ಕನ್ನಡಪ್ರಭ ವಾರ್ತೆ ವಿಜಯಪುರ
ಬೆಳಗಾವಿಯ ತಹಸೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿರುವ ಡೆತ್‌ನೋಟ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಅವರ ಪಿಎ ಸೋಮು ಹೆಸರು ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ತಕ್ಷಣವೇ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಡೆಯಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.ವಕ್ಫ್ ಕಾಯ್ದೆ ವಿರುದ್ಧ ನಗರದ ಡಿಸಿ ಕಚೇರಿ ಬಳಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ ಕೇಂದ್ರ ಸಚಿವೆ ಮಂಗಳವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸರ್ಕಾರದಲ್ಲಿ ಇದು ಹೊಸದಲ್ಲ. ಚಂದ್ರಶೇಖರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮುಡಾ ಪ್ರಕರಣ ಹೊರಗೆ ಬಂತು. ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ, ಬೆಂಗಳೂರು, ಉಡುಪಿಯಲ್ಲೂ ಕಮೀಷನ್ ಅಂಗಡಿ ತೆರೆದಿದ್ದಾರೆ. ತಹಸೀಲ್ದಾರ್ ಕಚೇರಿಯಲ್ಲಿ ಎಫ್‌ಡಿಎ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ ಪಿಎ ಹೆಸರು ನಮೂದಿಸಲಾಗಿದೆ. ಅವರ ಪಿಎ ಹೆಸರು ಬಂದಿದೆ ಎಂದರೇ ಆತ್ಮಹತ್ಯೆ ಮಾಡಿಕೊಳ್ಳಲು ಸಚಿವರ ಒತ್ತಡ ಇರುತ್ತೆ. ತಕ್ಷಣವೇ ಪಿಎ ಸೋಮು ಬಂಧನ ಮಾಡಬೇಕು. ಮಂಪರು ಪರೀಕ್ಷೆ ಮೂಲಕ ವಿಚಾರಣೆ ಮಾಡಬೇಕು. ಆಗ ಲಕ್ಷ್ಮೀ ಹೆಬ್ಬಾಳಕರ ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಸತ್ಯ ಹೊರಗೆ ಬರುತ್ತೆ ಎಂದರು.ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ:
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ಜಾರಿ ವಿಚಾರ ನೋಡಿದರೆ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಭಾಮೈದ, ಸಿಎಂ ಪತ್ನಿ, ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಇವರೆಲ್ಲರೂ ಅಪರಾಧಿಗಳೆ. ಅದಕ್ಕಾಗಿ ಇವರೆಲ್ಲರಿಗೂ ಶಿಕ್ಷೆ ಆಗಬೇಕು. ತಮ್ಮ ಮೇಲಿನ ಕೇಸ್ ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ 2013ರಲ್ಲಿ ಲೋಕಾಯಕ್ತ ಮುಚ್ಚಿ ಹಾಕಿದರು. ಮುಡಾ ಕೇಸ್ ಮುಚ್ಚಿ ಹಾಕುತ್ತಿದ್ದಾರೆ. ಭೈರತಿ ಸುರೇಶ ಫೈಲ್ ತಂದು ಸುಟ್ಟು ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ, ಮುಡಾ ಕೇಸ್ ಎದುರಿಸಬೇಕು. ಇಡಿ ತನಿಖೆಯಲ್ಲಿ ಹಲವಾರು ವಿಚಾರಗಳು ಸಿಕ್ಕಿವೆ. ಅದಕ್ಕಾಗಿ ಮುಡಾ ಕೇಸ್ ಸಿಬಿಐಗೇ ನೀಡಬೇಕು ಎಂದು ಒತ್ತಾಯಿಸಿದರು.ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ನೀಡಲಿ:ನಮ್ಮ ಸರ್ಕಾರದಲ್ಲಾಗಲಿ, ಕಾಂಗ್ರೆಸ್ ಸರ್ಕಾರದಲ್ಲಾಗಲಿ ಯಾರು ವಕ್ಫ್ ನೋಟಿಸ್ ನೀಡಿದ್ದಾರೆಯೋ ಅವರಿಗೆ ಶಿಕ್ಷೆ ಆಗಲಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ಅದಾಲತ್ ಮಾಡಿದ್ದಾರೆ. ಇದು ಕಾನೂನು ಬಾಹಿರ. ವಕ್ಫ್ ಅದಾಲತ್ ಮಾಡಲು ಅಧಿಕಾರ ಇಲ್ಲ. ವಕ್ಫ್ ಅದಾಲತ್ ಮಾಡಿದ್ದು, ಸಾವಿರಾರು ಎಕರೆಗೆ ವಕ್ಫ್ ನೋಟಿಸ್ ನೀಡಿದ್ದಾರೆ. ಮತಾಂಧ ಸಚಿವ ಜಮೀರ್ ಅಹ್ಮದ್ ಖಾನ್ ತಕ್ಷಣವೇ ರಾಜೀನಾಮೆ ನೀಡಬೇಕು ಆಗ್ರಹಿಸಿದರು.ವಕ್ಫ್ ಆಸ್ತಿ ಸಂರಕ್ಷಣೆ ಬಗ್ಗೆ ಲೋಕಸಭೆಯಲ್ಲಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದ ದಾಖಲೆಗಳನ್ನು ಕಾಂಗ್ರೆಸ್ಸಿಗರು ಬಿಡುಗಡೆ ಮಾಡಿದ ವಿಚಾರದ ಕುರಿತು ಪ್ರತಿಕ್ರಿಯಿಸಿ, ತುಂಬಾ ಸಂತೋಷ, ಸತ್ಯವಿದೆ. ಅದನ್ನು ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ದಾಖಲೆಯನ್ನು ಸ್ವಾಗತಿಸುವೆ. ಅನ್ವರ್ ಮಾನಪ್ಪಾಡಿ ವರದಿ ಬಂತು. ಅವತ್ತಿನಿಂದ ನಾನು ಹೇಳುತ್ತಿದ್ದೇನೆ, ನಮ್ಮ ಪಕ್ಷ ಹೇಳುತ್ತಿದೆ. ಅನ್ವರ್ ಮಾನಿಪ್ಪಾಡಿ ಸಮಿತಿ ವರದಿಯನ್ನು ಸಿಬಿಐಗೆ ವಹಿಸಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಮುಖಂಡರು ವಕ್ಫ್‌ನ 29 ಸಾವಿರ ಎಕರೆ ಜಮೀನು ನುಂಗಿ ನೀರು ಕುಡಿದಿದ್ದಾರೆ. ಭ್ರಷ್ಟಾಚಾರ ಮಾಡಿದ್ದಾರೆ. ಅಲ್ಲಾಹನ ಆಸ್ತಿಗೆ ದೋಖಾ ಮಾಡಿದ್ದಾರೆ ಎಂದು ಹೇಳುತ್ತಲೇ ಬಂದಿದ್ದೀವಿ. ಈ ಕಾರಣಕ್ಕೆ ನಾನು ಪ್ರಶ್ನೆ ಮಾಡಿದ್ದೆ. ಈ ಅಲ್ಲಾಹನ ಆಸ್ತಿ ರಕ್ಷಣೆ ಮಾಡುವವರು ಯಾರು, ಯಾರಿಗೆ ಇರಬೇಕು ರಕ್ಷಣೆ ಎಂದು ಪ್ರಶ್ನಿಸಿದರು.