ಸಮುದ್ರದ ಹೊಟ್ಟೆಯಲ್ಲಿ ಬಂದರು: ಕೇಣಿಯ ಭವಿಷ್ಯ ಪ್ರಶ್ನಾರ್ಥಕ

KannadaprabhaNewsNetwork |  
Published : Feb 26, 2026, 02:30 AM IST
ಸಮುದ್ರಕ್ಕಿಳಿದು ಪ್ರತಿಭಟನೆ  | Kannada Prabha

ಸಾರಾಂಶ

ದಿನನಿತ್ಯದ ಕೂಳಿಗಾಗಿ ಒಂದೆಡೆ ಸಮುದ್ರದ ಮಡಿಲಿನಲ್ಲಿ ಹೋರಾಟ. ಮತ್ತೊಂದಡೆ ಆ ಕೂಳನ್ನೆ ಕಸಿದುಕೊಳ್ಳುವ ಆತಂಕದಲ್ಲಿ ನಿದ್ದೆ ಬಿಟ್ಟ ಜನತೆ. ಈ ಎಲ್ಲ ಆರ್ತನಾದಕ್ಕೆ ಸಾಕ್ಷಿಯಾಗಿರುವುದು ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಗ್ರೀನ್ ಫೀಲ್ಡ್ ಬಂದರು.

ಕ್ಯಾಂಪೇನ್ ಸ್ಟೋರಿ-2

₹4118 ಕೋಟಿ ಬಂದರು ಯೋಜನೆಗೆ ಕೇಣಿಯಲ್ಲಿ ತಣ್ಣಗಾಗದ ಆಕ್ರೋಶ ಜ್ವಾಲೆರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾದಿನನಿತ್ಯದ ಕೂಳಿಗಾಗಿ ಒಂದೆಡೆ ಸಮುದ್ರದ ಮಡಿಲಿನಲ್ಲಿ ಹೋರಾಟ. ಮತ್ತೊಂದಡೆ ಆ ಕೂಳನ್ನೆ ಕಸಿದುಕೊಳ್ಳುವ ಆತಂಕದಲ್ಲಿ ನಿದ್ದೆ ಬಿಟ್ಟ ಜನತೆ. ಈ ಎಲ್ಲ ಆರ್ತನಾದಕ್ಕೆ ಸಾಕ್ಷಿಯಾಗಿರುವುದು ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿದ ಗ್ರೀನ್ ಫೀಲ್ಡ್ ಬಂದರು. ಉಕ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯ ಪ್ರದೇಶದಲ್ಲಿ ಕಳೆದೊಂದು ವರ್ಷದಿಂದ ನಿರಂತರ ಹೋರಾಟ, ಆಕ್ರೋಶದ ಕೂಗು ಕೇಳಿ ಬರುತ್ತಿದೆ. ಜಿಲ್ಲಾಡಳಿತ ಹಾಗೂ ಬಂದರು ಕಾಮಗಾರಿಯ ಗುತ್ತಿಗೆ ಪಡೆದ ಜೆಎಸ್‌ಡಬ್ಲ್ಯೂ ಕಂಪನಿ ಸಾರ್ವಜನಿಕರಿಗೆ ಅನೇಕ ಆಶ್ವಾಸನೆ ನೀಡಿ, ಬಂದರು ಪರಿಸರ ಪೂರಕವಾಗಿದೆ ಎಂದು ಹೇಳುತ್ತಲೆ ಬಂದಿದೆ. ಆದರೆ ಸಂತ್ರಸ್ತ ಪ್ರತಿಭಟನಾಕಾರರು ಮಾತ್ರ ನಿಮ್ಮ ಯಾವುದೇ ಸಮಜಾಯಿಷಿ ಬೇಡ ಎಂದು ಉಗ್ರ ಹೋರಾಟವನ್ನು ಮಾಡುತ್ತಲೆ ಬಂದು ಸರಕಾರಕ್ಕೆ ಚುರುಕು ಮುಟ್ಟಿಸಿದ್ದಾರೆ.ರಾಜ್ಯ ಸರ್ಕಾರವು 2022-23ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಜಲ ಸಾರಿಗೆ ಮಂಡಳಿ ಮೂಲಕ ಕೇಣಿಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ₹4118 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಆದರೆ ಕಳೆದ 10 ತಿಂಗಳ ಹಿಂದೆ ಬಂದರು ಕಾಮಗಾರಿಯ ಸಮುದ್ರ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಮುಂದಾಗುತ್ತಿದ್ದಂತೆ ಸುತ್ತಮುತ್ತಲಿನ ನಾಗರಿಕರು ಹಾಗೂ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು.ಬಂದರು ಬೇಡ ಎನ್ನುವ ಸಂತ್ರಸ್ತರು:ಉದ್ದೇಶಿತ ಬಂದರು ಯೋಜನೆ ಈ ಪ್ರದೇಶದಲ್ಲಿ ಸ್ಥಾಪಿತವಾದರೆ ನಮ್ಮ ಮೀನುಗಾರಿಕೆ ವೃತ್ತಿ ಮೇಲೆ ತೀವ್ರ ಪರಿಣಾಮ ಬೀರಲಿದೆ. ಜೊತೆಗೆ ಮನೆ ಕಳೆದುಕೊಂಡು ನಿರ್ಗತಿಕರಾಗುತ್ತೇವೆ ಎಂಬ ಆತಂಕ ಇಲ್ಲಿನ ಸ್ಥಳೀಯರದ್ದು. ಆದರೆ ಗುತ್ತಿಗೆ ಪಡೆದ ಜೆಎಸ್‌ಡಬ್ಲ್ಯೂ ಕಂಪನಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿಮ್ಮ ಜತೆ ಸದಾ ಇರುತ್ತೇವೆ. ಯಾವುದೇ ಆತಂಕ ಬೇಡ ಎಂದು ಸಮಜಾಯಿಷಿ ನೀಡುತ್ತಲೇ ಬರುತ್ತಿದೆ.ಜನಪ್ರತಿನಿಧಿಗಳು ಹೇಳೋದೇನು?:ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್ ಈ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಭರವಸೆ ನೀಡುತ್ತಿಲ್ಲ. ಬದಲಾಗಿ ಮೀನುಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎನ್ನುತ್ತಾರೆ.ಶಾಸಕ ಆರ್.ವಿ. ದೇಶಪಾಂಡೆ, ಮೀನುಗಾರರರಿಗೆ ಈ ಯೋಜನೆಯಿಂದ ತೊಂದರೆಯಾದಲ್ಲಿ ನಾನು ಕೂಡ ವಿರೋಧಿಸುತ್ತೇನೆ ಎಂದಿದ್ದಾರೆ.ಸಾರ್ವಜನಿಕರು, ಮೀನುಗಾರ ಬದುಕು ಹಾಗೂ ವಾಸಿಸಲು ಸಮಸ್ಯೆಯಾಗದಂತೆ ಯೋಜನೆ ಮಾಡಿದರೆ ನಮ್ಮ ವಿರೋಧ ಇಲ್ಲ. ಆದರೆ ಅವರನ್ನು ನಿರ್ಗತಿಕರನ್ನಾಗಿ ಮಾಡಿ ನೀವು ಯೋಜನೆ ತರುತ್ತೀರಿ ಎಂದಾದರೆ ಯಾವುದೇ ಕಾರಣಕ್ಕೂ ಒಪ್ಪಲ್ಲ. ಮೀನುಗಾರನ್ನು ಬದುಕಲು ಬಿಡಿ ಎನ್ನುತ್ತಾರೆ ಸ್ಪಂದನಾ ಫೌಂಡೇಶನ್ ಅಧ್ಯಕ್ಷ ಗೋಪಾಲಕೃಷ್ಣ ನಾಯಕ.ಕಳೆದ ವರ್ಷದಿಂದ ಯೋಜನೆಯನ್ನು ವಿರೋಧಿಸಿ ಹತ್ತಾರು ಹೋರಾಟ ಮಾಡುತ್ತಲೇ ಬಂದಿದ್ದೇವೆ. ನಮ್ಮ ಸಹನೆಗೂ ಒಂದು ಮೀತಿ ಇದೆ. ನಮಗೆ ಬದುಕಲು ಅವಕಾಶ ಕೊಡಿ. ಗಂಜಿ ಊಟ ಮಾಡಿಕೊಂಡಾದರೂ ನೆಮ್ಮದಿಯಿಂದ ಜೀವನ ಸಾಗಿಸುತ್ತೇವೆ ಎಂದು ಬಂದರು ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಲೇಗಾರ ತಿಳಿಸಿದ್ದಾರೆ.ನಿರಂತರ ಧರಣಿಬಂದರು ಇಲ್ಲಿ ಬೇಡ ಎಂದು ಕಳೆದೊಂದು ವರ್ಷದಿಂದ ಹೋರಾಟ ನಡೆಯುತ್ತಲೇ ಬಂದಿದೆ. ಸಾವಿರಾರು ಪತ್ರ ಚಳವಳಿ, ಮೀನುಗಾರ ಸಾವಿರಾರು ಮಹಿಳೆಯರು ಸಮುದ್ರಕ್ಕೆ ಧುಮುಕಿ, ಅಂಕೋಲಾ ಬಂದ್‌ ಮಾಡಿ ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಸಾರ್ವಜನಿಕ ಅಹವಾಲು ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡು ವಿರೋಧಿಸಿದ್ದಾರೆ. ಜೊತೆಗೆ ಅಂಕೋಲಾದ ತಹಸೀಲ್ದಾರ ಕಚೇರಿ ಎದುರು ಒಂದು ತಿಂಗಳ ಕಾಲ ನಿರಂತರ ಧರಣಿ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಾಜಿ ಜಯಂತಿ ವೇಳೆ ಗಲಾಟೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ
118ನೇ ದಿನದಲ್ಲಿ ಕಾರ್ಖಾನೆ ಅನಿರ್ದಿಷ್ಟಾವಧಿ ಧರಣಿ