ಕವಿ ಆತ್ಮ ವಿಮರ್ಶೆ ಮಾಡಿಕೊಳ್ಳುವತ್ತ ಮುಂದಾಗಬೇಕು: ಅಲ್ಲಾ ಗಿರಿರಾಜ್

KannadaprabhaNewsNetwork |  
Published : Oct 12, 2026, 02:30 AM IST
ಕೊಟ್ಟೂರಿನಲ್ಲಿ ಕವಿ ಕರಿಬಸವರಾಜ್ ಬರೆದ 2ನೇ ಕೃತಿ ಅವ್ವನ ರೊಟ್ಟಿ ಕವನ ಸಂಕಲನವನ್ನು ಮಂಜಮ್ಮ ಜ್ಯೋಗತಿ ಮತ್ತಿತರ ಅತಿಥಿಗಳು ಬಿಡುಗಡೆಗೊಳಿಸಿದರು. | Kannada Prabha

ಸಾರಾಂಶ

ಕವಿ, ಕವನ ಕಥೆಗಳು ಜನೋಪಯೋಗಿ ಮತ್ತು ಸಮಾಜಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸ ಮಾಡಬೇಕು.

ಅವ್ವನ ರೊಟ್ಟಿ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕವಿ, ಕವನ ಕಥೆಗಳು ಜನೋಪಯೋಗಿ ಮತ್ತು ಸಮಾಜಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸ ಮಾಡಬೇಕು. ಸದ್ಯದ ಸ್ಥಿತಿಯಲ್ಲಿ ಈ ಮೂರುಗಳು ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಕೇವಲ ಅರಸೊತ್ತಿಗೆ ಇಲ್ಲವೇ ಬಲಾಢ್ಯರ ಹೊಗಳಿಕೆಯ ಶಬ್ದಗಳಿಗೆ ಸೀಮಿತವಾಗಿರುವುದರಿಂದ ಜನತೆ ಇವುಗಳಿಂದ ವಿಮುಖರಾಗುತ್ತಿದ್ದಾರೆ. ಈ ಬಗ್ಗೆ ಪ್ರತಿ ಕವಿ ಆತ್ಮ ವಿಮರ್ಶೆ ಮಾಡಿಕೊಳ್ಳುವತ್ತ ಮುಂದಾಗಬೇಕು ಎಂದು ಖ್ಯಾತ ಗಜಲ್ ಕವಿ ಅಲ್ಲಾ ಗಿರಿರಾಜ್ ಕರೆ ನೀಡಿದರು.

ಭಾನುವಾರ ಪಟ್ಟಣದ ಗಚ್ಚಿನಮಠ ಆವರಣದಲ್ಲಿ ಕೆ.ಕೆ. ಪ್ರಕಾಶನ ಮತ್ತು ಕೊಟ್ಟೂರಿನ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತವಾಗಿ ಆಯೋಜಿಸಿದ್ದ ಕರಿಬಸವರಾಜ್ ಕೆ ಇವರ 2ನೇ ಕೃತಿ ಅವ್ವನ ರೊಟ್ಟಿ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಥೆ, ಕವಿತೆಗಳು ಕೇವಲ ಮಂದಿರ, ಮಸೀದಿಗಳ ವಿಷಯಗಳಿಗೆ ಒತ್ತು ನೀಡಿ ಚರ್ಚೆಗೆ ಒಳಪಡುತ್ತಿರುವ ಬದಲು ಜನತೆಗೆ ಬೇಕಾಗುವ ವಿಷಯಗಳು ಕುರಿತು ಚರ್ಚೆ ಆಗುವತ್ತ ಗಮನ ಸೆಳೆಯುವಂತಿರಬೇಕು, ಕವಿ ಹಾಡುವ, ಕಾಡುವ ಕೆಲಸ ಮಾಡಬೇಕು ಎಂದರು.

ಕವಿ ಸದಾ ವಿರೋಧ ಪಕ್ಷದ ನಾಯಕನ ಕೆಲಸ ಮಾಡುವಂತಿರಬೇಕು, ಇತ್ತೀಚಿನ ದಿನಗಳಲ್ಲಿ ಈ ಕೆಲಸದ ಹೊರತಾಗಿ ಕೇವಲ ಅಧಿಕಾರ ಇದ್ದವರ ಮತ್ತು ಬಲಾಢ್ಯರ ಪರವಾಗಿ ತಮ್ಮ ಶಬ್ದಗಳ ಮೂಲಕ ಕವಿತೆಯನ್ನಾಗಿಸಿ ಹೊರ ತರುತ್ತಿರುವುದು ನಿಜಕ್ಕೂ ನಾಚಿಕೆ ಗೇಡಿನ ವಿಷಯ ಎಂದು ಖೇದ ವ್ಯಕ್ತಪಡಿಸಿದರು. ಕನ್ನಡ ಸಾಹಿತ್ಯದಲ್ಲಿ ವಿಮರ್ಶಾಲೋಕ ಸತ್ತುಹೋಗಿದೆ. ಈ ಪರಿಯ ಪರಿಸ್ಥಿತಿ ನಿರ್ಮಾಣವಾಗಿರುವುದು ಪ್ರತಿಯೊಬ್ಬರಿಗೂ ಅವನತಿಯ ಹಾದಿಯತ್ತ ಸಾಗುತ್ತಿದ್ದೇವೆ ಎಂಬ ಅನಿಸಿಕೆಯಾಗುತ್ತಿದೆ. ಪ್ರಶಸ್ತಿಗಳು ತಮ್ಮ ಸೃಜನ ಶೀಲತೆಗೆ ಬರಬೇಕೆ ಹೊರತು ಬಕೀಟ್ ಹಿಡಿಯುವ, ದಾರಿ ಹಿಡಿದುಕೊಳ್ಳುವ ಕಾರ್ಯಕ್ಕೆ ಕವಿ ಮುಂದಾಗಬಾರದು ಎಂದರು.

