ಹಾವೇರಿ: ಕವಿ ತನ್ನ ಪಾಡಿಗೆ ತಾನು ಮಾತನಾಡಿಕೊಳ್ಳುವಂತೆ ಮಾಡುವುದೇ ಕವಿತೆ. ಕಡಿಮೆ ಪದಗಳಲ್ಲಿ ಹೆಚ್ಚು ಹೇಳುವ ತೀವ್ರತೆ ಇರಬೇಕು. ಪದಗಳ ಬಳಕೆಯಲ್ಲಿ ಕಾದಂಬರಿಕಾರ ಉದಾರಿ ಆಗಿದ್ದರೂ ಕವಿ ಮಾತ್ರ ಜಿಪುಣನಾಗಿರಬೇಕು. ಜತೆಗೆ ಕವಿತೆ ಸಹಜವಾಗಿರಬೇಕು ಎಂದು ಚಲನಚಿತ್ರ ನಿರ್ದೇಶಕ, ಗೀತ ರಚನೆಕಾರ ಹೃದಯ ಶಿವ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಮಹಿಳೆ ಕಾವ್ಯ ಬರೆದಾಗ ಗಂಡಸರು ಸಂಶಯ ಪಡುವ ರೀತಿಯಲ್ಲಿ ನೋಡುವರು. ಅಶ್ಲೀಲತೆ ಮೀರಿ ನಿಲ್ಲುವುದೇ ಕಾವ್ಯದ ಶಕ್ತಿ. ಸಾಂಸ್ಥಿಕ ವ್ಯವಸ್ಥೆಯಲ್ಲಿ ನಿರ್ಮಲವಾಗಿ ಹಾಗೂ ಕೆಟ್ಟ ಭಾವನೆಗಳು ಬಾರದ ರೀತಿಯಲ್ಲಿ ದೀಪಾ ಗೋನಾಳ ಕವಿತೆ ಬರೆದಿರುವರು. ತಮ್ಮ ಎಲ್ಲ ಕಾವ್ಯಗಳಲ್ಲೂ ಪ್ರೇಮವನ್ನು ಕಟ್ಟಿಕೊಟ್ಟು ಗಂಡು ಹೆಣ್ಣಿನ ಘನತೆ ಹೆಚ್ಚಿಸಿರುವರು ಎಂದರು.
ಕೃತಿ ಪರಿಚಯಿಸಿದ ಸಾಹಿತಿ ಡಾ. ಪದ್ಮ ಚಿನ್ಮಯಿ, ಕಾವ್ಯಗಳಲ್ಲಿ ರೂಪಕ ಹಾಗೂ ಉಪಮೆಗಳಿರಬೇಕು. ಜ್ಞಾನ ಮತ್ತು ಭಾವಗಳ ಸೂಕ್ಷ್ಮತೆಯೇ ಕಾವ್ಯ ಎಂದರು.ಹಾವೇರಿ ಅಂಚೆ ವಿಭಾಗದ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ ಮಾತನಾಡಿ, ಅಂಚೆ ಇಲಾಖೆ ಕಚೇರಿಯ ಒತ್ತಡದಲ್ಲೂ ಸಾಹಿತ್ಯಿಕ ಕೃತಿ ಪ್ರಕಟಿಸುತ್ತಿರುವ ದೀಪಾ ಗೋನಾಳ ಅಭಿನಂದನಾರ್ಹರು ಎಂದರು.
ಕವಿಯತ್ರಿ ದೀಪಾ ಗೋನಾಳ ಮಾತನಾಡಿ, ಕವಿತೆಗಳೇ ನನ್ನ ಬದುಕಿನ ಮೊದಲ ಆಯ್ಕೆ. ನನ್ನ ಬದುಕಿನ ಪ್ರತಿಕ್ಷಣವೂ ಕಾವ್ಯವನ್ನು ಆರಾಧಿಸುವೆ ಮತ್ತು ಆಸ್ವಾದಿಸುವೆ. ಕಾವ್ಯದ ಬೆಸುಗೆ ನನ್ನನ್ನು ಸೆಳೆದಿದೆ ಎಂದರು.ಕವಿಗೋಷ್ಠಿಯಲ್ಲಿ ಹಲವರು ಸ್ವರಚಿತ ಕವನ ವಾಚಿಸಿದರು. ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ, ಹಿರಿಯ ಸಾಹಿತಿ ಪ್ರೊ. ವಿರೂಪಾಕ್ಷಪ್ಪ ಕೋರಗಲ್ಲ, ಕಸಾಪ ತಾಲೂಕಾಧ್ಯಕ್ಷ ವೈ.ಬಿ. ಆಲದಕಟ್ಟಿ ಸಾಹಿತಿ ಕಲಾವಿದರ ಬಳಗದ ಡಾ. ವಿ.ಪಿ. ದ್ಯಾಮಣ್ಣವರ, ಚಂದ್ರಶೇಖರ ಮಾಳಗಿ, ಪ್ರಭು ಗುರಪ್ಪನವರ, ಎಸ್.ಆರ್. ಹಿರೇಮಠ, ರೇಣುಕಾ ಗುಡಿಮನಿ, ಶಶಿಕಲಾ ಅಕ್ಕಿ ಇದ್ದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು. ಕರ್ಣ ಸ್ವಾಗತಿಸಿದರು. ವಾಗೀಶ ಹೂಗಾರ ವಂದಿಸಿದರು.
ಕಾವ್ಯಕ್ಕೆ ಅದ್ಭುತ ಕೊಡುಗೆ: ಪ್ರಸ್ತುತ ದುರ್ಬರ ಕಾಲಘಟ್ಟದಲ್ಲಿ ನಾವಿದ್ದೇವೆ. ಕವಿಯಾದವನು ಕಾಲಧರ್ಮವನ್ನು ಮೀರಿ ವಿಚಾರ ಮಾಡಿದಾಗ ದೇಶಕ್ಕೆ ಹಾಗೂ ಕಾವ್ಯಲೋಕ್ಕೆ ಅನ್ಯಾಯ ಮಾಡಿದಂತೆ. ಕವಿ ಕಾಲಧರ್ಮವನ್ನು ಅನುಭವಿಸಬೇಕು. ಸಮಕಾಲೀನ ಕವಿಗಳು ಕಾವ್ಯಕ್ಕೆ ಅದ್ಭುತ ಕೊಡುಗೆ ಕೊಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿರುವುದು ನನ್ನ ಪುಣ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.