ಜೆಪಿಸಿ ರಚನೆ ಆಗಿದೆ. ಪಾರ್ಲಿಮೆಂಟ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ತರಲು ಹೊರಟಿದ್ದೇವೆ. ಈ ರೀತಿಯ ವಕ್ಫ್ ಆಸ್ತಿಯನ್ನು ರಕ್ಷಣೆ ಮಾಡಬೇಕು. ಅಲ್ಲಾಹನಿಗೆ ಮೋಸ ಮಾಡುವ ಜನ ಅದೇ ಜಾತಿಯಲ್ಲಿದ್ದಾರೆ. ಖಮರುಲ್ ಇಸ್ಲಾಂ ಯಾರು, ರೋಶನ್ ಬೇಗ್ ಯಾರು, ಹ್ಯಾರಿಸ್ ಯಾರು? ಅದೇ ಜಾತಿಯಲ್ಲಿ ಹುಟ್ಟಿ ಅಲ್ಲಾಹನಿಗೆ ದೋಖಾ ಮಾಡಿದವರು. ಇದರ ಸಲುವಾಗಿ ನಾನು ಪ್ರಶ್ನೆ ಮಾಡಿದ್ದೆ, ರಕ್ಷಣೆ ಮಾಡುವವರು ಯಾರು ಎಂದು ಹೇಳಿದರು.ಕಾಂಗ್ರೆಸ್‌ನವರು ನಾನು ಲೋಕಸಭೆಯಲ್ಲಿ ಮಾತನಾಡಿದ್ದು ಬಿಡುಗಡೆ ಮಾಡಿದ್ದಾರೆ. ಅದನ್ನು ನಾನು ಸ್ವಾಗತಿಸುವೆ. ಈಗಲೂ ನನಗೆ ವಕ್ಫ್ ಆಸ್ತಿ ಸಂರಕ್ಷಣೆ ಬಗ್ಗೆ ಒಲವು ಇದೆ. ನಾವು ಅದನ್ನೇ ಒರಿಜಿನಲ್ ವಕ್ಫ್ ಆಸ್ತಿ ಎಷ್ಟು ಅಂತ ಕೇಳೋದು. ದೇವರು ಅಲ್ಲಾಹನ ಹೆಸರಿನಲ್ಲಿ ದಾನ ಕೊಟ್ಟಿದ್ದು ದೇಶದಲ್ಲಿ ಎಷ್ಟಿದೆ?. ಕರ್ನಾಟಕದಲ್ಲಿ ದಾನ ಕೊಟ್ಟಿರೋದು ಎಷ್ಟು ಎಂದು ಪ್ರಶ್ನಿಸಿದರು.ಇವತ್ತು ಜಮೀರ್ ಅಹಮದ್ ಖಾನ್ ಅದಾಲತ್ ಮಾಡಿ ರೈತರ ಜಮೀನಿಗೆ ನೋಟಿಸ್ ಕೊಟ್ಟಿದ್ದಾರೆ. ಈ ಕಾನೂನು ಮಾಡಿದ್ದು ಯಾರು?, 1955ರಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆ ಮಾಡಿದೆ. ಹಿಂದೆ ಇಂತಹ ಕಾನೂನು ಬ್ರಿಟಿಷರು ಮಾಡಿರಲಿಲ್ಲ. ಬ್ರಿಟಿಷರ ಕಾಲದಲ್ಲಿ ನಮ್ಮ ಜಮೀನಿನ ಹಕ್ಕು ಕೇಳಲು ಸಿವಿಲ್ ಕೋರ್ಟ್‌ನಲ್ಲಿ ಕೇಳುವ ಹಕ್ಕಿತ್ತು. ಕಾಂಗ್ರೆಸ್‌ನವರು ಮಾಡಿದ ವಕ್ಫ್ ಕಾನೂನಿನಲ್ಲಿ ಸಿವಿಲ್ ಕೋರ್ಟ್, ಹೈಕೋರ್ಟ್, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವಂತಿಲ್ಲ ಎಂದರು.ವಕ್ಫ್ ಟ್ರಿಬ್ಯುನಲ್‌ಗೆ ಹೋಗಬೇಕು. ಯಾಕೆ ಒಂದು ಕೋಮಿನ ಪ್ಲೀಸ್ ಮಾಡೋಕೆ, ಅಪಿಜ್ಮೆಂಟ್ ಪೊಲಿಟಿಕ್ಸ್ ಮಾಡೋಕೆ, ಒರಿಜಿನಲ್ ವಕ್ಫ್ ಆಸ್ತಿ ಗೊತ್ತಾಗಬೇಕು, ವಕ್ಫ್ ಆಸ್ತಿ ತಿಂದು ಹಾಕುವ ನಿಮ್ಮಂತಹವರ ಲ್ಯಾಂಡ್ ಮಾಫಿಯಾ ನಿಲ್ಲಬೇಕು. ವಕ್ಫ್ ಆಸ್ತಿ ಸಂರಕ್ಷಣೆಯೂ, ರಾಷ್ಟ್ರೀಕರಣವೂ ಆಗಬೇಕು. ಇಂದಿರಾಗಾಂಧಿ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ರು. ಬಡವರಿಗೆ ನ್ಯಾಯ ಸಿಗಲ್ಲ ಅಂತ ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ರು. ವಕ್ಫ್ ಆಸ್ತಿಯಿಂದ ಯಾವ ಬಡವನಿಗೆ ಅನುಕೂಲ ಆಗಿದೆ ಹೇಳಿ. ಲ್ಯಾಂಡ್ ಮಾಫಿಯಾ, ಬಿಲ್ಡರ್ಸ್, ದೇವರ ಹೆಸರಿನಲ್ಲಿ ಭೂ ಮಾಫಿಯಾ ಮಾಡಿದ್ದಾರೆ ಇದು ರಕ್ಷಣೆ ಆಗಬೇಕು ಎಂದು ಒತ್ತಾಯಿಸಿದರು.