ಅಮರೇಶ್ವರಸ್ವಾಮಿ ಕಂದಗಲ್ಲಮಠ
ಯಲಬುರ್ಗಾ ಕ್ಷೇತ್ರದ ಕುಕನೂರು ಹಾಗೂ ಯಲಬುರ್ಗಾ ತಾಲೂಕಿನಲ್ಲಿ 7 ಜಿಪಂ ಕ್ಷೇತ್ರ, 24 ತಾಪಂ ಕ್ಷೇತ್ರಗಳಿದ್ದು, ಆಕಾಂಕ್ಷಿಗಳು ತೆರೆಮರೆಯಲ್ಲಿ ಪೈಪೋಟಿ ನಡೆಸಿದ್ದಾರೆ. ಇತ್ತ ಜಿಪಂ ಆಕಾಂಕ್ಷಿಗಳು ಮತ ಸೆಳೆಯುವ ತಾಪಂ ಆಕಾಂಕ್ಷಿಗಳ ಬೆನ್ನು ಸಹ ಬಿದ್ದಿದ್ದಾರೆ. ತೆರೆಮರೆಯಲ್ಲಿ ತಂಡ ಮಾಡಿಕೊಂಡು ಹಿರಿಯರ ಮೂಲಕ ತಮ್ಮ ಇಂಗಿತ ವ್ಯಕ್ತಪಡಿಸುವ ಪ್ರಕ್ರಿಯೆ ಜೋರಾಗಿದೆ.
ಯಲಬುರ್ಗಾ ಕ್ಷೇತ್ರದಲ್ಲಿ ತಾಪಂ, ಜಿಪಂ ಚುನಾವಣೆ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಎಲ್ಲಿ ಯಾರು ಅಭ್ಯರ್ಥಿ ಆಗುತ್ತಾರೆ, ಯಾರಿಗೆ ಆಯಾ ಪಕ್ಷದವರು ಅಸ್ತು ಅನ್ನುತ್ತಾರೆ ಎಂದು ಜನರು ಮಾತನಾಡುತ್ತಿದ್ದಾರೆ. ಈಗಾಗಲೇ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ತಮ್ಮ ಹಿರಿಯರ ಮೂಲಕ ಸ್ಥಳೀಯ ಹೈಕಮಾಂಡ್ ನಾಯಕರ ದುಂಬಾಲು ಸಹ ಬಿದ್ದಿದ್ದಾರೆ.ತಮ್ಮ ತಮ್ಮ ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಖಂಡರು ಸಹ ಲೆಕ್ಕಾಚಾರ ಹಾಕುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಪಕ್ಷದ ಪಾಳಯದಲ್ಲಿ ಅಭ್ಯರ್ಥಿಗಳು ಸ್ಥಾನಕ್ಕಾಗಿ ಹಾತೊರೆಯುತ್ತಿದ್ದಾರೆ. ಮೀಸಲಾತಿಯ ಆಕ್ಷೇಪಣೆ ಕಾಲವಕಾಶ ಮುಗಿಯುವ ವರೆಗೂ ಕೊಂಚ ಸಮಾಧಾನದ ಹೆಜ್ಜೆಗಳು ರಾಜಕೀಯ ಪಾಳಯದಲ್ಲಿ ಕಾಣುತ್ತಿವೆ.
ಕುಕನೂರು ತಾಪಂ: ಕುದರಿಮೋತಿ-ಹಿಂದುಳಿದ ವರ್ಗ ಅ ಮಹಿಳೆ, ಮಂಗಳೂರು-ಸಾಮಾನ್ಯ, ಹಿರೇ ಬೀಡನಾಳ-ಎಸ್‌ಟಿ ಮಹಿಳೆ, ರಾಜೂರು-ಸಾಮಾನ್ಯ ಮಹಿಳೆ, ಇಟಗಿ-ಎಸ್‌ಸಿ ಮಹಿಳೆ, ಬೆಣಕಲ್-ಎಸ್‌ಸಿ, ತಳಕಲ್-ಸಾಮಾನ್ಯ, ಬನ್ನಿಕೊಪ್ಪ-ಸಾಮಾನ್ಯ, ಯರೆ ಹಂಚಿನಾಳ-ಸಾಮಾನ್ಯ ಮಹಿಳೆ.