ಕವಿಗೆ ಬದ್ಧತೆ, ಸೂಕ್ಷ್ಮತೆ, ಸ್ಪಂದನೆ ಅಗತ್ಯ: ವಿ. ಹರಿನಾಥಬಾಬು

KannadaprabhaNewsNetwork | Published : May 16, 2025 1:47 AM
Follow Us

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಕುರಿತು ಗದಗದಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಯಿತು.

ಗದಗ: ಸಮಕಾಲೀನ ಸಂಕಟಗಳಿಗೆ ಕವಿ ದನಿಯಾಗಬೇಕು. ವಿರೋಧ ಪಕ್ಷದ ರೀತಿಯಲ್ಲಿ ಕವಿ ಕಾರ್ಯಮಾಡಬೇಕು. ಸದಾ ಸತ್ಯದ ಪರವಾಗಿದ್ದು, ಜೀವಪರ ನಿಲುವಿನ ಪ್ರತಿಪಾದಕನಾಗಿರಬೇಕು. ಸಮಾಜವನ್ನು ತಿದ್ದಿ ತೀಡಿ ಸರಿದಾರಿಗೆ ತರುವ ರೀತಿಯಲ್ಲಿ ಅಕ್ಷರಗಳನ್ನು ಪೋಣಿಸಬೇಕು. ಕವಿಗೆ ಬದ್ಧತೆ ಮತ್ತು ಸುತ್ತಲಿನ ಸಂಗತಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಭಿವ್ಯಕ್ತಿಸುವ ಒಳದನಿ ಇರಬೇಕು ಎಂದು ಕವಿ ವಿ. ಹರಿನಾಥಬಾಬು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಿ.ಸಿ. ಪಾವಟೆ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಕುರಿತು ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕ. ಅವುಗಳು ಕೇವಲ ಮಾತಿನಲ್ಲಿ ಕೊನೆಗೊಳ್ಳದೇ ಆಚರಣೆ ರೂಪದಲ್ಲಿ ಬಂದಾಗ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ. ಆ ಕೆಲಸವನ್ನು ಕವಿಗಳು, ಬರಹಗಾರರು ಮಾಡಬೇಕು ಎಂದರು.

ಸಾಹಿತಿ, ಪತ್ರಕರ್ತ ಐ.ಕೆ. ಕಮ್ಮಾರ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ ತತ್ವಗಳನ್ನು ಬುದ್ಧ, ಬಸವ, ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದಾರೆ. ಜಾತಿ, ವರ್ಗ, ವರ್ಣವನ್ನು ಮೀರಿದ ಸಮಾಜ ನಿರ್ಮಾಣಗೊಳ್ಳಬೇಕಾದರೆ ಅವರ ವಿಚಾರಗಳನ್ನು ಅರಿತು ಆಚರಿಸಬೇಕು ಎಂದರು.ಸಾಹಿತಿ ರಾಮಚಂದ್ರ ಹಂಸನೂರ ಮಾತನಾಡಿ, ಮಹಾನ್ ವ್ಯಕ್ತಿಗಳನ್ನು ಫೋಟೋಗಳಿಗಾಗಿ ಸೀಮಿತಗೊಳಿಸದೇ ಅವರ ಚಿಂತನೆಗಳ ಅಡಿ ನಮ್ಮ ಬದುಕನ್ನು ರೂಪಿಸಿಕೊಂಡಾಗ ಅವರ ಕನಸು ಈಡೇರುತ್ತದೆ. ಈ ದಿಸೆಯಲ್ಲಿ ನಮ್ಮೆಲ್ಲರ ಪ್ರಯತ್ನ ನಿರಂತರವಾಗಿರಬೇಕು ಎಂದರು.ಪ್ರಾಚಾರ್ಯ ಎಸ್.ಪಿ. ಗೌಳಿ ಮಾತನಾಡಿ, ಕವಿಯಾದವನಿಗೆ ಸಾಮಾಜಿಕ ಜವಾಬ್ದಾರಿ ಎಲ್ಲರಿಗಿಂತಲೂ ಹೆಚ್ಚಿರುತ್ತದೆ. ಅಧ್ಯಯನದ ಮೂಲಕ ನಮ್ಮ ಅನುಭವಗಳನ್ನು ವಿಸ್ತರಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರ ಓದು ಮತ್ತು ಚರ್ಚೆಯ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿದರು. ಶಿಲ್ಪಾ ಮ್ಯಾಗೇರಿ, ಮಂಜುಳಾ ವೆಂಕಟೇಶಯ್ಯ, ಹೇಮಾ ಮೊರಬ, ಭುವನೇಶ್ವರಿ ಅಂಗಡಿ, ವಿನಾಯಕ ಕಮತದ, ಭಾಗ್ಯಶ್ರೀ ಹುರಕಡ್ಲಿ, ಟಿ.ಬಿ. ಕರದಾನಿ, ಹುಚ್ಚೀರಪ್ಪ ಈಟಿ, ವಿಶ್ವನಾಥ ಆದಿ, ಮಂಜುನಾಥ ವಟ್ಟಿ, ಡಾ. ಗಿರಿಜಾ ಹಸಬಿ, ಶಿವರಾಜ, ಪ್ರೇರಣಾ ಅಂಗಡಿ ಮೊದಲಾದವರು ಕವನ ವಾಚಿಸಿದರುಯಲ್ಲಪ್ಪ ಹಂದ್ರಾಳ, ಗೋಪಾಲ ದಾಸರ, ಡಿ.ಎಸ್. ಬಾಪುರಿ, ಡಾ. ಜಿ.ಬಿ. ಪಾಟೀಲ, ಕೆ.ಎಚ್. ಬೇಲೂರ, ಸಂಜೀವಸ್ವಾಮಿ, ಬಸವರಾಜ ತೋಟಗೇರ, ಎ.ಎಸ್. ಮಕಾನದಾರ, ಶರೀಫ ಬಿಳೇಯಲಿ, ರತ್ನಾ ಪುರಂತರ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಇದ್ದರು. ಪ್ರಮೋದ ಕಪ್ಪಲಿ, ಅಂಜಲಿ ಬೇಲೆರಿ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ಗಡ್ಡಿ ಸ್ವಾಗತಿಸಿದರು. ಕಾವೇರಿ ಹೊಂಬಳ ವಂದಿಸಿದರು.