ರಾಜಕಾರಣಿಗೆ ಅಧಿಕಾರದ ಅಹಂ ಇರಬಾರದು: ಶಾಸಕ ಚಂದ್ರಪ್ಪ

KannadaprabhaNewsNetwork | Published : Apr 24, 2025 12:31 AM

ಸಾರಾಂಶ

A politician should not have the ego of power: MLA Chandrappa

-೧.೫೦ ಕೋಟಿ ರು. ವೆಚ್ಚದ ಡಾಂಬರ್‌ ರಸ್ತೆಗೆ ಭೂಮಿ ಪೂಜೆ

--

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ರಾಜಕಾರಣಿಗಳಿಗೆ ಅಧಿಕಾರದ ಅಹಂ ಇರಬಾರದು. ಸಿಕ್ಕ ಅವಕಾಶವನ್ನು ಜನರ ಸೇವೆಗೆ ಮೀಸಲಿಟ್ಟು ಕೆಲಸ ಮಾಡಬೇಕು. ಅಂತಹ ದಾರಿಯಲ್ಲಿ ನಾನು ನಡೆಯುತ್ತಿದ್ದೇನೆ ಎಂದು ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.

ಗುಡ್ಡಸಾಂತೇನಹಳ್ಳಿ ಗ್ರಾಮದಲ್ಲಿ ತಿರುಮಲಾಪುರದಿಂದ ಗುಡ್ಡದಸಾಂತೇನಹಳ್ಳಿವರೆಗೂ ಒಂದು ಕೋಟಿ ಐವತ್ತು ಲಕ್ಷ ರೂ.ವೆಚ್ಚದಲ್ಲಿ ನೂತನ ಟಾರ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷದ ಸರ್ಕಾರವಿದ್ದರೂ ಸಾಕಷ್ಟು ಅನುದಾನ ತಂದು ಕೋಟಿ ರೂ.ಗಳ ಯೋಜನೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ಕೈಗೆತ್ತಿಕೊಂಡಿದ್ದೇನೆ. ದೊಡ್ಡೊಟ್ಟೆ ರಂಗನಾಥಸ್ವಾಮಿ ದೇವಸ್ಥಾನದ ರಸ್ತೆಗೆ ಒಂದು ಕೋಟಿ ರೂ. ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಒಂದು ಕೋಟಿ ರೂ.ಖರ್ಚು ಮಾಡಿ ಕೆರೆ ಏರಿ ಎತ್ತರಿಸಿ, ಬ್ರಿಡ್ಜ್ ಕಟ್ಟಿಸುತ್ತೇನೆಂದು ತಿಳಿಸಿದರು.

ಡಿಸೆಂಬರ್‌ ತಿಂಗಳೊಳಗೆ ಆ ಯೋಜನೆಯಿಂದ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುತ್ತೇನೆ. ವಾಣಿ ವಿಲಾಸ ಸಾಗರದಿಂದ ನೀರು ತಂದು ಶುದ್ಧ ಕುಡಿವ ನೀರನ್ನು ಒದಗಿಸುತ್ತೇನೆ. ಅದಕ್ಕಾಗಿ ಈಗಾಗಲೇ ಪೈಪ್‌ಲೈನ್‌ ಕಾಮಗಾರಿ ಮುಗಿದಿದೆ.

ವಿದ್ಯುತ್‌ ಕೊರತೆ ನೀಗಲು ಹಲವು ಕ್ಷೇತ್ರದ ಹಲವು ಕಡೆ ವಿದ್ಯುತ್‌ ಕೇಂದ್ರಗಳನ್ನು ನಿರ್ಮಾಣ ಮಾಡುವ ಕೆಲಸ ತ್ವರಿತವಾಗಿ ಆಗುತ್ತಿದೆ. ಚಿಕ್ಕಜಾಜೂರು ಬಳಿಯ ಕೋಟೆಹಾಳ್‌ ಹಾಗೂ ಭರಮಸಾಗರ ಸಮೀಪದ ಅಡವಿಗೊಲ್ಲರ ಹಟ್ಟಿಯಲ್ಲಿ ಈ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರತಿ ವಿದ್ಯುತ್‌ ಕೇಂದ್ರಕ್ಕೆ ೨೦ ರಿಂದ ೨೨ಕೋಟಿ ಅನುದಾನ ನೀಡಲಾಗಿದೆ ಎಂದರು.

ಗ್ರಾಪಂ ಸದಸ್ಯರಾದ ಶಿವಪ್ಪ, ರಮೇಶ್, ತಿಮ್ಮಣ್ಣ, ಪಾಂಡುರಂಗಪ್ಪ, ಆನಂದಪ್ಪ, ತಿಪ್ಪೇಸ್ವಾಮಿ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

--

ಫೋಟೋ: ತಿರುಮಲಾಪುರದಿಂದ ಗುಡ್ಡದಸಾಂತೇನಹಳ್ಳಿವರೆಗೂ ಒಂದು ಕೋಟಿ ಐವತ್ತು ಲಕ್ಷ ರೂ. ವೆಚ್ಚದಲ್ಲಿ ನೂತನ ಟಾರ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿದ ಶಾಸಕ ಡಾ.ಎಂ.ಚಂದ್ರಪ್ಪ.

Share this article