ಕುಷ್ಟಗಿ: ತಾಲೂಕಿನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಬಯೋಮೆಟ್ರಿಕ್ ನವೀಕರಣಕ್ಕೆ ಸಾರ್ವಜನಿಕರು ಪರದಾಡುತ್ತಿದ್ದು, ಗ್ರಾಮಮಟ್ಟದಲ್ಲೇ ಸುಲಭವಾಗಿ ಸೇವೆ ಒದಗಿಸುವಂತೆ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘದವರು ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಆಧಾರ್ ತಿದ್ದುಪಡಿ ಕೆಲಸಕ್ಕಾಗಿ ಗ್ರಾಮೀಣ ಭಾಗದ ರೈತರು, ಕೂಲಿ ಕಾರ್ಮಿಕರು ಹಾಗೂ ಸಾರ್ವಜನಿಕರು ಎರಡು-ಮೂರು ದಿನಗಳ ಕಾಲ ತಾಲೂಕು ಕೇಂದ್ರಕ್ಕೆ ಅಲೆಯಬೇಕಾಗಿದೆ. ಇದರಿಂದ ದಿನಗೂಲಿ ನಷ್ಟವಾಗುವ ಜತೆಗೆ ಬಸ್ ಪ್ರಯಾಣ, ಊಟ ಸೇರಿದಂತೆ ಹೆಚ್ಚುವರಿ ಖರ್ಚು ಭರಿಸಬೇಕಾಗಿದೆ. ವೃದ್ಧರು, ವಿದ್ಯಾರ್ಥಿಗಳು ಹಾಗೂ ಅಂಗವಿಕಲರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಸೇವೆಗಳನ್ನು ಜನರಿಗೆ ತಲುಪಿಸಲು ಕೈಗೊಳ್ಳುವ ಕ್ರಮಗಳ ಮಾದರಿಯಲ್ಲಿ, ಆಧಾರ್ ತಿದ್ದುಪಡಿ, ಬಯೋಮೆಟ್ರಿಕ್ ನವೀಕರಣ ಹಾಗೂ ವಿಳಾಸ ಬದಲಾವಣೆಯ ಸೇವೆಗಳನ್ನೂ ಗ್ರಾಪಂ ಅಥವಾ ಗ್ರಾಮ ಒನ್ ಕೇಂದ್ರಗಳ ಮೂಲಕ ಒದಗಿಸಬೇಕು. ಅಗತ್ಯವಿರುವವರಿಗೆ ಮನೆಬಾಗಿಲಲ್ಲೇ ಸೇವೆ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಗ್ರೇಡ್-2 ತಹಸೀಲ್ದಾರ್ ರಜನಿಕಾಂತ ಮಾತನಾಡಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಪ್ರಮುಖರು ಇದ್ದರು.