ಕವನ ಸಂಕಲನವನ್ನು ಬಿಡುಗಡೆಗೊಳಿಸಿದ ಪದ್ಮಶ್ರೀ ಪುರಸ್ಕೃತೆ ಮಾತಾ ಬಿ. ಮಂಜಮ್ಮ ಜ್ಯೋಗತಿ ಮಾತನಾಡಿ, ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿರುವ ಮೊಬೈಲ್ ಸಂಸ್ಕೃತಿಯಿಂದ ಪೋಷಕರು ಹೊರತರದಿದ್ದರೇ ಸಮಾಜಕ್ಕೆ ದೊಡ್ಡ ಬಗೆಯ ಹೊಡೆತವನ್ನು ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಓದುವ ಹವ್ಯಾಸವನ್ನು ರೂಢಿಕೊಂಡಷ್ಟು ಪ್ರತಿಯೊಬ್ಬರ ಬದುಕು ಸಾಹಿತ್ಯ, ಸಂಸ್ಕೃತಿ, ಕಲೆಗಳಿಂದ ಸದಾ ಚೇತನವಾಗಿರುತ್ತದೆ ಎಂದು ಅವರು ಹೇಳಿದರು. ಅವ್ವನ ರೊಟ್ಟಿ ಕವನ ಸಂಕಲನ ಕುರಿತು ಮಾತನಾಡಿದ ಡಾ. ಸತೀಶ ಪಾಟೀಲ್ ಸಮಾಜದಲ್ಲಿ ಅತ್ಯುತ್ತಮ ಮನಸ್ಥಿತಿ ನಿರ್ಮಾಣ ಮಾಡಬೇಕಾದ ಅಗತ್ಯವಿದ್ದು, ಯಾವುದೇ ಕಾರಣಕ್ಕೂ ಕಾವ್ಯ ಮಿಸ್ಲೀಡಿಂಗ್ ಆಗದಂತೆ ಗಮನಿಸಬೇಕು. ಈ ನಿಟ್ಟಿನಲ್ಲಿ ಕರಿಬಸವರಾಜ ಕೆ. ಉತ್ತಮ ಕವನ ಸಂಕಲನವನ್ನು ರಚಿಸಿರುವುದು ಸಾಹಿತ್ಯಕ್ಕೆ ಶೋಭೆ ತಂದಿದೆ ಎಂದರು.

ಗುರುಮಿಠಕಲ್ ಖಾ.ಸ. ಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ತಾಲೂಕು ಕ.ಸಾ.ಪ. ಅಧ್ಯಕ್ಷ ದೇವರಮನಿ ಕೊಟ್ರೇಶ, ನಿವೃತ್ತ ಶಿಕ್ಷಕ ಎ.ಎಚ್.ಎಂ. ಕೊಟ್ರಯ್ಯ, ಜಿ.ಎಂ. ದೇವರಾಜ, ಸಾಹಿತಿ ಕರಿಬಸವರಾಜ ಕೆ., ಮಹಾಂತೇಶ ಜಿ. ವೇದಿಕೆಯಲ್ಲಿದ್ದರು.

ಉಪನ್ಯಾಸಕ ಡಾ. ಇಮಾಮ್ ಹಡಗಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕ ಮಧು ಜೆ., ಆನಂದ ಹಳ್ಳಿ ನಿರೂಪಿಸಿದರು. ನಂತರ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಕಾರ್ಯಕ್ರಮ ಲೇಖಕ, ಸಿದ್ದು ದೇವರಮನಿ ಅಧ್ಯಕ್ಷತೆಯಲ್ಲಿ ನಡೆಯಿತು. ಕವಯತ್ರಿ ಮಮತಾಜ್ ಬೇಗಂ ಆಶಯ ನುಡಿ ಸಲ್ಲಿಸಿದರು. ಹೊಸಪೇಟೆ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಮತ್ತು ಹರಪನಹಳ್ಳಿಯ 20ಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