ದುದ್ದ ಬಳಿ ಘಟನೆ । ಬೆಂಗಳೂರಿನಲ್ಲಿ ಸೇವೆಯಲ್ಲಿದ್ದ ಮೃತ ಹರೀಶ್
ಕನ್ನಡಪ್ರಭ ವಾರ್ತೆ ಹಾಸನಹಸೆಮಣೆ ಏರಬೇಕಾಗಿದ್ದ ಪೊಲೀಸ್ ಪೇದೆ ತನ್ನ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಹಂಚಿ ವಾಪಸ್ ಹಿಂದಿರುಗುವ ವೇಳೆ ದಾರಿ ಮಧ್ಯೆ ಮಾರಾಕಸ್ತ್ರಗಳಿಂದ ಭೀಕರವಾಗಿ ಹತ್ಯೆಯಾಗಿರುವ ಘಟನೆ ತಾಲೂಕಿನ ದುದ್ದ ಬಳಿ ನಡೆದಿದೆ.
ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಹರೀಶ್ (೩೨) ಕೊಲೆಯಾದವರು. ಬೆಂಗಳೂರಿನಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ (ಕೆಐಎಸ್‌ಎಫ್) ಕಾನ್ಸ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಹರೀಶ್‌ಗೆ ನ.೧೧ ರಂದು ಮದುವೆ ನಿಶ್ಚಯವಾಗಿತ್ತು. ಅಂದು ಹರೀಶ್ ಹುಡುಗಿಯ ಜೊತೆ ಸಪ್ತಪದಿ ತುಳಿಯಬೇಕಿತ್ತು.ತನ್ನ ಸ್ನೇಹಿತರಿಗೆ, ಸಂಬಂಧಿಕರಿಗೆ ಲಗ್ನಪತ್ರಿಕೆಯನ್ನು ಕೊಟ್ಟು ಸೋಮವಾರ ರಾತ್ರಿ ಸುಮಾರು ೯.೪೫ರ ವೇಳೆ ವಾಪಸ್ ಮನೆಗೆ ತೆರಳುವ ಸಮಯದಲ್ಲಿ ದುದ್ದ ಹೊರವಲಯದ ಸ್ಕೈ ಲ್ಯಾಂಡ್ ಹೊಟೇಲ್ ಸಮೀಪ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ ಕೆಲ ದುಷ್ಕರ್ಮಿಗಳು ಮೊದಲು ಮುಖಕ್ಕೆ ಖಾರದ ಪುಡಿ ಎರಚಿ ಆತನ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಕೊಲೆಗೆ ಮೂರ್ನಾಲ್ಕು ಕಾರಣಗಳಿದ್ದರೂ, ಹಳೆಯ ದ್ವೇಷ ಮತ್ತು ಅಕ್ರಮ ಸಂಬಂಧವೇ ಮೇಲ್ನೋಟಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈಗಾಗಲೇ ಮೂರು ಮಂದಿ ಆರೋಪಿಗಳ ಗುರುತಿಸಿರುವ ಪೊಲೀಸರು, ಪ್ರಮುಖ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಮಹಮದ್ ಸುಜಿತಾ ಹಾಗೂ ದುದ್ದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.ಗ್ರಾಮದ ಕೃಷ್ಣೇಗೌಡ, ರಘು, ಮಾತನಾಡಿ, ಹರೀಶ್ ತುಂಬ ಒಳ್ಳೆಯ ಮನುಷ್ಯ. ಊರಿಗೆ ತಿಂಗಳಿಗೆ ಒಂದು ಬಾರಿ ಬರುತ್ತಿದ್ದರು. ನೆನ್ನೆ ನಡೆದ ಘಟನೆ ನೋಡಿದರೆ ಭಾರಿ ದುಖಃವಾಗುತ್ತದೆ. ಈ ಘಟನೆಯಲ್ಲಿ ನ್ಯಾಯಕೊಡಿಸಿ. ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿದ್ದು, ಈ ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.ಫೋಟೋ: ಮೃತ ಹರೀಶ್ ಶವದ ಮುಂದೆ ರೋಧಿಸುತ್ತಿರುವ ಸಂಬಂಧಿಗಳು.