರಕಾಶ ಬುರಡಿಕಟ್ಟಿ ಪಕ್ಷ ತಮ್ಮ ಸೇವೆ ಗುರುತಿಸಿ ಅವಕಾಶ ನೀಡಿದರೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಶೇಖಪ್ಪ ಹೊಸಗೌಡ್ರ, ಮೆಹಬೂಬ್ ಮುಲ್ಲಾ ಅರ್ಹರಿದ್ದಾರೆ. ಇದಲ್ಲದೆ ಇತರ ಪ್ರವರ್ಗದಿಂದ ಆಯ್ಕೆಯಾಗಿರುವ ಶಶಿಧರ ಬಸೆನಾಯ್ಕರ, ಪುಟ್ಟಪ್ಪ ಮರಿಯಮ್ಮನವರ ಕೂಡ ಸ್ಪರ್ಧಿಸುವ ಸಾಧ್ಯತೆಗಳಿವೆ.ಸದಸ್ಯರ ಬಲಾಬಲ: ನಗರಸಭೆಯ ಒಟ್ಟು 35 ಸ್ಥಾನಗಳ ಪೈಕಿ ಬಿಜೆಪಿ 15, ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ (ಕೆಪಿಜೆಪಿ) 10, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 09 ಹಾಗೂ 01 ಪಕ್ಷೇತರ ಸದಸ್ಯರಿದ್ದಾರೆ. ಸದ್ಯ ಕೆಪಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದ 10 ಸದಸ್ಯರಲ್ಲಿ 5 ಸದಸ್ಯರು ಬಿಜೆಪಿ ಜತೆ ಗುರುತಿಸಿಕೊಂಡಿದ್ದು ಉಳಿದ 5 ಸದಸ್ಯರು ಇದೀಗ ಕಾಂಗ್ರೆಸ್ ಸೇರಿರುವ ಮಾಜಿ ಸಚಿವ ಆರ್.ಶಂಕರ್ ಜತೆ ಗುರುತಿಸಿಕೊಂಡಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಸಂಸದ ಮತ್ತು ಶಾಸಕರಿಗೆ ಮತದಾನದ ಹಕ್ಕು ಇರುವುದರಿಂದ ಬಿಜೆಪಿಗೆ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಪ್ರಕಾಶ ಕೋಳಿವಾಡ ಮತ ಚಲಾಯಿಸಲು ಅವಕಾಶವಿದೆ. ಇದನ್ನು ಗಮನಿಸಿದಾಗ ಮೇಲ್ನೋಟಕ್ಕೆ ಬಿಜೆಪಿಗೆ (ಒಬ್ಬ ಪಕ್ಷೇತರ ಸದಸ್ಯ ಹಾಗೂ 5 ಕೆಪಿಜೆಪಿ ಸದಸ್ಯರು ಸೇರಿದಂತೆ) ಒಟ್ಟು 22 ಸದಸ್ಯರ ಬೆಂಬಲವಿದ್ದಂತೆ ಕಾಣುತ್ತದೆ. ಅದಕ್ಕೆ ಸಂಸದರ ಮತ ಸೇರಿದರೆ 23 ಆಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ (5 ಕೆಪಿಜೆಪಿ ಸದಸ್ಯರು ಸೇರಿದಂತೆ) 14 ಸದಸ್ಯರ ಬೆಂಬಲವಿದ್ದು ಶಾಸಕರ ಮತ ಸೇರಿದರೆ 15 ಆಗುತ್ತದೆ.
ಚುನಾವಣೆ ದಿನಾಂಕ ಪ್ರಕಟವಾದ ನಂತರ ರಾಜಕೀಯ ಚಟುವಟಿಕೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ. ರೇಸಾರ್ಟ್ ರಾಜಕೀಯ ನಡೆದರೂ ಅಚ್ಚರಿ ಪಡುವಂತಿಲ್ಲ.