ಹಾನಗಲ್ಲ ತಾಲೂಕು ಮಹಿಳಾ ಸಹಕಾರ ಪತ್ತಿನ ಸಂಘ ನಿಯಮಿತದ ರಜತ ಮಹೋತ್ಸವವನ್ನು ಹಾವೇರಿ ಜಿಲ್ಲಾ ಸಹಕಾರಿ ಯುನಿಯನ್ ಸಿಇಓ ಸವಿತಾ ಹಿರೇಮಠ ಉದ್ಘಾಟಿಸಿದರು.

ಹಾನಗಲ್ಲ: ಮಹಿಳೆ ಅಬಲೆ ಎಂಬ ಮಾತೀಗ ದೂರವಾಗಿ ಕ್ರಿಯಾಶೀಲತೆ, ಶಿಸ್ತಿಗೆ ಹೆಸರಾಗಿ ಸಂಘಟನೆಯಲ್ಲಿ ಸೈ ಎನಿಸಿಕೊಂಡು ಸಹಕಾರ ತತ್ವದ ಪ್ರತಿಪಾದಕಿಯಾಗಿ ಸಮಾಜಮುಖಿಯಾಗಿದ್ದಾಳೆ ಎಂದು ಹಾವೇರಿ ಜಿಲ್ಲಾ ಸಹಕಾರಿ ಯುನಿಯನ್ ಸಿಇಓ ಸವಿತಾ ಹಿರೇಮಠ ತಿಳಿಸಿದರು. ಹಾನಗಲ್ಲಿನಲ್ಲಿ ಹಾನಗಲ್ಲ ತಾಲೂಕು ಮಹಿಳಾ ಸಹಕಾರ ಪತ್ತಿನ ಸಂಘ ನಿಯಮಿತದ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಸಿ ಮಾತನಾಡಿದ ಅವರು, ನಿಂದನೆ-ವಂದನೆ ಎರಡನ್ನೂ ಸಮನಾಗಿ ಸ್ವೀಕರಿಸಿ ಕೌಟುಂಬಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ಯಶಸ್ಸಿಯಾಗುವವಳು ಮಹಿಳೆಯಾಗಿದ್ದಾಳೆ. ಈಗ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯದ್ದೇ ಮೇಲುಗೈ. ಬದುಕು ಬವಣೆಗಳ ನಡುವೆ ವ್ಯವಹಾರ ವಹಿವಾಟಿನಲ್ಲಿ ಚೌಕಾಸಿ ಮೂಲಕ ಸತ್ಯ ಶೋಧ ಮಾಡುವ ಶಿಸ್ತಿನ ಶಕ್ತಿ ಮಹಿಳೆಗಿದೆ. ಯಾವುದನ್ನೂ ಏಕಾ ಏಕಿ ಒಪ್ಪಿಕೊಳ್ಳದೆ ಪರಾಮರ್ಶಿಸುವ ಶಕ್ತಿ ಅವಳಿಗಿದೆ. ಇತ್ತೀಚೆಗಂತೂ ಮಹಿಳೆ ಬಹಳಷ್ಟು ಆರ್ಥಿಕ ಶಿಸ್ತಿಗೆ ಒಳಪಟ್ಟು ಎಲ್ಲರ ಪ್ರಶಂಸೆಗೆ ಪಾತ್ರಳಾಗಿದ್ದಾಳೆ. ನಿಂದನೆ-ವಂದನೆ ಯಾವುದೇ ಇರಲಿ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಕಾಣುತ್ತಾಳೆ. ಸಂಘಟನೆಯಲ್ಲಿಯೂ ಈಗ ಮಹಿಳೆಯೇ ಮುಂದು ಎಂಬುದರಲ್ಲಿ ಸಂದೇಹವಿಲ್ಲ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಶಾಂತಕ್ಕ ಹೊಳಲದ, ಸಹಕಾರಿಗಳು ಸಾಲ ಮರುಪಾವತಿಯಲ್ಲಿ ಪ್ರಾಮಾಣಿಕತೆ ಉಳ್ಳವರಾಗಬೇಕು. ಆರ್ಥಿಕ ಸಂಸ್ಥೆಗಳ ಬೆಳವಣಿಗೆಯಲ್ಲಿ ನಿರ್ದೇಶಕರು ಹಾಗೂ ಸಾಲಗಾರರು ಅತ್ಯಂತ ನಿಷ್ಠೆಯಿಂದ ಸಂಸ್ಥೆಯ ಹಿತಕ್ಕೆ ಶ್ರಮಿಸಬೇಕು. ಸಹಕಾರ ತತ್ವದ ಪಾಲನೆಯೇ ಸಂಘದ ನಿಜವಾದ ಅಭಿವೃದ್ಧಿಗೆ ಪೂರಕ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಸಹಕಾರಿ ಸಂಘದ ಸವಣೂರು ಎಆರ್ ಸಂಜೀವ ಸುಣಗಾರ, ಸಹಕಾರಿ ಸಂಘಗಳು ಆರಂಭವಾಗುತ್ತಲೇ ಹಲವು ಏಳು ಬೀಳುಗಳನ್ನು ಅನುಭವಿಸುತ್ತವೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುನ್ನಡೆದರೆ ಮಾತ್ರ ಸಂಘ ಬೆಳೆಯಲು ಸಾಧ್ಯ. ಕೆಲವು ಸಂಘಗಳು ಅಸಂಘಟನೆಯಿಂದ ಆರಂಭದಲ್ಲಿಯೇ ಕುಸಿದು ಬೀಳುತ್ತವೆ. ಮಹಿಳಾ ಸಂಘಗಳ ಸ್ವಾವಲಂಬನೆಗೆ ಹಾನಗಲ್ಲಿನ ಮಹಿಳಾ ಸಹಕಾರ ಪತ್ತಿನ ಸಂಘ ಮಾದರಿಯಾಗಿದ್ದು, ಉತ್ತರೋತ್ತರ ಬೆಳವಣಿಗೆಗೆ ಎಲ್ಲ ಆಡಳಿತ ಮಂಡಳಿ ಹಾಗೂ ಸದಸ್ಯರ ಪೂರ್ಣ ಪ್ರಮಾಣದ ಸಹಕಾರ ಬೇಕು ಎಂದರು.ಸನ್ಮಾನ: ಇದೇ ಸಂದರ್ಭದಲ್ಲಿ ಸಂಘದ ಬೆಳವಣಿಗೆಗೆ ಸಹಕರಿಸಿದ ಗಣ್ಯರಾದ ಜಯಶ್ರೀ ಜಳಕಿ, ವಿಜಯಲಕ್ಷ್ಮಿ ಗುಡಗುಡಿ, ನೀಲಮ್ಮ ಉದಾಸಿ, ಮಾದೇವಕ್ಕ ಮುತ್ತಳ್ಳಿ, ಮಧುಮತಿ ಪೂಜಾರ, ಶಾಂತಕ್ಕ ಹೊಳಲದ, ಲಕ್ಷ್ಮೀಬಾಯಿ ಕುಲಕರ್ಣಿ, ಪುಷ್ಪಾ ಬಸ್ತಿ, ಸುಮಂಗಲಾ ಸುಕಾಲಿ, ಶಾರದಾ ಉದಾಸಿ, ಸುರೇಶ ರಾಯ್ಕರ ಅವರನ್ನು ಸನ್ಮಾನಿಸಲಾಯಿತು. ಹಾನಗಲ್ಲ ಸಿಡಿಓ ಪುಷ್ಪಾವತಿ ಸಂಗಣ್ಣನವರ ಅತಿಥಿಗಳಾಗಿದ್ದರು. ವನಜಾಕ್ಷಿ ಅಕ್ಕಿವಳ್ಳಿ, ರೇಖಾ ಶೆಟ್ಟರ, ವಿಜಯಲಕ್ಷ್ಮಿ ಹಳ್ಳೀಕೇರಿ, ಅಕ್ಕಮ್ಮ ಕುಂಬಾರಿ, ಆಶಾ ಕಠಾರಿ, ಜ್ಯೋತಿ ಬೆಲ್ಲದ, ಲಕ್ಷ್ಮಿ ಹರಿಜನ ಲಕ್ಷ್ಮಿ ಹೆಗಡೆ, ಅನಿಲ ಆಲದಕಟ್ಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿರ್ಮಲಾ ಮಹಾರಾಜಪೇಟ ಪ್ರಾರ್ಥನೆ ಹಾಡಿದರು. ರೇಖಾ ಶೆಟ್ಟರ ಕಾರ್ಯಕ್ರಮ ನಿರೂಪಿಸಿದರು. ವನಜಾಕ್ಷಿ ಅಕ್ಕಿವಳ್ಳಿ ವಂದಿಸಿದರು.